ಕೊಪ್ಪಳ ಡಿಸೆಂಬರ್ 06 (ಕರ್ನಾಟಕ ವಾರ್ತೆ): ಮತದಾರರ ಪಟ್ಟಿ ಪರಿಷ್ಕರಣೆ-2023ರ ಸಂಬಂಧ ಜಿಲ್ಲೆಯ ಕೊಪ್ಪಳ, ಕನಕಗಿರಿ ಹಾಗೂ ಗಂಗಾವತಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರು ಡಿಸೆಂಬರ್ 06 ರಂದು ಭೇಟಿ ನೀಡಿ, ಬೂತ್ ಮಟ್ಟದ ಅಧಿಕಾರಿಗಳಿಂದ ನಡೆಸುತ್ತಿರುವ ಮನೆ ಮನೆ ಸಮೀಕ್ಷೆ ಕಾರ್ಯವನ್ನು ಖುದ್ದಾಗಿ ಪರಿಶೀಲನೆ ನಡೆಸಿದರು.
ಮತದಾರರು ತಮ್ಮ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿಕೊಳ್ಳಬೇಕು. ಬೂತ್ ಮಟ್ಟದ ಅಧಿಕಾರಿಗಳು ತಮ್ಮ ಮತಟ್ಟೆಯ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯಲ್ಲಿ ನೋಂದಾಯಿತರಾಗದ ಮತದಾರರನ್ನು, ಯುವ ಮತದಾರರನ್ನು ಮತ್ತು ವಿಶೇಷವಾಗಿ ವಿಕಲಚೇತನ ಹಾಗೂ ತೃತೀಯ ಲಿಂಗ ಮತದಾರರನ್ನು ನಿಯಮಾನುಸಾರ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಸ್ವೀಕೃತಿಯಾಗುವ ಅರ್ಜಿಗಳನ್ನು ಬೂತ್ ಮಟ್ಟದ ಅಧಿಕಾರಿಗಳು ಭಾರತ ಚುನಾವಣಾ ಆಯೋಗದ ಗರುಢ ಆ್ಯಪ್‌ನ ಮುಖಾಂತರ ಸಲ್ಲಿಸಬೇಕು. ಇದರಿಂದಾಗಿ ಸಾರ್ವಜನಿಕರು ಹಾಗೂ ಅಧಿಕಾರಿಗಳು ಸ್ವೀಕೃತಿಯಾಗುವ ಅರ್ಜಿಗಳ ಸ್ಥಿತಿಯ ಬಗ್ಗೆ ಮಾಹಿತಿಯನ್ನು ಪರಿಶೀಲಿಸಬಹುದು ಎಂದರು.
ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಾಗಿ ನಮೂನೆ-6, ತೆಗೆದುಹಾಕಲು ನಮೂನೆ-7 ಮತ್ತು ತಿದ್ದುಪಡಿ ಅಥವಾ ಸ್ಥಳಾಂತರಕ್ಕಾಗಿ ನಮೂನೆ-8ನ್ನು ಸಲ್ಲಿಸಲು ಡಿಸೆಂಬರ್ 08 ಕೊನೆಯ ದಿನಾಂಕವಾಗಿದ್ದು, ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲು ಸೂಚಿಸಿದರು.
ಮತದಾರರು ಅರ್ಜಿ ನಮೂನೆಗಳನ್ನು ಬೂತ್ ಮಟ್ಟದ ಅಧಿಕಾರಿಗಳಿಗೆ, ತಹಶೀಲ್ದಾರರಿಗೆ ಅಥವಾ ಸಹಾಯಕ ಆಯುಕ್ತರಿಗೆ ಸಲ್ಲಿಸಬಹುದು ಮತ್ತು ಈ ಅರ್ಜಿಗಳನ್ನು ಆನ್‌ಲೈನ್ ಮೂಲಕವೂ ಸಲ್ಲಿಸಲು ಅವಕಾಶ ವಿದ್ದು, ವೋಟರ್ ಹೆಲ್ಪ್ಲೈನ್ ಆ್ಯಪ್ ಮೂಲಕ ಅಥವಾ ಎನ್‌ವಿಎಸ್ಪಿ ಮೂಲಕ ಸಲ್ಲಿಸಬಹುದು ಎಂದರು.
ಭಾರತ ಚುನಾವಣಾ ಆಯೋಗದ ಉದ್ದೇಶದಂತೆ ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಸೇರ್ಪಡೆ ಮಾಡಲು ಹಾಗೂ ಅನರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಮತ್ತು ಮತದಾರರ ವಿವರಗಳಲ್ಲಿ ಉದಾಹರಣೆಗೆ ಹೆಸರು, ಭಾವಚಿತ್ರ, ವಯಸ್ಸು ಮತ್ತು ಇತ್ಯಾದಿ ನಮೂನೆಗಳಲ್ಲಿ ತಿದ್ದುಪಡಿಗಳನ್ನು ಸರಿಪಡಿಸಿ ದೋಷ ಮುಕ್ತ ಮತದಾರರ ಪಟ್ಟಿಗಳನ್ನು ತಯಾರಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿಗಳಾದ ಬಸವಣ್ಣೆಪ್ಪ ಕಲಶೆಟ್ಟಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಬೂತ್ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.