ಬೆಂಗಳೂರು, ಮಾ.9: ದುರುದ್ದೇಶಪೂರ್ವಕವಾಗಿ ಮಾಹಿತಿ ನಿರಾಕರಿಸದ್ದಕ್ಕೆ ಅಧಿಕಾರಿಗೆ ದಂಡವನ್ನು ವಿಧಿಸಿ, ಅರ್ಜಿದಾರರೊಬ್ಬರಿಗೆ 25ಸಾವಿರ ರೂ.ಪರಿಹಾರವನ್ನು ನೀಡುವಂತೆ ಮಾಹಿತಿ ಆಯೋಗದ ಆಯುಕ್ತ ಎಚ್.ಸಿ.ಸತ್ಯನ್ ಅವರು ನೀಡಿರುವ ಆದೇಶವನ್ನು ಮಾಹಿತಿಹಕ್ಕು ಅಧ್ಯಯನ ಕೇಂದ್ರವು ಸ್ವಾಗತಿಸಿದೆ.

ಈ ಕುರಿತು ಬಿ.ಎಚ್.ವೀರೇಶ ಪತ್ರಿಕಾ ಪ್ರಕಟನೆ ಹೊರಡಿಸಿದ್ದು, 2015ರ ಗೆಝೆಟೆಡ್ ಪ್ರೊಬೇಷನರ್ ಪರೀಕ್ಷೆಗೆ ಸಂಬಂಧಿಸಿದಂತೆ ಅರ್ಜಿದಾರರೊಬ್ಬರು ತಮ್ಮ ಉತ್ತರಪತ್ರಿಕೆಯ ದೃಢೀಕೃತ ಪ್ರತಿ ಮತ್ತು ಅರ್ಜಿದಾರರು ಪ್ರತಿಯೊಂದು ಉತ್ತರಕ್ಕೂ ಪಡೆದ ಅಂಕಗಳ ವಿವರದ ಮಾಹಿತಿಯನ್ನು ಕೇಳಿದ್ದರು. ಕರ್ನಾಟಕ ಲೋಕಸೇವಾ ಆಯೋಗದ ಸಾರ್ವಜನಿಕ ಮಾಹಿತಿ ಅಧಿಕಾರಿ ಜಯಲಕ್ಷ್ಮೀ ಎಂಬುವವರು ಮಾಹಿತಿಯನ್ನು ನೀಡದ ಕಾರಣ ಅರ್ಜಿದಾರರು ಮೊದಲನೇ ಮೇಲ್ಮನವಿ ಸಲ್ಲಿಸಿದರು ಎಂದು ತಿಳಿಸಿದ್ದಾರೆ.

ಪ್ರಥಮ ಮೇಲ್ಮನವಿ ಪ್ರಾಧಿಕಾರವೂ ಮಾಹಿತಿ ಕೊಡಿಸಲು ವಿಫಲರಾದುದರಿಂದ ಮಾಹಿತಿ ಆಯೋಗಕ್ಕೆ ಎರಡನೇ ಮೇಲ್ಮನವಿ ಸಲ್ಲಿಸಿದರು. ಮೇಲ್ಮನವಿ ವಿಚಾರಣೆ ಸಂಧರ್ಭದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯು ಲಿಖಿತ ಹೇಳಿಕೆ ಸಲ್ಲಿಸಿ ಉತ್ತರ ಪತ್ರಿಕೆಗಳನ್ನು ನೀಡುವ ಸಂಬಂಧ ಉಚ್ಛನ್ಯಾಯಾಲಯದ ರಿಟ್ ಪೆಟಿಷನ್ ಸಂಖ್ಯೆ 8676/2020 ಉಲ್ಲೇಖಿಸಿ ಮಾಹಿತಿ ನೀಡಲು ಅವಕಾಶವಿಲ್ಲ ಎಂದು ತಿಳಿಸಿದರು.

ಕರ್ನಾಟಕ ಮಾಹಿತಿ ಆಯೋಗವು ಸರ್ವೋಚ್ಛ ನ್ಯಾಯಾಲಯದ ಸಿಬಿಎಸ್‍ಸಿ ವರ್ಸಸ್ ಆದಿತ್ಯ ಬಂಡೋಪಾದ್ಯಾಯ ಪ್ರಕರಣದ ಆದೇಶವನ್ನು ಉಲ್ಲೇಖಿಸಿ, ಅರ್ಜಿದಾರರು ತಮ್ಮದೇ ಉತ್ತರಪತ್ರಿಕೆಯ ಮಾಹಿತಿಯನ್ನು ಕೇಳಿರುವುದುರಿಂದ ಮಾಹಿತಿಯನ್ನು ನಿರಾಕರಿಸುವುದು ಸರ್ವೋಚ್ಛ ನ್ಯಾಯಾಲಯದ ಆದೇಶಕ್ಕೆ ವಿರುದ್ದವಾದುದು ಎಂಬ ನಿಲುವನ್ನು ತಳೆದು ಮಾಹಿತಿ ನೀಡುವಂತೆ ಆದೇಶಿಸಿದೆ. ಮಾಹಿತಿ ನೀಡದ ಕರ್ನಾಟಕ ಲೋಕಸೇವಾ ಆಯೋಗದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ದಂಡ ವಿಧಿಸಿದೆ. ಇದಲ್ಲದೆ ಅರ್ಜಿದಾರರು ಅನುಭವಿಸಿದ ತೊಂದರೆಗೆ ರೂ.25 ಸಾವಿರ ಪರಿಹಾರ ನೀಡುವಂತೆ ಆದೇಶಿಸಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ ಕೇಂದ್ರ ಮಾಹಿತಿ ಆಯೋಗವು ಕುಮಾರಿ ಕಸ್ತೂರಿ ವಿರುದ್ದ ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಬೆಂಗಳೂರು ಪ್ರಕರಣದಲ್ಲಿ ಅರ್ಜಿದಾರರಿಗೆ ಒಂದು ಲಕ್ಷ ರೂಗಳನ್ನು ಪರಿಹಾರವಾಗಿ ಕೊಡಿಸುವ ಮೂಲಕ ಮಾಹಿತಿ ಹಕ್ಕಿನ ಹಿರಿಮೆಯನ್ನು ಎತ್ತಿಹಿಡಿದುದನ್ನು ಇಲ್ಲಿ ಸ್ಮರಿಸಬಹುದಾಗಿದೆ ಎಂದು ಅವರು ನೆನಪಿಸಿದ್ದಾರೆ.

ಮಾಹಿತಿ ಹಕ್ಕಿನಲ್ಲಿ ಅರ್ಜಿದಾರರಿಗೆ ಪರಿಹಾರ ಕೊಡಿಸಲು ಕಾನೂನಿನಲ್ಲಿ ಅವಕಾಶವಿದೆ ಎಂಬ ನಿಲುವು ತಳೆದ ಆಯೋಗದ ಆಯುಕ್ತರ ಈ ಆದೇಶ ಅತ್ಯಂತ ಮಹತ್ವಪೂರ್ಣವೆನಿಸಿದೆ ಎಂದು ಅವರು ತಿಳಿಸಿದ್ದಾರೆ.

error: Content is protected !!