ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರು ವೈಭವೋತ್ಸವದ ಕೊನೆಯ ದಿನವಾದ ಭಾನುವಾರ 428ನೇ ವರ್ಧಂತಿ ಉತ್ಸವವು ಸಂಭ್ರಮ, ಸಡಗರದಿಂದ ನೆರವೇರಿಸಲಾಯಿತು.

ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಬೆಳಗಿನ ಜಾವದಿಂದಲೇ ಹಲವು ವಿಧಿವಿಧಾನಗಳು ಜರುಗಿದವು.

ವರ್ಧಂತಿ ನಿಮಿತ್ತ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಅಭಿಷೇಕ, ಮೂಲರಾಮದೇವರ ಪೂಜೆ ನೆರವೇರಿಸಿದರು.

ಪ್ರತಿವರ್ಷದಂತೆ ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನದ ಆಡಳಿತಾಧಿಕಾರಿಗಳು ತೆಗೆದುಕೊಂಡು ಬಂದಿದ್ದ ಶ್ರೀನಿವಾಸದೇವರ ಶೇಷವಸ್ತ್ರಗಳನ್ನು ಮೆರವಣಿಗೆ ಮೂಲಕ ಮಠದ ಪೀಠಾಧಿಪತಿಯವರಿಗೆ ತಲುಪಿಸಿದರು. ಶ್ರೀಸುಬುಧೇಂದ್ರ ತೀರ್ಥರು ಶೇಷವಸ್ತ್ರವಿದ್ದ ಹರಿವಾಣವನ್ನು ಶಿರದ ಮೇಲಿಟ್ಟುಕೊಂಡು ರಾಯರ ಮೂಲಬೃಂದಾವನಕ್ಕೆ ಸಮರ್ಪಣೆ ಮಾಡಿದರು.

ಮಠದ ಪ್ರಾಕಾರದಲ್ಲಿ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಅನುಗ್ರಹ ಸಂದೇಶ ನೀಡಿದ ಮಠದ ಶ್ರೀಗಳು, ‘ಶ್ರೀಗುರು ಸಾರ್ವಭೌಮರ ಆಶೀರ್ವಾದ ಎಲ್ಲರ ಮೇಲೂ ಇದೆ. ರಾಯರು ಭಕ್ತರ ಕಷ್ಟಗಳನ್ನು ಪರಿಹರಿಸುತ್ತಿದ್ದಾರೆ. ತಿರುಪತಿಯ ಶ್ರೀನಿವಾಸದೇವರಿಗೆ ಮಂತ್ರಾಲಯದ ಕ್ಷೇತ್ರಕ್ಕೆ ಅವಿನಾಭಾವ ಸಂಬಂಧವಿದೆ.

ಶ್ರೀರಾಘವೇಂದ್ರ ಸ್ವಾಮಿಗಳ ವರ್ಧಂತಿ ಉತ್ಸವದಲ್ಲಿ ಪ್ರತಿವರ್ಷವೂ ಶ್ರೀನಿವಾಸದ ದೇವರ ಶೇಷವಸ್ತ್ರವು ಪ್ರಸಾದ ರೂಪದಲ್ಲಿ ಮಂತ್ರಾಲಯಕ್ಕೆ ಬರುತ್ತದೆ’ ಎಂದು ತಿಳಿಸಿದರು. ಸುವರ್ಣ ರಥದಲ್ಲಿ ಪ್ರಹ್ಲಾದರಾಜರ ಮೂರ್ತಿಯನ್ನು ಇರಿಸಿ ಭಕ್ತ ಸಮೂಹದೊಂದಿಗೆ ರಥೋತ್ಸವ ನಡೆಸಲಾಯಿತು. ವಿಶೇಷ ಉಪನ್ಯಾಸ, ಅನ್ನಪ್ರಸಾದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ನಾದಹಾರ: ವರ್ಧಂತಿ ಉತ್ಸವದ ನಿಮಿತ್ತ ಚೆನ್ನೈನ ಶ್ರೀರಾಘವೇಂದ್ರ ನಾದಹಾರ ಕಲಾ ಟ್ರಸ್ಟ್‌ ಸದಸ್ಯರು ಮಠದ ಪ್ರಕಾರಾದಲ್ಲಿ ಸಾಮೂಹಿಕವಾಗಿ ವಾದ್ಯಗಳನ್ನು ನುಡಿಸಿ ರಾಯರಿಗೆ ‘ನಾದಹಾರ’ ಸಂಗೀತ ಸೇವೆ ಸಮರ್ಪಿಸಿದರು.
150ಕ್ಕೂ ಹೆಚ್ಚು ಕಲಾವಿದರು ಏಕಕಾಲಕ್ಕೆ ವಾದ್ಯಗಳನ್ನು ನುಡಿಸಿದರು. ಕಳೆದ 19 ವರ್ಷಗಳಿಂದ ಅವಿರತವಾಗಿ ಪ್ರತಿವರ್ಷವೂ ರಾಯರ ವರ್ಧಂತಿ ದಿನದಂದು ನಾದಹಾರ ಸಮರ್ಪಣೆ ಸೇವೆ ನಡೆದುಕೊಂಡು ಬಂದಿರುವುದು ವಿಶೇಷ.

ಶ್ರೀರಾಘವೇಂದ್ರ ಸ್ವಾಮಿಗಳ ಜನ್ಮಸ್ಥಳ ತಮಿಳುನಾಡಿನ ಶ್ರೀಕುಂಭಕೋಣಂನಿಂದಲೂ ಕಲಾವಿದರು ಭಾಗವಹಿಸಿದ್ದರು

error: Content is protected !!