
ಕೋಪ್ಪಳ: ‘ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಲಕಾನಂದ ಮಳಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್‌ಎಚ್‌ಎಂ) ಯೋಜನೆಯಡಿ ಶುಶ್ರೂಷಕಿಯರ ನೇಮಕಾತಿಯಲ್ಲಿ ಕೌಶಲ್ಯಾಧರಿತ ಮೌಲ್ಯಮಾಪನ ಹೆಸರಿನಲ್ಲಿ ನೇಮಕಾತಿಯನ್ನು ಅಕ್ರಮವಾಗಿ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕುಟುಂಬ ಕಲ್ಯಾಣ ಜಿಲ್ಲಾ ಅಧಿಕಾರಿ ಡಾ.ರವೀಂದ್ರನಾಥ ಎಂ.ಎಸ್., ಆರೋಪಿಸಿದರು.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಎನ್‌ಎಚ್‌ಎಂ ಯೋಜನೆಯಡಿ 12 ಜನ ಶುಶ್ರೂಷಕಿಯರು, ತಾಯಿ ಮಗು ಆಸ್ಪತ್ರೆಯಲ್ಲಿ 13 ಮತ್ತು ನಮ್ಮ ಕ್ಲಿನಿಕ್‌ನಲ್ಲಿ ಮೂರು ಹುದ್ದೆಗಳಿಗೆ ನೇಮಕಾತಿ ಮಾಡುವಾಗ ನಿಯಮಗಳನ್ನು ಪಾಲಿಸಿಲ್ಲ.
ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಆರೋಪವಿರುವ ಕಾರಣ ಈ ಪ್ರಕ್ರಿಯೆ ಸ್ಥಗಿತಗೊಳಿಸಬೇಕು ಎಂದು ಬರೆದ ಪತ್ರಕ್ಕೆ ಎರಡು ತಿಂಗಳ ವಿಳಂಬ ಮಾಡಿ ಹಿಂಬರಹ ನೀಡಲಾಗಿದೆ. ಕೌಶಲ್ಯ ಆಧಾರಿತ ಪರೀಕ್ಷೆಗೆ ನೇಮಕಾತಿ ನಿಯಮಾವಳಿಯ ಅನುಪಾತ ಅಧಾರಿತವಾಗಿ ಆಕಾಂಕ್ಷಿಗಳನ್ನು ಕರೆಯದೇ ಒಟ್ಟು ಹುದ್ದೆ ಅಂತಿಮ ಆಯ್ಕೆ ಪಟ್ಟಿಯಂತೆ ಕರೆದಿದ್ದಾರೆ’ ಎಂದು ದೂರಿದರು.
‘ಅಲಕಾನಂದ ಮಳಗಿ ಡಿಎಚ್‌ಒ ಆಗುವ ಮೊದಲು ಜಿಲ್ಲಾ ಆರ್‌ಸಿಎಚ್ ಅಧಿಕಾರಿಯಾಗಿದ್ದಾಗ ಅನುಮೋದನೆ ಆಗದಿರುವ ಇ ಆಸ್ಪತ್ರೆ, ಗಣಕಯಂತ್ರ, ಸಹಾಯಕರ ವೇತನ ಕಡಿತಕ್ಕೆ ನಿರಂತರವಾಗಿ ಎರಡು ವರ್ಷಗಳ ಕಾಲ ಸಹಿ ಮಾಡಿ ₹37.46 ಲಕ್ಷ ಸರ್ಕಾರಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಖುದ್ದು ಆರೋಗ್ಯ ಇಲಾಖೆ ಆಯುಕ್ತರು ಹಣ ವಾಪಸ್ ಭರಿಸುವಂತೆ ಆದೇಶಿಸಿದ್ದಾರೆ. ಆದರೂ ಮತ್ತೆ ಅವರನ್ನು ಇದೇ ಜಿಲ್ಲೆಗೆ ಡಿಎಚ್‌ಒ ಆಗಿ ನೇಮಕಾತಿ ಮಾಡಿದ್ದು ಸರಿಯೇ’ ಎಂದದು ಪ್ರಶ್ನಿಸಿದರು
‘ಈ ಎಲ್ಲಾ ವಿಷಯಗಳ ಕುರಿತು ಕೊಪ್ಪಳ ತಾಲ್ಲೂಕಿಹನ ಹಲವಾಗಲಿ ಗ್ರಾಮದ ಶರಣಪ್ಪ ಗೋಡಚಳ್ಳಿ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದರು.
ಅಲಕಾನಂದ ಅವರ ಭ್ರಷ್ಟಾಚಾರವನ್ನು ಪ್ರಶ್ನಿಸಿದ್ದಕ್ಕೆ ನನ್ನ ವಿಭಾಗದಲ್ಲಿದ್ದ ಆರೋಗ್ಯ ಸಿಬ್ಬಂದಿಯನ್ನು ವಾಪಸ್ ಪಡೆದಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಅಲಕಾನಂದರ ರಕ್ಷಣೆಗೆ ನಿಂತಿದ್ದಾರೆ.
ಡಾ. ರವೀಂದ್ರನಾಥ ಎಂ.ಎಸ್.,
.ಕುಟುಂಬ ಕಲ್ಯಾಣ ಜಿಲ್ಲಾ ಅಧಿಕಾರಿ