ಹುಬ್ಬಳ್ಳಿ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಹಲವು ವಿವಾದಾತ್ಮಕ ವಿಚಾರಗಳನ್ನಿಟ್ಟುಕೊಂಡು ಆಡಳಿತ ಪಕ್ಷದ ನಾಯಕರು ಹಾಗೂ ವಿಪಕ್ಷಗಳ ನಾಯಕರು ಒಬ್ಬರ ಮೇಲೊಬ್ಬರು ಆರೋಪಗಳನ್ನು ಮಾಡುತ್ತಲೇ ಇದ್ದಾರೆ. ಇದೀಗ ಉರಿಗೌಡ, ನಂಜೇಗೌಡರ ವಿಚಾರಗಳು ಮುನ್ನೆಲೆಗೆ ಬಂದಿದ್ದು, ವಿಪಕ್ಷಗಳು ಇದನ್ನೇ ಅಸ್ತ್ರವಾಗಿಸಿಕೊಂಡು ಆಡಳಿತ ಪಕ್ಷದ ವಿರುದ್ಧ ಕೆಂಡಕಾರುತ್ತಿವೆ.

ಇದಕ್ಕೆ ಆಡಳಿತ ಪಕ್ಷದ ನಾಯಕರು ಕೂಡ ತಿರುಗೇಟು ಕೊಡುತ್ತಲೇ ಇದ್ದಾರೆ. ಹಾಗಾದರೆ ಈ ಬಗ್ಗೆ ಶೋಭಾ ಕರಂದ್ಲಾಜೆ ಏನು ಹೇಳಿದ್ದಾರೆ ನೋಡೋಣ ಬನ್ನಿ.

ಉರಿಗೌಡ, ನಂಜೇಗೌಡ ಸ್ವಾಭಿಮಾನಿಗಳು, ಅವರು ಧರ್ಮಕ್ಕಾಗಿ ಹೋರಾಟ ಮಾಡಿದವರಾಗಿದ್ದಾರೆ. ನಮ್ಮ ದೇವಸ್ಥಾನ ಉಳಿಸುವುದಾಕ್ಕಾಗಿ ಹೋರಾಟ ಮಾಡಿದ್ದಾರೆ. ಹಿಂದುಗಳ ಕ್ರೈಸ್ತ ನರಮೇಧ ಖಂಡಿಸಿ ಹೋರಾಡಿದ್ದಾರೆ. ಹೀಗೆ ಉರಿಗೌಡ ನಂಜೇಗೌಡರ ಬಗ್ಗೆ ಹೆಮ್ಮೆಯ ಇದೆ ಎಂದು ಕಾಂಗ್ರೆಸ್ ಜೆಡಿಎಸ್ ಆರೋಪಕ್ಕೆ ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ ಹುಬ್ಬಳ್ಳಿಯಲ್ಲಿ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್‌, ಬಿಜೆಪಿ ವಿರುದ್ಧ ವಾಗ್ದಾಳಿ

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಮಂಗಳೂರಿನಲ್ಲಿ ಕ್ರೈಸ್ತರ ಹಾಗೂ ಕೊಡವರ ನರಮೇಧವನ್ನು ಕೊಡಗಿನಲ್ಲಿ ಮಾಡಿದ್ದಾರೆ. ನಂದಿ ಬೆಟ್ಡದ ಮೇಲೆ ಹಿಂದುಗಳನ್ನು ಕೊಂದು ಹಾಕಿದ್ದಾರೆ. ಕನ್ನಡ ವಿರೋಧಿಯಾಗಿದ್ದವರ ವಿರುದ್ಧ ಸೆಟೆದು ನಿಂತವವರು ನಂಜೇಗೌಡ ಉರಿಗೌಡರು ಎಂದು ಜೆಡಿಎಸ್‌, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಸುವರ್ಣ ಮಂಡ್ಯ ಪುಸ್ತಕ 2006ರಲ್ಲಿ ದೇವೇಗೌಡರು ಬಿಡುಗಡೆ ಮಾಡಿದರು. ಕುವೆಂಪು ಅವರ ಶಿಷ್ಯ ಡಾ. ಜೇವೇಗೌಡರು ಈ ಪುಸ್ತಕವನ್ನು ಬರೆದವರಾಗಿದ್ದಾರೆ. ಆಗ ಇದನ್ನು ಒಂದು ಸಂಶೋಧನಾತ್ಮಕ ಪುಸ್ತಕವನ್ನಾಗಿ ಮಾಡಿದರು. ಬೇರೆ ಬೇರೆ ರೀತಿಯಲ್ಲಿ ಮಾಹಿತಿ ಸಂಗ್ರಹ ಮಾಡಿ ಟಿಪ್ಪುವಿನ ಕಾಲದಲ್ಲಿ ನಮ್ಮ ಪರಿಸ್ಥಿತಿ ಹೇಗಿತ್ತು, ಉರಿಗೌಡ ನಂಜೇಗೌಡ ಅವರ ಹೋರಾಟದ ಉದ್ದೇಶ ಏನಾಗಿ ಎನ್ನುವುದನ್ನು ಆ ಪುಸ್ತಕದಲ್ಲಿ ಜೇವೇಗೌಡರು ಸವಿವರವಾಗಿ ತಿಳಿಸಿದ್ದಾರೆ.

ಪುಸ್ತಕವನ್ನು ಬಿಡುಗಡೆ ಮಾಡಿದವರು ದೇವೇಗೌಡರು. ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಸಿಎಂ ಆದರು ಕುಮಾರಸ್ವಾಮಿ. ಉರಿಗೌಡ, ನಂಜೇಗೌಡ ದೇಶಕ್ಕಾಗಿ ಹೋರಾಟ ಮಾಡಿದವರು ಅಂತಾ ನಾವು ಹೇಳಿದ್ದು. ವೋಟ್ ಬ್ಯಾಂಕ್‌ಗೋಸ್ಕರ ಬಿಜೆಪಿ ಇವರ ಹೆಸರನ್ನು ಬಳಸುತ್ತಿದೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಆರೋಪ ಮಾಡುತ್ತಿವೆ. ಇದು ಒಂದು ರೀತಿಯಲ್ಲಿ ಒಕ್ಕಲಿಗರಿಗೆ ಅವಮಾನ ಮಾಡುವ ರೀತಿಯಲ್ಲಿ ಬಿಜೆಪಿ ಬಗ್ಗೆ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪುಸ್ತಕದಲ್ಲಿ ಉಲ್ಲೇಖಿಸಲಾದ ಅಂಶಗಳು

ಮಂಡ್ಯ ಜಿಲ್ಲೆ ರಚನೆಯಾಗಿ 1989ಕ್ಕೆ 50 ವರ್ಷಗಳು ಕಳೆದ ಹಿನ್ನೆಲೆ ನಡೆದ ಮಹೋತ್ಸವದಲ್ಲಿ ಈ ಪುಸ್ತಕ ಮಂಡನೆಯಾಗಿತ್ತು. 1994 ರಲ್ಲಿ ನಡೆದ 63ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸುವರ್ಣ ಮಂಡ್ಯ ಪುಸ್ತಕವನ್ನು ಬಿಡುಗಡೆ ಆಯಿತು. ಆದರೆ ಪುಸ್ತಕದಲ್ಲಿ ಟಿಪ್ಪುವನ್ನ ಕೊಂದಿದ್ದು ಉರಿಗೌಡ ನಂಜೇಗೌಡ ಎಂಬ ವಿಚಾರ ಪ್ರಸ್ತಾಪವಾಗಿಲ್ಲ. ಟಿಪ್ಪು ವಿರುದ್ದ ಉರಿಗೌಡ ಮತ್ತು ನಂಜೇಗೌಡ ಸೆಟೆದು ನಿಂತರು ಎಂದು ಉಲ್ಲೇಖಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಮಂಡ್ಯಕ್ಕೆ ಬಂದ ವೇಳೆ ಅವರ ಸ್ವಾಗತಕ್ಕಾಗಿ ಮಾಡಿದ ದ್ವಾರ ಬಾಗಿಲಿಗೆ ಉರಿಗೌಡ, ನಂಜೇಗೌಡ ಹೆಸರನ್ನು ಇಡಲಾಗಿತ್ತು. ಆದರೆ ಅಂದು ರಾತ್ರೋ ರಾತ್ರಿ ಅದನ್ನು ತೆರೆವುಗೊಳಿಸಿ, ಬಾಲಗಂಗಾಧರನಾಥ ಸ್ವಾಮೀಜಿ ದ್ವಾರ ಬಾಗಿಲು ಎಂದು ಬದಲಾಯಿಸಲಾಗಿತ್ತು. ನಂತರ ಸಿ.ಟಿ. ರವಿ ಕೂಡ ಟಿಪ್ಪು ಕೊಂದದ್ದು ಉರಿಗೌಡ, ನಂಜೇಗೌಡ ಎಂದು ಹೆಸರು ಬಳಸಿ ವಿವಾದಕ್ಕೆ ಒಳಗಾಗಿದ್ದರು.

ಜೆಡಿಎಸ್, “ಕೈ” ನಾಯಕರಿಂದ ಆಕ್ರೋಶ

ಇದನ್ನೇ ಅಸ್ತ್ರವಾಗಿಸಿಕೊಂಡ ಜೆಡಿಎಸ್, ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ವಾಕ್ಸಮರಕ್ಕೆ ಮುಂದಾದರು. ಎಚ್‌.ಡಿ.ಕುಮಾರಸ್ವಾಮಿ ಇದನ್ನು ಒಕ್ಕಲಿಗರ ಮೇಲೆ ಬಿಜೆಪಿ ವಕ್ರದೃಷ್ಟಿ ಎಂದು ಹೇಳಿದ್ದರು. ಬಿಜೆಪಿಯವರು ಇತಿಹಾಸದಲ್ಲೇ ಇಲ್ಲದ ವ್ಯಕ್ತಿಗಳನ್ನು ಸೃಷ್ಟಿಸಿ, ಒಕ್ಕಲಿಗ ಸಮುದಾಯಕ್ಕೆ ಅಗೌರವ ತಂದಿದ್ದಾರೆ. ಒಕ್ಕಲಿಗರು ಇದನ್ನು ವಿರೋಧ ಮಾಡಬೇಕು ಎಂದಿದ್ದರು.

ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿ ಒಕ್ಕಲಿಗರನ್ನು ಓಲೈಸುವ ಕೆಲಸದ ಮಾಡಿರುವ ಬಿಜೆಪಿ, ಮತ್ತೊಂದೆಡೆ ಟಿಪ್ಪು ಕೊಲೆಯ ಕಳಂಕವನ್ನು ತಂದಿದೆ. ಈ ಮೂಲಕ ಸಮುದಾಯಕ್ಕೆ ಕಪ್ಪುಚುಕ್ಕೆ ಇಡಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.

ಬಳಿಕ ಬಿಜೆಪಿ ವಕ್ತಾರ ಸಿ.ಟಿ. ಮಂಜುನಾಥ್ ಮಂಡ್ಯದಲ್ಲೇ ಸ್ಫೋಟಕ ಸಾಕ್ಷ್ಯವನ್ನು ಬಿಡುಗಡೆ ಮಾಡಿದ್ದರು. 70 ವರ್ಷಗಳ ಹಿಂದಿನ ಲಾವಣಿ ಹಾಡನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ ಪರಂಪರಾಗತ ವೈರಿ ಗೌಡರು ತರಿದರು ಖಡ್ಗದಲ್ಲಿ ಎಂಬ ಪದವನ್ನು ಬಳಕೆ ಮಾಡಲಾಗಿತ್ತು. ಈ ಲಾವಣಿ ಹಾಡಿನ ಸಿಡಿಯನ್ನು ಕೆಪಿಸಿಸಿ ಕಚೇರಿ ಹಾಗೂ ಜೆಡಿಎಸ್ ಕೇಂದ್ರ ಕಚೇರಿಗೆ ಕೊರಿಯರ್ ಮಾಡುವುದರ ಮೂಲಕ ತಿರುಗೇಟು ನೀಡಿದ್ದರು.

error: Content is protected !!