ಬೆಂಗಳೂರು, ಫೆಬ್ರವರಿ 27; ಸರ್ಕಾರಿ ನೌಕರರು ಮುಷ್ಕರ ನಡೆಸುವುದು ಬೇಡ ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ  ಮನವಿ ಮಾಡಿದ್ದಾರೆ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸರ್ಕಾರಿ ನೌಕರರು ಮಾರ್ಚ್ 1ರಿಂದ ಉದ್ಯೋಗಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ಈಗಾಗಲೇ ಕರೆ ನೀಡಿದ್ದಾರೆ.

ಭಾನುವಾರ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ-2023ರ ಸಮಾರೋಪ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ದರು. ರಾಜ್ಯ ಸರ್ಕಾರಿ ನೌಕರರಿಗೆ ಶೀಘ್ರವೇ ಸಿಹಿಸುದ್ದಿ ಸಿಗಲಿದೆ. 7ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಮುಖ್ಯಮಂತ್ರಿಗಳು ಮಾತನಾಡಿ, “ಸರ್ಕಾರಿ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ. 7ನೇ ವೇತನ ಆಯೋಗ ಶಿಫಾರಸು ಜಾರಿಗೆ ಅಗತ್ಯವಿರುವ ಹಣ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ಸರ್ಕಾರಿ ನೌಕರರು ಮುಷ್ಕರ ನಡೆಸಬಾರದು. ರಾಜ್ಯದ ಜನರ ಹಿತದೃಷ್ಟಿಯಿಂದ ಸರ್ಕಾರದ ಜೊತೆ ಸಹಕಾರ ನೀಡಬೇಕು” ಎಂದು ಸರ್ಕಾರಿ ನೌಕರರಿಗೆ ಮನವಿ ಮಾಡಿದರು.

“ನಾವು ನೀಡಿದ ಮಾತಿನಂತೆ ಈಗಾಗಲೇ ಸುಧಾಕರ್ ಅಧ್ಯಕ್ಷತೆಯಲ್ಲಿ ರಾಜ್ಯ 7ನೇ ವೇತನ ಆಯೋಗ ರಚನೆ ಮಾಡಿದ್ದೇವೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರ ಸಂಘದ ಬೇಡಿಕೆ ಈಡೇರಿಸಿದ್ದೇನೆ. ವೇತನ ಆಯೋಗದ ಅಧ್ಯಕ್ಷರು ಮಧ್ಯಂತರ ವರದಿ ನೀಡಿದರೆ ಹಣ ಮೀಸಲಿಡಲು ಸಿದ್ಧರಿದ್ದೇವೆ. ಮೊದಲು ವರದಿ ಬರಲಿ, ನೌಕರರ ಸಂಘ ಸ್ಪಲ್ಪ ತಾಳ್ಮೆಯಿಂದ ಇದ್ದರೆ ಎಲ್ಲರೂ ಸರಿ ಹೋಗುತ್ತದೆ” ಎಂದು ಮುಖ್ಯಮಂತ್ರಿಗಳು ಹೇಳಿದರು.

ಮುಷ್ಕರಕ್ಕೆ ಕರೆ ಶನಿವಾರ ಶಿವಮೊಗ್ಗದಲ್ಲಿ ಮಾತನಾಡಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ, “7ನೇ ವೇತನ ಆಯೋಗದಿಂದ ಶೀಘ್ರ ಮಧ್ಯಂತರ ವರದಿ ಪಡೆದು ಜಾರಿ ಮಾಡುವಂತೆ ಹಿಂದಿನಿಂದಲೂ ಒತ್ತಾಯಿಸಲಾಗುತ್ತಿದೆ. 2023-4ನೇ ಸಾಲಿನ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ನಿರೀಕ್ಷೆ ಮಾಡಲಾಗಿತ್ತು. ಆದರೆ ಅದು ಹುಸಿಯಾಗಿದೆ. ಆದ್ದರಿಂದ ನೌಕರರು ಅನಿವಾರ್ಯವಾಗಿ ಕರ್ತವ್ಯಕ್ಕೆ ಗೈರಾಗುವ ಮೂಲಕ ಮುಷ್ಕರ ನಡೆಸಲು ಮುಂದಾಗಿದ್ದೇವೆ” ಎಂದು ತಿಳಿಸಿದ್ದರು.

ಫೆಬ್ರವರಿ 21ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲೆ, ತಾಲ್ಲೂಕು, ಯೋಜನಾ ಶಾಖೆಗಳ ಚುನಾಯಿತ ಪ್ರತಿನಿಧಿಗಳು ಹಾಗೂ ವೃಂದ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳ ತುರ್ತು ರಾಜ್ಯ ಕಾರ್ಯಕಾರಿಣಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಮಾರ್ಚ್ 1ರಿಂದ ಉದ್ಯೋಗಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿತ್ತು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯ ಸರ್ಕಾರಿ ನೌಕರರು ಹಾಗೂ ಸರ್ಕಾರದ ಅಧೀನಕ್ಕೊಳಪಡುವ ನೌಕರರಿಗೆ ದಿನಾಂಕ 01-07-2022 ರಿಂದ ಪರಿಷ್ಕೃತ ವೇತನ, ಭತ್ಯೆಗಳಿಗೆ ಅರ್ಹರಾಗಿದ್ದು, 6ನೇ ವೇತನ ಆಯೋಗದ ಮಾದರಿಯಂತೆ 7ನೇ ವೇತನ ಆಯೋಗದಿಂದ ಶೀಘ್ರವಾಗಿ ಮಧ್ಯಂತರ ವರದಿಯನ್ನು ಪಡೆದು, ಚುನಾವಣೆ ನೀತಿ ಸಂಹಿತೆ ಜಾರಿಗೆ ಮೊದಲು ಶೇ 40 ಪಿಟ್‍ಮೆಂಟ್ ಸೌಲಭ್ಯವನ್ನು ದಿನಾಂಕ 01-07-2022 ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಬೇಕು ಎಂದು ಬೇಡಿಕೆ ಇಟ್ಟಿದೆ.

ಅಲ್ಲದೇ ಎನ್. ಪಿ. ಎಸ್. ರದ್ದುಗೊಳಿಸಬೇಕು. ಎನ್. ಪಿ. ಎಸ್. ನೌಕರರನ್ನು ಓ. ಪಿ. ಎಸ್. ವ್ಯಾಪ್ತಿಗೆ ತರಬೇಕು. ಪಂಜಾಬ್, ರಾಜಸ್ಥಾನ, ಛತ್ತೀಸ್‌ಗಢ, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಸಹ ಬೇಡಿಕೆ ಮುಂದಿಟ್ಟಿದೆ.

ಲಿಖಿತ ಭರವಸೆ ಕೊಡಿ ಸಿ. ಎಸ್. ಷಡಾಕ್ಷರಿ ಅವರು, “7ನೇ ವೇತನ ಆಯೋಗದ ಮಧ್ಯಂತರ ವರದಿ ಅನುಷ್ಠಾನದ ಬಗ್ಗೆ ಸರ್ಕಾರ ಆದೇಶ ಹೊರಡಿಸಿದರೆ ಮಾತ್ರ ಮಾರ್ಚ್ 1ರಿಂದ ಕರೆ ನೀಡಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ವಾಪಸ್ ಪಡೆದುಕೊಳ್ಳಲಾಗುತ್ತದೆ” ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಸಂಘ ಕರೆ ನೀಡಿರುವ ಮುಷ್ಕರದಲ್ಲಿ ಗ್ರಾಮ ಪಂಚಾಯಿತಿಯಿಂದ ವಿಧಾನಸೌಧದ ತನಕ ಎಲ್ಲಾ ನೌಕರರು ಪಾಲ್ಗೊಳ್ಳಲಿದ್ದಾರೆ. ಮಾರ್ಚ್ 1ರಿಂದ ಕರ್ತವ್ಯಕ್ಕೆ ಗೈರಾಗುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಳ್ಳುವ ಕುರಿತು ಒಮ್ಮತದ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಸಂಘ ಹೇಳಿದೆ.

error: Content is protected !!