
[ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಮೃತ ಮಹಿಳೆಯ ಸಂಬಂಧಿಕರು]
ಬಾಗೇಪಲ್ಲಿ (ಚಿಕ್ಕಬಳ್ಳಾಪುರ), ಫೆ.25: ಸಕಾಲಕ್ಕೆ ಸೂಕ್ತ ಚಿಕಿತ್ಸೆ ದೊರೆಯದೇ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಆರೋಗ್ಯ ಸಚಿವ ಸುಧಾಕರ್ ಅವರ ತವರು ಜಿಲ್ಲೆಯ ಬಿಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿರುವುದು ವರದಿಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಬಿಳ್ಳೂರು ಗ್ರಾಮದ ಹೊರವಲಯದ ಗುಡಿಸಿಲಿನಲ್ಲಿ ವಾಸವಾಗಿದ್ದ ಮಂಗಮ್ಮ(34) ಮೃತಪಟ್ಟ ಮಹಿಳೆ ಎಂದು ತಿಳಿದುಬಂದಿದೆ.
ಮಂಗಮ್ಮ ಎಂಬವರು ಒಂದು ತಿಂಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಅನಾರೋಗ್ಯ ಹೆಚ್ಚಿದ ಕಾರಣ ಬಿಳ್ಳೂರು ಆರೋಗ್ಯ ಕೇಂದ್ರಕ್ಕೆ ಮಂಗಮ್ಮ ಅವರನ್ನು ಪತಿ ಕೃಷ್ಣ ಅವರು ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಅಲ್ಲಿ ವೈದ್ಯರು ಮತ್ತು ಸಿಬ್ಬಂದಿ ಇಲ್ಲದ ಕಾರಣ ಸೂಕ್ತ ಚಿಕಿತ್ಸೆ ಸಿಗದೇ ಆರೋಗ್ಯ ಕೇಂದ್ರದಲ್ಲಿ ಮಂಗಮ್ಮ ಮೃತಪಟ್ಟಿದ್ದಾಳೆ ಎಂದು ಮೃತಳ ಪತಿ ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ.
ಸಮಯಕ್ಕೆ ಸರಿಯಾಗಿ ವೈದ್ಯರು ಚಿಕಿತ್ಸೆ ನೀಡಿದ್ದರೆ ನನ್ನ ಪತ್ನಿ ಸಾಯುತ್ತಿರಲಿಲ್ಲ ಎಂದು ಮೃತರ ಪತಿ ಬೇಸರವ್ಯಕ್ತಪಡಿಸಿದ್ದಾರೆ. ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸೋಣ ಎಂದರೆ 2 ಗಂಟೆ ಕಳೆದರೂ ಆಯಂಬುಲೆನ್ಸ್ ಬರಲಿಲ್ಲ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ ಎನ್ನಲಾಗಿದೆ.
ಆಸ್ಪತ್ರೆಯಲ್ಲೆ ಮೃತಪಟ್ಟಿರುವ ಮಂಗಮ್ಮಳ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸದೆ ಹಾಗೇ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಂತರಿಸಿದ್ದು, ಮರಣ ಪ್ರಮಾಣ ಪತ್ರದ ದಾಖಲೆಗಳಿಗೂ ಮೃತ ಮಹಿಳೆಯ ಸಂಬಂಧಿಕರು ಪರಿತಪಿಸುವಂತೆ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬಿಳ್ಳೂರು ಗ್ರಾಮ ಪಂಚಾಯತ್ ಕಾರ್ಯಾಲಯದ ಸಿಬ್ಬಂದಿ ನೇತೃತ್ವದಲ್ಲಿ ಕುಟುಂಬದವರು ಸರಕಾರಿ ಸ್ಮಶಾನದಲ್ಲಿ ಮೃತದೇಹದ ಅಂತ್ಯಸಂಸ್ಕಾರ ನೆರವೇರಿಸಲಾಯಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಬಿಳ್ಳೂರು ಸಾರ್ವಜನಿಕ ಆಸ್ಪತ್ರೆ ವೈದ್ಯ ಡಾ.ಶರೀಷ್ ಒಂದು ತಿಂಗಳಿನಿಂದ ತರಬೇತಿಯಲ್ಲಿ ಇದ್ದು ಕೆಲಸಕ್ಕೆ ರಜೆ ಹಾಕಿರುವುದಾಗಿ ಆಸ್ಪತ್ರೆಯ ಸಿಬ್ಬಂದಿ ಮೃತರ ಕುಟುಂಬದ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇದ್ದರೂ ಆರೋಗ್ಯ ಸಚಿವರು ಇತ್ತ ಕಡೆ ಗಮನ ನೀಡಿಲ್ಲ ಎಂದು ಮುಖಂಡರು, ಗ್ರಾಮಸ್ಥರು ಸಚಿವರ ವಿರುದ್ಧ ಅಸಮಾಧಾನ ವ್ಯಪ್ತಡಿಸಿದ್ದಾರೆ.