
ಜನಾಕರ್ಷಣೀಯವಾದ ತೋಟಗಾರಿಕಾ ಇಲಾಖೆಯ ಫಲಪುಷ್ಪ ಪ್ರದರ್ಶನ
ಕೊಪ್ಪಳ: ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ತೋಟಗಾರಿಕೆ ಫಲಪುಷ್ಪ ಪ್ರದರ್ಶನ ಮಳಿಗೆಯು ಸೂಜಿಕಲ್ಲಿನಂತೆ ಜನರನ್ನು ಸೆಳೆಯಿತು. ಜನರು ಉತ್ಸಾಹದಿಂದ ವೀಕ್ಷಿಸಿ ಮೊಬೈಲ್‌ಗಳಲ್ಲಿ ಫೋಟೋ ಸೆರೆಹಿಡಿದರು.
ವಿವಿಧ ಬಗೆಯ ಹೂ-ಹಣ್ಣುಗಳ ಮಾದರಿಗಳು ಗಮನ ಸೆಳೆಯುತ್ತಿವೆ. 4000 ವರ್ಷಗಳ ಇತಿಹಾಸ ಹೊಂದಿರುವ ಗಂಗಾವತಿ ತಾಲ್ಲೂಕಿನ ಚಿಕ್ಕ ಬೆಣಕಲ್ ಮಹಾಶಿಲಾ ತಾಣ ಮೋರೇರ ಬೆಟ್ಟದ ಮಹತ್ವ ಮತ್ತು ಇತಿಹಾಸ ತಿಳಿಸಲು ಸಾವಿರಾರು ಹೂಗಳನ್ನು ಜೋಡಿಸಿ ನಿರ್ಮಿಸಿದ್ದ ಮಾದರಿ ವಿಶೇಷವಾಗಿತ್ತು.

ಕೊಪ್ಪಳ ಜಿಲ್ಲೆಯ ಮಾದರಿಯನ್ನು ಸಹ ಹೂವಿನಲ್ಲಿ ವಿವಿಧ ಹೂಗಳನ್ನು ಜೋಡಿಸಿ ನಿರ್ಮಿಸಲಾಗಿದೆ. 50 ಮಾದರಿಯ ವಿವಿಧ ಬಣ್ಣದ ಗುಲಾಬಿ, ಜರ್ಬೇರಾ, ಸೇವಂತಿಗೆ, ಚೆಂಡೂ ಹೂ, ಕಾರ್ನೇಷೀಯನ್, ಲಿಲ್ಲಿ, ಪಿಟೋನಿಯಾ, ಜಿಪ್ಸೋಫಿಲಾ ಹಾಗೂ ವಿವಿಧ ಕುಂಡಲಗಳಲ್ಲಿ ಬೆಳೆದ ಅಲಂಕಾರಿಕ ಗಿಡಗಳಿಂದ ವಿವಿಧ ಮಾದರಿಗಳನ್ನು ಆಕರ್ಷಕವಾಗಿ ರಚಿಸಲಾಗಿದೆ.
ಬೋನ್ಸಾಯಿ ಅಂದರೆ 15 ರಿಂದ 20 ವರ್ಷದ ಕುಬ್ಜ ಗಿಡಗಳನ್ನು ಅತ್ಯಂತ ಆಕರ್ಷಣೀಯವಾಗಿ ಗ್ರಾನೈಟ್ ಕಲ್ಲು ಕಂಬಗಳಿಂದ ಜೋಡಿಸಲಾಗಿದೆ. ಹಾಗೂ ಕಲ್ಲಂಗಡಿ ಹಣ್ಣಿನಲ್ಲಿ ಮಹಾನ್ ವ್ಯಕ್ತಿಗಳ ಚಿತ್ರಗಳನ್ನು ಕೆತ್ತಲಾಗಿದೆ. ಹಾಗೂ ಹಳೆಯ ವಾಹನಗಳ ಟಾಯರ್‌ಗಳನ್ನು ಅಲಂಕಾರಿಕವಾಗಿ ವಿವಿಧ ಬಣ್ಣಗಳಿಂದ ವಿವಿಧ ಹೂಗಳನ್ನು ಕುಂಡಲಗಳಲ್ಲಿ ಜೋಡಿಸಲಾಗಿದೆ. ಹಳೆಯ ಬಾಟಲಿಗಳು, ವಿವಿಧ ಗಾಜಿನ ವಸ್ತುಗಳನ್ನು ಉಪಯೋಗಿಸಿ ವಿವಿಧ ಬಣ್ಣಗಳ ಹೂಗಳನ್ನು ಬಳಸಿ ಹೂ ದಾನಿಗಳು (ವೇಸ್) ಗಳನ್ನು ಜೋಡಿಸಲಾಗಿದೆ.
ಸೆಲ್ಫಿ ಪಾಯಿಂಟ್ : ಹೃದಯದ ಆಕಾರದ ಆಕೃತಿ ನಿರ್ಮಿಸಿ, ವಿವಿಧ ಗುಲಾಬಿ ಹೂಗಳನ್ನು ಜೋಡಿಸಿ ಸೆಲ್ಫಿ ಪಾಯಿಂಟ್ ನಿರ್ಮಿಸಲಾಗಿದ್ದು, ಸಾಕಷ್ಟು ಯುವಕರಿಂದ ಎಲ್ಲಾ ವಯಸ್ಸಿನ ಜನರು ಸಂತೋಷದಿಂದ ಸೆಲ್ಫಿಯನ್ನು ತಾ ಮುಂದು ನಾ ಮುಂದು ಎಂದು ಫೋಟೋ ತೆಗೆಯಿಸಿಕೊಳ್ಳುವುದು ಕಂಡು ಬಂದಿತು.

ಕೊಪ್ಪಳ ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳಡಿ ಸಹಾಯ ಪಡೆದು ರೈತರು ಬೆಳೆದ ದಾಳಿಂಬೆ, ದ್ರಾಕ್ಷಿ, ಕಲ್ಲಂಗಡಿ, ಬಾಳೆ, ಪಪ್ಪಾಯ, ಮೋಸಂಬಿ, ವಾಟರ್ ಆಪಲ್, ಸೀತಾಫಲ, ಅಂಜೂರ ಹಾಗೂ ವಿವಿಧ ಬಗೆಯ ಹೂ, ಹಣ್ಣು, ತರಕಾರಿಗಳನ್ನು ಹಾಗೂ ವಿವಿಧ ಹೊಸ ಬಗೆಯ ಹಣ್ಣುಗಳ ಪ್ರದರ್ಶನ ಕೂಡ ಗಮನ ಸೆಳೆಯುತ್ತಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ಸಬ್ಸಿಡಿ ದರದಲ್ಲಿ ಹಣ್ಣುಗಳನ್ನು ಪ್ಯಾಕ್ ಮಾಡಿ ಸರಬರಾಜು ಮಾಡಲು ಆಕರ್ಷಿಣಿಯವಾದ ರಟ್ಟಿನ ಡಬ್ಬಿಗಳನ್ನು ಸಹ ಪ್ರದರ್ಶನದಲ್ಲಿ ಇಡಲಾಗಿದ್ದು, ಇವುಗಳ ಮೇಲೆ ರೈತರ ಹೆಸರು, ಹಣ್ಣುಗಳು ಅವುಗಳ ವಿವಿಧ ತಳಿ, ಅಲ್ಲದೇ ದರ ಕೂಡ ಮುದ್ರಿಸಿದ್ದು, ರೈತರಿಗೂ, ಗ್ರಾಹಕರಿಗೂ ಇದು ಅತ್ಯಂತ ಪ್ರಯೋಜನಕಾರಿಯಾಗಲಿದೆ. ಎಲ್ಲಾ ಹಣ್ಣುಗಳಲ್ಲಿ ಲಭ್ಯವಿರುವ ಪೋಷಕಾಂಶಗಳು, ಖನಿಜಗಳು ಮತ್ತು ಅವುಗಳ ಆರೋಗ್ಯದ ಬಗ್ಗೆ ಮಹತ್ವ ತಿಳಿಸುವ ಬ್ಯಾನರ್‌ಗಳನ್ನು ಪ್ರದರ್ಶಿಸಲಾಗಿದೆ.
ಜಿಲ್ಲಾಧಿಕಾರಿಗಳ ಪ್ರತಿಕ್ರಿಯೆ: ಮಳಿಗೆ ವೀಕ್ಷಿಸಿದ ಜಿಲ್ಲಾಧಿಕಾರಿಗಳು, ತೋಟಗಾರಿಕೆ ಇಲಾಖೆ ರೂಪಿಸಿರುವ ಫಲಪುಷ್ಪ ಪ್ರದರ್ಶನವು ಕೊಪ್ಪಳ ಜನತೆಗೆ ಆಹ್ಲಾದಕರ ಅನುಭವ ನೀಡಿದೆ ಎಂದು ಪ್ರತಿಕ್ರಿಯಿಸಿದರು.