ವಿಜ್ಞಾನ-ತಂತ್ರಜ್ಞಾನ ಸಾಹಿತ್ಯದ ನಡುವೆ ಕರಳುಬಳ್ಳಿಯ ಸಂಬಂಧವಿದೆ

ಕೊಪ್ಪಳ: ವಿಜ್ಞಾನ, ತಂತ್ರಜ್ಞಾನ ಮತ್ತು ಕನ್ನಡ ಸಾಹಿತ್ಯದ ನಡುವೆ ಕರಳು ಬಳ್ಳಿಯ ಸಂಬಂಧವಿದೆ ಎಂದು ಕೊಪ್ಪಳ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಹಿರಿಯ ಸಾಹಿತಿ ಡಾ.ಉದಯಶಂಕರ ಪುರಾಣಿಕ ಅವರು ಪ್ರತಿಪಾದಿಸಿದರು.
ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ಮಾರ್ಚ 5ರಂದು ಆರಂಭಗೊಂಡ ಕೊಪ್ಪಳ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ದೇಶಿಸಿ ಅವರು ಮಾತನಾಡಿದರು.

ಹೊಸ ಹೊಸ ಆವಿಷ್ಕಾರಗಳು ಅಥವಾ ಸಂಶೋಧನೆ ಕುರಿತು ಜನ ಸಾಮಾನ್ಯರಿಗೆ ತಿಳಿಸಲು ಕನ್ನಡ ಸುಲಭವಾದ ಭಾಷೆಯಾಗಿದೆ. ಹೀಗಾಗಿ ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತು ಸಾವಿರಾರು ಸಂಖ್ಯೆಯಲ್ಲಿ ಅಂಕಣ ಬರಹಗಳು ಮತ್ತು ಲೇಖನಗಳು ಪ್ರಕಟವಾಗಿವೆ. ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕಗಳು, ನಿಘಂಟು, ಪದವಿವರಣ ಕೋಶ ಮತ್ತು ವಿಶ್ವಕೋಶಗಳು ಪ್ರಕಟವಾಗುತ್ತಿವೆ.

ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಬೆಳೆಸಿದವರಲ್ಲಿ ಕುವೆಂಪುರವರು, ಡಿ.ವಿ.ಗುಂಡಪ್ಪನವರು, ಶಿವರಾಮ ಕಾರಂತರು, ಬಿ.ಜಿ.ಎಲ್.ಸ್ವಾಮಿಯವರು, ಜಿ.ಟಿ.ನಾರಾಯಣರಾವ್‌ರವರು ಮೊದಲಾದ ಮಹಾನ್ ಚೇತನಗಳನ್ನು ನಾವು ಸದಾ ಸ್ಕರಿಸಬೇಕು ಎಂದರು. ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತು 3000ಕ್ಕೂ ಹೆಚ್ಚು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆಯಲು ತಮಗೆ ಈ ಮಹಾನ್ ಚೇತನಗಳು ಪ್ರೇರಣೆಯಾಗಿದ್ದಾರೆ ಎಂದ ಪುರಾಣಿಕ್ ಅವರು, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನೀಡುವ ತಂತ್ರಜ್ಞಾನ ಕುರಿತು ಕನ್ನಡದಲ್ಲಿ ಶ್ರೇಷ್ಠ ಪುಸ್ತಕಕ್ಕೆ ನೀಡುವ ರಾಜ್ಯ ಪ್ರಶಸ್ತಿಯು ತಮಗೆ ಸಂದಿರುವುದು ಕೊಪ್ಪಳ ಮಾತ್ರವಲ್ಲದೆ ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೂ ಸಂದ ಗೌರವವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕನ್ನಡದಲ್ಲಿ ಎಂಜಿನಿಯರಿಂಗ್ ಮತ್ತು ಡಿಪ್ಲೋಮ ಶಿಕ್ಷಣ ನೀಡಬೇಕು ಎನ್ನುವ ಮಹತ್ವದ ಯೋಜನೆಯನ್ನು ಕೈಗೆತ್ತಿಗೊಂಡಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಅದಕ್ಕೆ ಅಗತ್ಯವಾದ ಪಠ್ಯಪುಸ್ತಕಗಳನ್ನು ರಚಿಸುವ ತಜ್ಞರ ಸಮಿತಿಯ ಒಬ್ಬ ಸದಸ್ಯನಾಗಿ ನನ್ನನ್ನು ನೇಮಿಸಿದೆ. ತಾಂತ್ರಿಕ ಶಿಕ್ಷಣವೆಂದರೆ ಇಂಗ್ಲೀಷ್ ಚೆನ್ನಾಗಿ ಗೊತ್ತಿರಬೇಕು ಎಂದು ಹೇಳುತ್ತ, ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಪದವಿ ಮತ್ತು ಡಿಪ್ಲೋಮ ಇಂಗ್ಲೀಷ್‌ನಲ್ಲಿ ಓದುವುದು ಕಷ್ಟವಾಗುತ್ತದೆ ಎನ್ನುವ ಮಿಥ್ಯಗಳ ಮೂಲಕ ಕನ್ನಡ ಮಾಧ್ಯಮದಲ್ಲಿ ಓದಿದ ಅನೇಕ ಯುವಕ ಯುವತಿಯರಿಗೆ ತಾಂತ್ರಿಕ ಶಿಕ್ಷಣದಿಂದ ದೂರವಿಡಲಾಗಿದೆ. ಈ ಅಸಮಾನತೆಯನ್ನು ತೊಲಗಿಸಲು, ತಾಂತ್ರಿಕ ಶಿಕ್ಷಣವನ್ನು ಕನ್ನಡ ಭಾಷೆಯಲ್ಲಿ ನೀಡಲಾಗುತ್ತಿದೆ ಎಂದರು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶಗಳಲ್ಲಿ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವುದರ ಅಗತ್ಯವನ್ನು ಪ್ರಸ್ತಾಪಿಸಲಾಗಿದೆ. ಕನ್ನಡದಲ್ಲಿ ಎಂಜಿನಿಯರಿAಗ್ ಅಥವಾ ಡಿಪ್ಲೋಮ ಪದವಿ ಪಡೆದರೆ ಕೆಲಸ ಸಿಗುವುದಿಲ್ಲವೆನ್ನುವ ಆತಂಕ ಬೇಡ. ಜರ್ಮನಿ, ಫ್ರಾನ್ಸ್, ರಷ್ಯಾ, ಚೀನಾ, ಜಪಾನ್ ಮೊದಲಾದ ದೇಶಗಳಲ್ಲಿ ತಾಂತ್ರಿಕ ಶಿಕ್ಷಣ ದೊರೆಯುವುದು ಸ್ಥಳೀಯ ಭಾಷೆಯಲ್ಲಿ. ಅವರಿಗೆ ದೇಶ ವಿದೇಶಗಳಲ್ಲಿ ಕೆಲಸ ಸಿಗುವುದು ಸಾಧ್ಯವಾದರೆ, ಕನ್ನಡದಲ್ಲಿ ಓದಿದವರಿಗೆ ಸಿಗುವುದಿಲ್ಲವೆನ್ನುವ ವಾದದಲ್ಲಿ ಹುರಳಿಲ್ಲ. ಕನ್ನಡದಲ್ಲಿ ತಾಂತ್ರಿಕ ಶಿಕ್ಷಣ ಪಡೆಯುವಾಗ ಇಂಗ್ಲೀಷ್ ಸಂವಹನ ಭಾಷೆಯಾಗಿ ಕಲಿಯುವುದರಿಂದ ಉನ್ನತ ಶಿಕ್ಷಣ ಮತ್ತು ವೃತ್ತಿಯಲ್ಲಿ ಅನುಕೂಲವಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ಓದಿದವರು, ಕನ್ನಡದಲ್ಲಿ ಲಭ್ಯವಿರುವ ಇಂಜಿನಿಯರಿಂಗ್ ಮತ್ತು ಡಿಪ್ಲೊಮಾ ಶಿಕ್ಷಣ ಅವಕಾಶವನ್ನು ಪಡೆದುಕೊಳ್ಳಬೇಕು ಎಂದು ಪುರಾಣಿಕವರು ಮನವಿ ಮಾಡಿದರು.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಮತ್ತು ಕನ್ನಡ ಅನ್ನದ ಭಾಷೆಯಾಗಬೇಕು ಎನ್ನುವ ಹಕ್ಕೊತ್ತಾಯ ಕನ್ನಡಿಗರದ್ದಾಗಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಬಳಸುವುದರ ಮೂಲಕ ಈ ಆಶಯವನ್ನು ನನಸಾಗಿಸಲು, ಸ್ವಂತ ಹಣ, ಶ್ರಮ ಮತ್ತು ಸಮಯ ವಿನಿಯೋಗಿಸಿ ಕಳೆದ 26 ವರ್ಷಗಳಿಂದ ನಾನು ಮಾಡುತ್ತಿರುವ ಕೆಲಸವನ್ನು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.

ಹೈದರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟಕ್ಕೆ 75 ವರ್ಷ, ಕೊಪ್ಪಳ ಜಿಲ್ಲೆಯಾಗಿ 25 ವರ್ಷಗಳ ಸಂಭ್ರಮದ ನಡುವೆ ಹನುಮಸಾಗರದಲ್ಲಿ 12ನೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಪ್ರತಿಷ್ಠಿತ ಗುಬ್ಬಿ ವೀರಣ್ಣನವರ ಹೆಸರಿನ ಪ್ರಶಸ್ತಿ ಪಡೆದಿರುವ ಹಿರಿಯರಾದ ದಿವಂಗತ ಡಿ.ಟಿ.ಆರಸ್‌ರವರ ಜನ್ಮಶತಮಾನೋತ್ಸವದ ಅಂಗವಾಗಿ ವಿಶೇಷ ಗೋಷ್ಠಿಯು ಈ ಸಮ್ಮೇಳನದಲ್ಲಿ ನಡೆಯುತ್ತಿರುವುದು ಮತ್ತೊಂದು ವಿಶೇಷವಾಗಿದೆ ಎಂದರು.

ತವರು ಜಿಲ್ಲೆಯ ಗೌರವ: ಇಂತಹ ಸಮ್ಮೇಳನದ ಅಧ್ಯಕ್ಷನಾಗಿ ನನ್ನನ್ನು ಆಯ್ಕೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಕಾರ್ಯಕಾರಿ ಸಮಿತಿಯ ಸಮಸ್ತರಿಗೆ ನಾನು ಆಭಾರಿಯಾಗಿದ್ದೇನೆ. ದೇಶ ವಿದೇಶಗಳಲ್ಲಿ ಗೌರವ, ಪ್ರಶಸ್ತಿಗಳನ್ನು ಪಡೆದಿರುವ ನನಗೆ, ತಡವಾಗಿಯಾದರೂ ತವರು ಜಿಲ್ಲೆಯಲ್ಲಿ ದೊರೆತಿರುವ ಪ್ರೀತಿ, ಗೌರವ ಎಲ್ಲದಕ್ಕಿಂತ ಹೆಚ್ಚಿನದಾಗಿದೆ ಎಂದರು.

ಭಾವುಕರಾದ ಪುರಾಣಿಕ್: ಕನ್ನಡ ನಾಡ-ನುಡಿ ಮತ್ತು ಅಸ್ಮಿತೆಗಿಂತ ದೊಡ್ಡವರಿಲ್ಲವೆಂದು ನಂಬಿದವನು ನಾನು, ಸಂವಿಧಾನಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್‌ರವರು ನಮಗೆ ಕೊಟ್ಟಿರುವ ಸಂವಿಧಾನದಲ್ಲಿ ಬಡವ-ಬಲ್ಲಿದ ಎಂಬ ಭೇದವಿಲ್ಲ. ಆದ್ದರಿಂದ ಕೊಪ್ಪಳ ಜಿಲ್ಲೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿರುವ ಈ ಸಂದರ್ಭದಲ್ಲಿ ನಾನು ಹೇಳುವುದಿಷ್ಟೆ, ಈ ಗೌರವ ಈ ಜಿಲ್ಲೆಯ ಪ್ರತಿಯೊಬ್ಬ ಕನ್ನಡಿಗನಿಗೂ ಸಲ್ಲುವ ಗೌರವ. ನಿಮ್ಮ ಪ್ರತಿನಿಧಿಯಾಗಿ ನಾನು ಅಧ್ಯಕ್ಷನಾಗಿ ಇಲ್ಲಿರುವುದನ್ನು ಕಂಡು, ಕೇಳಿ ಸಂಭ್ರಮಿಸುವ ಸಮಸ್ತರೂ ಅಧ್ಯಕ್ಷರೇ ಎಂದು ಭಾವಿಸುತ್ತೇನೆ ಎಂದು ಸಾಹಿತಿ ಪುರಾಣಿಕ್ ಅವರು ಭಾವುಕರಾದರು.

error: Content is protected !!