ಧಾರವಾಡ: ಸ್ವಾಮೀಜಿಗಳು ಸಮಾಜಕ್ಕೆ ಮಾದರಿ. ಅವರು ಮಠ ಬಿಟ್ಟು ವಿಧಾನಸೌಧದಲ್ಲಿ ಕಾಣಿಸಿಕೊಳ್ಳುವುದು ಸರಿಯಲ್ಲ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಾನು ನೋಡಿದಂತೆ ಬಹುತೇಕ ಸ್ವಾಮೀಜಿಗಳು ವಿಧಾನಸೌಧದಲ್ಲಿಯೇ ಇರುತ್ತಾರೆ. ಇದು ಸರಿಯಾದ ಬೆಳವಣಿಗೆಯಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸ್ವಾಮೀಜಿಗಳು ರಾಜಕಾರಣಕ್ಕೆ ಬರಲಿ ಎಂದು ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಚುನಾವಣೆಯಲ್ಲಿ ಮತ ಚಲಾವಣೆ ಮಾಡುವವರು ಬುದ್ಧಿವಂತರಾಗುವವರೆಗೂ ಒಳ್ಳೆಯ ಸರಕಾರ ಬರಲು ಸಾಧ್ಯವಿಲ್ಲ. ಇಂದಿನ ದಿನಗಳಲ್ಲಿ ರಾಜಕಾರಣ ಬಹಳ ಕಲುಷಿತವಾಗಿದೆ. ಪ್ರಜಾಪ್ರಭುತ್ವದಲ್ಲಿ ತಮ್ಮ ಹಕ್ಕು ಚಲಾಯಿಸುವ ಅನೇಕರಿಗೆ ಕರ್ತವ್ಯದ ಬಗ್ಗೆ ಅರಿವು ಇಲ್ಲವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಯಡಿಯೂರಪ್ಪ ಪಕ್ಷಾತೀತ ನಾಯಕ. ಹೋರಾಟದಿಂದಲೇ ಬೆಳೆದು ನಾಲ್ಕು ಸಾರಿ ಸಿಎಂ ಆಗಿ ಸಾಕಷ್ಟು ಅನುಭವ ಹೊಂದಿದ್ದಾರೆ. ಇತ್ತೀಚಿನ ಅಧಿವೇಶನದಲ್ಲಿ ಬರೀ ತಿಕ್ಕಾಟ ನಡೆದಿವೆ ಹೊರತು ಅಭಿವೃದ್ಧಿ ಬಗ್ಗೆ ಯಾವ ಪಕ್ಷದವರೂ ಮಾತನಾಡುತ್ತಿಲ್ಲ. ಒಬ್ಬರ ಮೇಲೆ ಒಬ್ಬರು ಟೀಕೆ ಮಾಡುವುದನ್ನು ಬಿಟ್ಟು ಜನ ಕಲ್ಯಾಣ, ರಾಜ್ಯದ ಅಭಿವೃದ್ಧಿಗಾಗಿ ಆರೋಗ್ಯಕರ ಚರ್ಚೆ ನಡೆಸಲು ಪ್ರಯತ್ನಿಸಬೇಕು ಎಂದರು.

ಮುನ್ನೆಲೆಗೆ ಬರುವುದು ಸಾಮಾನ್ಯ
ಮಹದಾಯಿ ವಿಚಾರ ಚುನಾವಣೆ ಸಮಯದಲ್ಲಿ ಮುನ್ನೆಲೆಗೆ ಬರುವುದು ಸಾಮಾನ್ಯ. ಕೇಂದ್ರ ಸರಕಾರ ಅನುಮತಿ ನೀಡಿದ ಬೆನ್ನಲ್ಲೆ ಗೋವಾ ಆಕ್ಷೇಪ ತೆಗೆದು ಕೋರ್ಟ್‌ ಮೆಟ್ಟಿಲೇರುತ್ತದೆ. ವಿನಾಕಾರಣ ಕಾನೂನು ತೊಡಕು ಉಂಟು ಮಾಡುವ ಕೆಲಸ ಮಾಡುತ್ತಿದೆ. ಆದರೆ ಈ ಬಾರಿ ನೀರು ಬರುವ ಭರವಸೆ ಇದೆ. ಈ ಬಗ್ಗೆ ಜಲಸನ್ಮೂಲ ಸಚಿವರೊಂದಿಗೆ ಚರ್ಚೆ ಮಾಡಿದ್ದೇನೆ ಎಂದರು.

error: Content is protected !!