* ಸಮರೋಪಾದಿಯಲ್ಲಿ ಕಾಮಗಾರಿಗೆ ಸೂಚನೆ

* ಹಣ ಹಿಂತಿರುಗಿಸಿದರೆ ಅಧಿಕಾರಿಗಳ ಅಮಾನತು

* ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಗರಂ

ಮೈಸೂರು: ರಾಜ್ಯ ಮತ್ತು ಕೇಂದ್ರ ವಲಯದಿಂದ ಬಿಡುಗಡೆಯಾದ ಅನುದಾನವನ್ನು ಮಾರ್ಚ್ ತಿಂಗಳೊಳಗೆ ಬಳಕೆ ಮಾಡಬೇಕು.

ಒಂದು ವೇಳೆ ಹಣ ಬಳಸದೆ ಹಿಂತಿರುಗಿಸಿದಲ್ಲಿ ಅಂತಹ ಅಧಿಕಾರಿಗಳನ್ನು ಅಮಾನತುಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಜಯರಾಮ್ ಎಚ್ಚರಿಸಿದರು.

ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾರ್ಚ್ ಅಂತ್ಯಕ್ಕೆ ಉಳಿದಿರುವ 34 ದಿನಗಳಲ್ಲಿ ಶೇ.100ರಷ್ಟು ಅನುದಾನ ಬಳಸಬೇಕು. ಅತಿ ಕಡಿಮೆ ಪ್ರಗತಿ ಸಾಧಿಸಿರುವ ಇಲಾಖೆಗಳು ಸಮರೋಪಾದಿಯಲ್ಲಿ ಕೆಲಸ ಮಾಡಿ ಅನುದಾನ ಬಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು. ಅಧಿಕಾರಿಗಳು ಜಡತ್ವ ಬೆಳೆಸಿಕೊಂಡಿದ್ದಾರೆ. ಚುನಾಯಿತ ಪ್ರತಿನಿಧಿಗಳು ತಿಂಗಳಿಗೆ ಮತ್ತು ಮೂರು ತಿಂಗಳಿಗೆ ಸಭೆ ಮಾಡುತ್ತಿದ್ದರಿಂದ ಒಂದಷ್ಟು ಪ್ರಗತಿಗೆ ದಾರಿಯಾಗಿತ್ತು. ಈಗ ಪ್ರಮುಖ ಇಲಾಖೆಗಳ ಅಧಿಕಾರಿಗಳು ಮಂದಗತಿುಂಲ್ಲಿ ಕೆಲಸ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇದು ಒಂದು ಇಲಾಖೆಯ ನಿರ್ಲಕ್ಷ್ಯ ಅಲ್ಲ, ಎಲ್ಲಾ ಇಲಾಖೆಗಳಲ್ಲೂ ಇದೇ ಲಕ್ಷಣ ಕಂಡು ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ಮುಕ್ತ ಅವಕಾಶ ಕೊಟ್ಟಿರುವುದನ್ನು ಬಳಸದೆ ಕೈ ಚೆಲ್ಲಿ ಕುಳಿತಿದ್ದೀರಾ? ಕೊಟ್ಟ ಸೂಚನೆ ಪಾಲಿಸುತ್ತಿಲ್ಲ. ಚುನಾಯಿತ ಜನಪ್ರತಿನಿಧಿಗಳು ಇಲ್ಲದಿರುವುದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದೀರಾ ಎಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಮುಖ್ಯ ಯೋಜನಾಧಿಕಾರಿ ವಿರುದ್ಧ ಗರಂ
ತುರ್ತು ಕಾಮಗಾರಿಗಳನ್ನು ಹೊರತುಪಡಿಸಿ, ತಮ್ಮ ಗಮನಕ್ಕೆ ತಾರದೆ ಕ್ರಿಯಾಯೋಜನೆಗೆ ಅನುಮೋದನೆ ಕೋರಿ ನೇರವಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದ ಮುಖ್ಯ ಯೋಜನಾಧಿಕಾರಿ ಕಾರ್ಯ ವೈಖರಿ ವಿರುದ್ಧ ಕಿಡಿಕಾರಿದರು. ತುರ್ತು ಕಾಮಗಾರಿ ಬಿಟ್ಟು ಉಳಿದ ಕಾಮಗಾರಿಗಳಿಗೆ ಟೆಂಡರ್ ಕರೆಯುವಂತೆ ಹೇಳಲಾಗಿತ್ತು. ಆದರೆ ಉದ್ದೇಶಪೂರ್ವಕವಾಗಿ ತಮ್ಮ ಗಮನಕ್ಕೆ ತಾರದೆ ಆಡಳಿತಾತ್ಮಕ ಅನುಮೋದನೆ ಕೋರಲಾಗಿದೆ. ಇದು ಚಾಳಿಯೋ ಅಥವಾ ದಂಧೆಯೋ ಗೊತ್ತಾಗುತ್ತಿಲ್ಲ ಎಂದು ಬಿಸಿ ಮುಟ್ಟಿಸಿದರು.

ಈ ವೇಳೆ ಸಮಜಾಯಿಷಿ ನೀಡಲು ಮುಂದಾದ ಮುಖ್ಯ ಯೋಜನಾಧಿಕಾರಿ ಧನುಷ್ ಅವರು ನೇರವಾಗಿ ಸರ್ಕಾರಕ್ಕೆ ಪತ್ರ ಬರೆದಿಲ್ಲ ಎಂದರು. ಆದರೆ ಶೇ.50 :50 ಅನುಪಾತದಲ್ಲಿ ಪತ್ರ ಬರೆಯಲಾಗಿದೆ ಎನ್ನುವ ಮಾಹಿತಿಯನ್ನು ಅಧೀನ ಸಿಬ್ಬಂದಿ ವಿವರಣೆ ನೀಡುತ್ತಿದ್ದಂತೆ ಆಡಳಿತಾಧಿಕಾರಿಗಳು ಧನುಷ್ ಕಾರ್ಯ ವೈಖರಿ ನಡೆಯನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

error: Content is protected !!