
ಕೋಪ್ಪಳ: ‘ಕುಂಬಾರರು ಸಮಾಜದಲ್ಲಿ ಮುಖ್ಯವಾಹಿನಿಗೆ ಬರುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕು. ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಡಬೇಕು’ ಎಂದು ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಹೇಳಿದರು.
ನಗರದಲ್ಲಿ ಭಾನುವಾರ ಜಿಲ್ಲಾಡಳಿತ, ಕರ್ನಾಟಕ ಪ್ರದೇಶ ಕುಂಬಾರರ ಸಂಘದ ಜಿಲ್ಲಾ ಘಟಕದಿಂದ ನಡೆದ ಜಿಲ್ಲಾ ಕುಂಬಾರರ ಜಾೃಗತಿ ಸಮಾವೇಶ, ಸಮುದಾಯ ಭವನದ ಭೂಮಿಪೂಜೆ ಮತ್ತು ಸಂತಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಕುಂಬಾರ ಸಮುದಾಯ ಸಾಮಾಜಿಕವಾಗಿ, ರಾಜಕೀಯ ಹಾಗೂ ಆರ್ಥಿಕವಾಗಿ ಮುಂದೆ ಬರಬೇಕಾಗಿದೆ.
ಸಮುದಾಯದ ಜನರ ಪಾಲ್ಗೊಳ್ಳುವಿಕೆಯೂ ಅಗತ್ಯವಾಗಿದೆ’ ಎಂದರು.
‘ಸರ್ವಜ್ಞ ಎಂದರೆ ಎಲ್ಲಾ ಜ್ಞಾನವನ್ನು ಅರಿತವರು ಎಂದರ್ಥ. ತ್ರಿಪದಿಗಳ ಮೂಲಕ ಸಮಾಜದ ಅಂಕು-ಡೊAಕು ವ್ಯವಸ್ಥೆಯನ್ನು ತಿದ್ದಿದ್ದಾರೆ’ ಎಂದು ಹೇಳಿದರು.
ಕವಿ ಸರ್ವಜ್ಞ ಕುರಿತು ಗವಿಸಿದ್ದೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಸಿದ್ದಲಿಗಪ್ಪ ಕೊಟ್ನೆಕಲ್ ಉಪನ್ಯಾಸ ನೀಡಿ ‘ಸರ್ವಜ್ಞ ಎಂಬ ಹೆಸರೇ ವಿಶಿಷ್ಟವಾಗಿದ್ದು, ಅವರ ವಚನಗಳಲ್ಲಿ ಏನೆಲ್ಲ ಇದೆ ಎಂಬುವುದು ಹುಡುಕುತ್ತಾ ಹೋದರೆ ಶಬ್ಧಗಳು ಸಾಲದು. ಅವರ ವಚನಗಳಲ್ಲಿ ಏಕವಿದೆ, ಅನುಭವ, ರಸ, ಹೆಣ್ಣು, ಹೊನ್ನು, ಮಣ್ಣು, ಓದು, ನಕ್ಷತ್ರ, ಫಲ, ಭಾಷೆ, ಜಾತಿ, ದೇಶ, ವೈದ್ಯ ಪದ್ಧತಿ, ಒಗಡು, ಗುರು, ರಾಜನೀತಿ, ರಾಜಕೀಯ, ಸಂಘ, ಸಹವಾಸ, ನೀತಿ, ಆರೋಗ್ಯ, ಗುರುಕರಣ ಹೀಗೆ ಹಲವು ಅಂಶಗಳು ಸಿಗುತ್ತವೆ’ ಎಂದರು.
ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ, ಸದಸ್ಯರಾದ ಗುರುರಾಜ ಹಲಗೇರಿ, ಮುತ್ತುರಾಜ ಕುಷ್ಟಗಿ, ಭಾಗನ್ಯಗರ ಪಟ್ಟಣ ಪಂಚಾಯಿತಿ ಸದಸ್ಯೆ ಲಲಿತಾ ಮಂಜುನಾಥ ಡಂಬಳ, ಉಪವಿಭಾಗಾಧಿಕಾರಿ ಬಸವಣ್ಣಪ್ಪ ಕಲಶೆಟ್ಟಿ, ಜಿ.ಪಂ ಮಾಜಿ ಸದಸ್ಯ ಪ್ರಸನ್ನ ಗಡಾದ, ಬಿಜೆಪಿ ಮುಖಂಡರಾದ ಗವಿಸಿದ್ದಪ್ಪ ಕರಡಿ, ಸಿ.ವಿ. ಚಂದ್ರಶೇಖರ್, ಸಮಾಜದ ಮುಖಂಡರಾದ ಕಳಕಪ್ಪ ಕುಂಬಾರ, ಶರಣಪ್ಪ ಭಾನಾಪುರ, ರಾಮಣ್ಣ ಕುಷ್ಟಗಿ, ನಿಂಗಪ್ಪ ಇರಕಲ್ಲಗಡ, ಡಾ ಮಲ್ಲಿಕಾರ್ಜುನ ಕುಂಬಾರ ಗಜೇಂದ್ರಗಡ, ಬೋಜಪ್ಪ, ಸುರೇಶ, ಅಶೋಕ್, ಬೆಟದೇಶ, ಅಮರೇಶ್, ಗವಿಸಿದ್ದಪ್ಪ ಹಾವರಗಿ, ಅಂದಪ್ಪ ಕುಂಬಾರ ಹಿಟ್ನಾಳ್, ಪ್ರಭು, ಬಸವರಾಜ ಕುಂಬಾರ ಪಾಲ್ಗೊಂಡಿದ್ದರು.
ಪ್ರತ್ಯೇಕ ಅಭಿವೃದ್ಧಿ ನಿಗಮಕ್ಕೆ ಆಗ್ರಹ
ಕುಂಬಾರ ಸಮಾಜದ ಮುಖಂಡ ಈರಣ್ಣ ಕುಂಬಾರ ಮಾತನಾಡಿ ‘ರಾಜ್ಯದಲ್ಲಿ ಪ್ರತ್ಯೇಕ ಕುಂಬಾರ ಅಭಿವೃದ್ಧಿ ನಿಗಮ ಸ್ಥಾಪನೆಯಾಗಬೇಕು. ಆಧುನಿಕ ಯುಗದಲ್ಲಿ ಕುಂಬಾರಿಕೆಯನ್ನು ಇನ್ನೂ ಹೆಚ್ಚಿಸಲು ಹಾಗೂ ಇದರಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ರಾಜ್ಯಮಟ್ಟದ ಕರಕುಶಲ ತರಬೇತಿ ಕೇಂದ್ರವನ್ನು ಕೊಪ್ಪಳ ಜಿಲ್ಲೆಯಲ್ಲಿ ಪ್ರಾರಂಭವಾಗಬೇಕು. ರಾಜ್ಯದಲ್ಲಿ ಸರ್ವಜ್ಞ ಶ್ರೀ ಪ್ರಶಸ್ತಿ ಜಾರಿಯಾಗಬೇಕು. ಕುಂಬಾರಿಕೆಗೆ ಅವಶ್ಯವಿರುವ ಜೆಡಿ ಮಣ್ಣು ಸಿಗುವಂತಹ ಭೂಮಿಯನ್ನು ನಮ್ಮ ಕುಲಕಸುಬಿಗೆ ಕಾಯ್ದಿರಿಸಬೇಕು’ ಎಂದು ಆಗ್ರಹಿಸಿದರು.
ಪರಂಪರಾಗತವಾಗಿ ಹಿಂದುಳಿದ ಕುಂಬಾರ ಸಮಾಜಕ್ಕೆ ಸದಾ ನಮ್ಮ ಬೆಂಬಲವಿದೆ. ಈಡಿಗರು ಈಚಲು ಗಿಡದಿಂದ ಹೆಂಡ ತೆಗೆಯಲು ಕುಂಬಾರ ಮಾಡಿದ ಗಡಿಗೆ ಬಳಸುತ್ತಿದ್ದಾರೆ.
ಹೆಚ್.ಆರ್ ಶ್ರೀನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ