ಕೊಪ್ಪಳ ಮಾರ್ಚ 01: ಕೊಪ್ಪಳ ಜಿಲ್ಲಾ ರಜತ್ ಮಹೋತ್ಸವದ ಪೂರ್ವಭಾವಿ ಸಿದ್ಧತೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರ ಅಧ್ಯಕ್ಷತೆಯಲ್ಲಿ ಫೆ.28ರಂದು ಮತ್ತೊಂದು ಸುತ್ತಿನ ಸಭೆ ನಡೆಯಿತು.

ಜಿಲ್ಲಾ ರಜತ್ ಮಹೋತ್ಸವ ಹಿನ್ನೆಲೆಯಲ್ಲಿ ರಚಿಸಿರುವ 20 ವಿವಿಧ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಆಯಾ ಸಮಿತಿಯಿಂದ ಇದುವರೆಗೆ ಆಗಿರುವ ಮಾಹಿತಿ ಪಡೆದರು ಮತ್ತು ಆಯಾ ಸಮಿತಿಯಿಂದ ಮುಂದೆ ಆಗಬೇಕಾದ ಕಾರ್ಯಯೋಜನೆಗಳ ಬಗ್ಗೆ ಮಾರ್ಗದರ್ಶನ ಮಾಡಿದರು.

ರಜತ್ ಮಹೋತ್ಸವಕ್ಕೆ ಈಗಾಗಲೇ ದಿನಾಂಕ ನಿಗದಿಪಡಿಸಲಾಗಿದೆ. ಜನರಿಗೆ ಅನುಕೂಲವಾಗುವಂತೆ, ಪರಿಶೀಲನೆ ಬಳಿಕ ಕಾರ್ಯಕ್ರಮದ ಸ್ಥಳ ಎಲ್ಲಿ ಎಂಬುದನ್ನು ಅಂತಿಮಗೊಳಿಸಲಾಗುವುದು. ಆದ್ದರಿಂದ ಸಮಯವಕಾಶ ಕಡಿಮೆ ಇದ್ದು, ಅಧಿಕಾರಿಗಳು ತಮಗೆ ವಹಿಸಿದ ಉತ್ಸವ ಕಾರ್ಯಕ್ರಮದ ಸಿದ್ಧತೆಯತ್ತಲೂ ಹೆಚ್ಚಿನ ಗಮನ ಹರಿಸಬೇಕು ಎಂದು ಸೂಚನೆ ನೀಡಿದರು.

ಲೋಗೋ ಪರಿಶೀಲನೆ: ರಜತ್ ಮಹೋತ್ಸವದ ವಿಶೇಷ ಆಕರ್ಷಣೆಯಾದ ಲೋಗೋ ಆಯ್ಕೆಯ ಬಗ್ಗೆ ಕೂಡ ಜಿಲ್ಲಾಧಿಕಾರಿಗಳು ಪರಿಶೀಲಿಸಿದರು. ಈಗಾಗಲೇ ಸಿದ್ಧಪಡಿಸಿರುವ ಎರಡ್ಮೂರು ಬಗೆಯ ಲೋಗೊಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ವೀಕ್ಷಿಸಿ, ಕೆಲವು ಮಾರ್ಪಾಡುಗಳಿಗೆ ಸಲಹೆ ಮಾಡಿದರು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರು ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಮೂಲಕ ಐತಿಹಾಸಿಕ ಕೊಪ್ಪಳ ರಜತ್ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು. ಸುಗಮ ಸಂಚಾರ, ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಜನರ ಸುರಕ್ಷತೆ ದೃಷ್ಟಿಯಿಂದ ಅನುಕೂಲವಾಗುವ ಸ್ಥಳ ಗುರುತಿಸಿ, ಭದ್ರತೆ ನೀಡಲು ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆಯ ಅವರು ಮಾತನಾಡಿ, ಮಾರ್ಚ ಮಾಹೆಯೊಳಗೆ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸುವ ಒತ್ತಡದಲ್ಲಿಯೂ ಅಧಿಕಾರಿಗಳು ರಜತ್ ಮಹೋತ್ಸವದ ಸಿದ್ಧತೆಗೆ ಉತ್ಸಾಹ ತೋರುತ್ತಿದ್ದಾರೆ. ಕಚೇರಿಯ ಇನ್ನೀತರ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸರಿಯಾಗಿ ಸಮನ್ವಯ ಮಾಡಿಕೊಂಡು ಉತ್ಸವದ ಸಿದ್ಧತೆ ಮಾಡಿಕೊಳ್ಳಲು ಸಲಹೆ ಮಾಡಿದರು.

ರಜತ್ ಮಹೋತ್ಸವದ ದಿನಾಂಕ ನಿಗದಿ ಆಗಿಲ್ಲ ಎನ್ನುವ ಕಾರಣಕ್ಕೆ ಬ್ಯಾನರ್ ಹಾಗೂ ಮತ್ತಿತರ ಪ್ರಚಾರ ಸಾಮಗ್ರಿಗಳು ಮುದ್ರಣವಾಗಿರುವುದಿಲ್ಲ. ಇದೀಗ ಉತ್ಸವದ ದಿನಾಂಕ ನಿಗದಿಯಾಗಿರುವುದರಿಂದ ಪ್ರಚಾರ ಕಾರ್ಯಕ್ರಮಗಳನ್ನು ಚುರುಕುಗೊಳಿಸಲಾಗುವುದು.

ಪ್ರಚಾರಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರಚಾರ ಸಮಿತಿಯ ಅಧ್ಯಕ್ಷರಾದ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ ಕಡಿ ಅವರು ತಿಳಿಸಿದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಸಮೀರ್ ಮುಲ್ಲಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಕಾವ್ಯ ರಾಣಿ, ಜಿಪಂ ಯೋಜನಾ ನಿರ್ದೇಶಕರಾದ ಟಿ. ಕೃಷ್ಣ ಮೂರ್ತಿ ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

error: Content is protected !!