ಬೆಂಗಳೂರು :, ಫೆಬ್ರವರಿ 26; ಮಾನವೀಯತೆಗೆ ಮಿಡಿದಿರುವ ಕರ್ನಾಟಕ ಹೈಕೋರ್ಟ್, ಪ್ರಕರಣವೊಂದರಲ್ಲಿ ಅಪರಾಧಿಯಾಗಿದ್ದ 81 ವರ್ಷದ ವೃದ್ದನಿಗೆ ಒಂದು ವರ್ಷ ಅಂಗನವಾಡಿಯಲ್ಲಿ ಉಚಿತ ಸೇವೆ ಸಲ್ಲಿಸುವ ವಿನೂತನ ಶಿಕ್ಷೆಯನ್ನು ನೀಡಿದೆ.

ತೀರಾ ವಿಳಂಬ ಎನ್ನಬಹುದಾದ ಪ್ರಕರಣದಲ್ಲಿ ನ್ಯಾಯಾಲಯ ಇಂತಹ ಅದೇಶವನ್ನು ಕೊಟ್ಟಿದೆ.

ಅಪರಾಧಿಯು ತಾನು ತಪ್ಪು ಎಸಗಿರುವುದನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಸ್ವಲ್ಪ ಔದಾರ್ಯ ತೋರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಆರೋಪದಲ್ಲಿ 2 ವಷ ಜೈಲು ಶಿಕ್ಷೆಗೆ ಒಳಗಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಐತಪ್ಪ ನಾಯ್ಕನಿಗೆ ಈ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ ವಿಧಿಸಿದೆ.

ವಿಚಾರಣಾ ನ್ಯಾಯಾಲಯ ನೀಡಿದ್ದ ಶಿಕ್ಷೆ ಪ್ರಶ್ನಿಸಿ ಐತಪ್ಪ ನಾಯ್ಕ ಸಲ್ಲಿಸಿದ್ದ ಮೇಲ್ಮನವಿಯನ್ನು ಅಲಿಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಆರ್‌. ನಟರಾಜ್‌ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ವಯಸ್ಸಾಗಿದೆ ಎಂಬ ಕಾರಣಕ್ಕೆ ನ್ಯಾಯಾಲಯ ಅವರಿಗೆ ವಿಧಿಸಿದ್ದ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಮಾರ್ಪಾಡು ಮಾಡಿ ಮೂರು ದಿನಕ್ಕೆ ಇಳಿಸಿದೆಯಲ್ಲದೇ, ಒಂದು ವರ್ಷ ಮಿತನಡ್ಕ ಅಂಗನವಾಡಿಯಲ್ಲಿ ಸ್ವಯಂ ಪ್ರೇರಣೆಯಿಂದ ಸೇವೆ ಸಲ್ಲಿಸಲು ಆದೇಶ ನೀಡಿದೆ.

“ಅರ್ಜಿದಾರರು ಈ ಪ್ರಕರಣದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ವಿಚಾರಣಾ ನ್ಯಾಯಾಲಯದ ಆದೇಶದಂತೆ ಅವರು ಮೂರು ದಿನ ಸದಾ ಜೈಲು ಶಿಕ್ಷೆಯನ್ನು ಈಗಾಗಲೇ ಅನುಭವಿಸಿದ್ದಾರೆ ಮತ್ತು ಅವರಿಗೆ 81 ವರ್ಷ ವಯಸ್ಸಾಗಿದೆ, ಜತೆಗೆ ಅವರಿಗೆ ಮಕ್ಕಳಿಲ್ಲ, ವಯಸ್ಸಾಗಿರುವ ಪತ್ನಿಯ ಆರೋಗ್ಯ ನೋಡಿಕೊಳ್ಳಬೇಕಿದೆ. ಅವರೇ ಸಾಮಾಜಿಕ ಸೇವೆ ಸಲ್ಲಿಸಲು ಸಿದ್ಧ ಎಂದು ಒಪ್ಪಿಕೊಂಡಿದ್ದಾರೆ ಹಾಗಾಗಿ ಅವರ ಮನವಿ ಪರಿಗಣಿಸಿ ಶಿಕ್ಷೆ ಮಾರ್ಪಾಡು ಮಾಡಲಾಗುತ್ತಿದೆ” ಎಂದು ನ್ಯಾಯಪೀಠ ಹೇಳಿದೆ.

ಅರ್ಜಿದಾರರ ಪರ ಶಿಕ್ಷೆ ಕಡಿತಕ್ಕೆ ಮನವಿ ಮಾಡಿದ್ದ ವಕೀಲರು, ಈ ಪ್ರಕರಣದಲ್ಲಿಅರ್ಜಿದಾರರ ವಯಸ್ಸನ್ನು ಪ್ರಮುಖವಾಗಿ ಪರಿಗಣಿಸಬೇಕಿದೆ. ಜತೆಗೆ ಅವರಿಗೆ ಮಕ್ಕಳಿಲ್ಲದ ವೃದ್ದ ಐತಪ್ಪ ನಾಯ್ಕ ಪತ್ನಿಯನ್ನು ನೋಡಿಕೊಳ್ಳಬೇಕಿದೆ. ತಪ್ಪು ಒಪ್ಪಿಕೊಂಡು ಸಾಮುದಾಯಿಕ ಸೇವೆ ಸಲ್ಲಿಸಲು ಸಿದ್ದರಿದ್ದಾರೆ. ಹಾಗಾಗಿ ಶಿಕ್ಷೆಯನ್ನು ರದ್ದುಪಡಿಸಬೇಕು ಎಂದು ಕೋರಿದ್ದರು. ನ್ಯಾಯಾಲಯ ಈ ಕೋರಿಕೆಯನ್ನು ಮನ್ನಿಸಿದೆ.

ಪ್ರಕರಣದ ಹಿನ್ನೆಲೆ: 2008ರಲ್ಲಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಗಾಯಗೊಳಿಸಿದ ಪ್ರಕರಣದಲ್ಲಿ ದಕ್ಷಿಣ ಕನ್ನಡದ ಜಿಲ್ಲಾ ನ್ಯಾಯಾಲಯ ಬಂಟ್ವಾಳದ ಐತಪ್ಪ ನಾಯ್ಕಗೆ 2 ವರ್ಷ ಶಿಕ್ಷೆ ವಿಧಿಸಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಆದ್ದರಿಂದ 2012ರ ಜು.7ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಜೆಎಂಎಫ್‌ಸಿ ಮತ್ತು ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ನೀಡಿದ್ದ ಶಿಕ್ಷೆಯ ಆದೇಶವನ್ನು ಮಾರ್ಪಾಡು ಮಾಡಲಾಗುವುದು ಮತ್ತು ಅರ್ಜಿದಾರರು ಮೂರು ದಿನಗಳ ಸದಾ ಜೈಲು ಶಿಕ್ಷೆ ಅನುಭವಿಸಬೇಕು ಮತ್ತು 10 ಸಾವಿರ ರೂ. ದಂಡ ಪಾವತಿಸಬೇಕು, ಜತೆಗೆ ಒಂದು ವರ್ಷ 2023ರ ಫೆಬ್ರವರಿ 20ರಿಂದ ಅಂಗನವಾಡಿಯಲ್ಲಿ ಸಂಬಳವಿಲ್ಲದೆ ಸಮುದಾಯ ಸೇವೆ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

error: Content is protected !!