
ನವದೆಹಲಿ: ಮಹಿಳೆಯರಿಗೆ ಅವರ ಉದ್ಯೋಗ ಸ್ಥಳಗಳಲ್ಲಿ ಹಾಗೂ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡಲು ನಿಯಮ ರೂಪಿಸುವಂತೆ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
‘ಈ ವಿಷಯವು ನೀತಿ ನಿರೂಪಣೆಗೆ ಸಂಬಂಧಿಸಿದ್ದು ಹಾಗೂ ಸರ್ಕಾರವೇ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಹೇಳಿತು.
ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಹಾಗೂ ಜೆ.ಬಿ.ಪಾರ್ದೀವಾಲಾ ಈ ಪೀಠದಲ್ಲಿದ್ದರು.
‘ಈ ಅರ್ಜಿಯಲ್ಲಿ ಹಲವು ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಇದು ನೀತಿ ನಿರೂಪಣೆಗೆ ಸಂಬಂಧಪಟ್ಟ ವಿಷಯವಾದ್ದರಿಂದ, ಅರ್ಜಿದಾರರು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯಕ್ಕೆ ಅಹವಾಲು ಸಲ್ಲಿಸುವುದು ಸೂಕ್ತ’ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಅರ್ಜಿಯನ್ನು ವಿಲೇವಾರಿ ಮಾಡಿತು.
ದೆಹಲಿ ನಿವಾಸಿ ಶೈಲೇಂದ್ರ ಮಣಿ ತ್ರಿಪಾಠಿ ಎಂಬುವವರು ವಕೀಲ ವಿಶಾಲ್ ತಿವಾರಿ ಅವರ ಮೂಲಕ ಈ ಪಿಐಎಲ್ ಸಲ್ಲಿಸಿದ್ದರು.