*ವಿವಿಧ ತಳಿಯ ಹಣ್ಣುಗಳ ಸ್ವಾದ ಸವಿದ ಕೊಪ್ಪಳ ಜನತೆ

*ರೈತ-ಗ್ರಾಹಕರ ನಡುವೆ ಉತ್ತಮ ಸೇತುವೆ ಕಲ್ಪಿಸಿಕೊಟ್ಟ ತೋಟಗಾರಿಕೆ ಇಲಾಖೆ*

ಕೊಪ್ಪಳ : ಕೊಪ್ಪಳ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ, ಕರಬೂಜ, ಅಂಜೂರ, ಪೇರಲ, ಜೇನು ಮೇಳ-2023ರ ಸಮಾರೋಪ ಫೆಬ್ರವರಿ 19 ರಂದು ಯಶಸ್ವಿಯಾಗಿ ಜರುಗಿತು.


ತೋಟಗಾರಿಕೆ ಇಲಾಖೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಮಹಾಶಿವರಾತ್ರಿ ನಿಮಿತ್ತ ಹಣ್ಣು ಮತ್ತು ಜೇನು ಮೇಳ-2023ವನ್ನು ಫೆಬ್ರವರಿ 16 ರಿಂದ ಫೆ. 19ರವರೆಗೂ ನಾಲ್ಕು ದಿನಗಳ ಕಾಲ ನಗರದಲ್ಲಿರುವ ತೋಟಗಾರಿಕೆ ಇಲಾಖೆ (ಜಿಪಂ) ಕಚೇರಿ ಆವರಣದಲ್ಲಿ ಆಯೋಜಿಸಲಾಗಿತ್ತು. ಇದು ಇಲಾಖೆಯಿಂದ ಆಯೋಜಿಸಿದ 6ನೇ ಮಹಾಮೇಳವಾಗಿರುತ್ತದೆ.
ಈ ಮಹಾಮೇಳದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಬೆಳೆಯುವ 10ಕ್ಕೂ ಹೆಚ್ಚಿನ ವಿವಿಧ ಹಣ್ಣುಗಳಾದ ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ, ಕರಬೂಜ, ಅಂಜೂರ, ಪೇರಲ, ಬಾಳೆ, ಡ್ರಾö್ಯಗನ್ ಹಣ್ಣು, ಸಪೋಟಾ, ಪಪ್ಪಾಯ ಹಾಗೂ ಜೇನು ಮತ್ತು ಜೇನಿನ ವಿವಿಧ ಉತ್ಪನ್ನಗಳನ್ನು ಸಹ ಮಾರಾಟ ಮಾಡಲು 18ಕ್ಕೂ ಹೆಚ್ಚು ಸ್ಟಾಲಗಳನ್ನು ರೈತರಿಗೆ ಉಚಿತವಾಗಿ ನೀಡಲಾಗಿತ್ತು. ಮೇಳದಲ್ಲಿ ವಿವಿಧ ತೋಟಗಾರಿಕೆ ರೈತ ಉತ್ಪಾದಕ ಕಂಪನಿಗಳು ಹಾಗೂ ಕೊಪ್ಪಳ ಜಿಲ್ಲಾ ಹಾಪಕಾಮ್ಸ್ ಸಂಸ್ಥೆಯ ರೈತರು ಸಹ ಜಿಲ್ಲೆಯಲ್ಲಿ ರೈತರಿಂದ ಹಣ್ಣುಗಳನ್ನು ಖರೀದಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಅವಕಾಶವನ್ನು ಕಲ್ಪಿಸಲಾಗಿತ್ತು.


ಈ ಮೇಳದಲ್ಲಿ ರೈತರ ವಿವಿಧ ಉತ್ಪನ್ನಗಳನ್ನು ಕೂಡಾ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ದ್ರಾಕ್ಷಿಯ ವಿವಿಧ ತಳಿಗಳಲ್ಲದೇ ಕಲ್ಲಂಗಡಿ ಹಣ್ಣಿನ ಹಳದಿ ಮತ್ತು ಗುಲಾಬಿ ತಿರುಳು ಹೊಂದಿದ ತಳಿಗಳು, ಪಪ್ಪಾಯ ಹಣ್ಣಿನ ಮೂರು ತರಹದ ತಳಿಗಳು ಮತ್ತು ಪೇರಲ ಹಣ್ಣಿನ ಐದು ಬಗೆಯ ತಳಿಗಳಲ್ಲದೇ ದಾಳಿಂಬೆ ಹಣ್ಣಿನ ತಳಿಗಳನ್ನು ಗ್ರಾಹಕರಿಗೆ ಪೂರೈಸುವ ಮೂಲಕ ಹಣ್ಣುಗಳ ವಿವಿಧ ತಳಿಗಳ ಸ್ವಾದವನ್ನು ಸವಿಯಲು ಅವಕಾಶ ಕಲ್ಪಿಸಲಾಗಿತ್ತು. ಇದಲ್ಲದೇ ಮೇಳದಲ್ಲಿ ಉತ್ಕೃಷ್ಟ ಗುಣಮಟ್ಟದ ಜೇನು ತುಪ್ಪ ಹಾಗೂ ಜೇನಿನ ಉಪ ಉತ್ಪನ್ನಗಳನ್ನು ಕಲ್ಲಳ್ಳಿ ಜೇನು ಶಿರಸಿ ರವರು ಹಾಗೂ ಕೊಪ್ಪಳದ ರೈತ ಜೇನು ಬೆಳೆಗಾರರು ಕೂಡಾ ಭಾಗವಹಿಸಿ ಗ್ರಾಹಕರಿಗೆ ಪೂರೈಸಿರುತ್ತಾರೆ. ನಾಲ್ಕು ದಿನಗಳ ಕಾಲ ನಡೆದ ಈ ಮೇಳದಲ್ಲಿ ರೈತರು ಹಾಗೂ ಗ್ರಾಹಕರು ಇಬ್ಬರೂ ಮೇಳದ ಲಾಭವನ್ನು ಪಡೆದಿದ್ದಾರೆ.


ನಾಲ್ಕು ದಿನಗಳ ಕಾಲ ನಡೆದ ಈ ಮೇಳದಲ್ಲಿ  20,000ಕ್ಕೂ ಹೆಚ್ಚು ಗ್ರಾಹಕರು ಭಾಗವಹಿಸಿರುತ್ತಾರೆ ಹಾಗೂ  ರೂ. 25 ಲಕ್ಷಕ್ಕೂ ಹೆಚ್ಚಿನ ವಹಿವಾಟು ನಡೆದಿರುತ್ತದೆ. ರೈತರಿಗೆ ನೇರ ಮಾರುಕಟ್ಟೆ ಮತ್ತು ಬಾಕ್ಸ್ ಪ್ಯಾಕಿಂಗ್‌ಗಳಲ್ಲಿ ಹಣ್ಣುಗಳನ್ನು ಪೂರೈಸುವ ಮೂಲಕ ಅವರ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಿಕೊಟ್ಟಂತಾಗಿದೆ. ಇದರಿಂದಾಗಿ ರೈತರು ತಮ್ಮ ಉತ್ಪನ್ನಗಳಿಗೆ ಮೌಲ್ಯವರ್ಧನೆ ಕಲ್ಪಿಸಿ ಮಾರುಕಟ್ಟೆ ಕಂಡುಕೊಳ್ಳುವ ಕೌಶಲ್ಯವನ್ನು ತಿಳಿಸಿಕೊಟ್ಟಂತಾಗಿದೆ.


ಈ ಮೇಳದಲ್ಲಿ ಸಾರ್ವಜನಿಕರಿಗಾಗಿ ಹತ್ತಾರು ಹಣ್ಣುಗಳ ಪ್ರದರ್ಶನವನ್ನು ಕೈಗೊಂಡಿದ್ದು, 18 ಕ್ಕೂ ಹೆಚ್ಚು ದ್ರಾಕ್ಷಿಯ ವಿವಿಧ ತಳಿಗಳು, ಕಲ್ಲಂಗಡಿ ಹಣ್ಣಿನ 8 ವಿವಿಧ ತಳಿಗಳು (ಕೆಂಪು, ಹಳದಿ, ಬಿಳಿ, ಕಿತ್ತಳೆ ಬಣ್ಣ ಇತ್ಯಾದಿ), ಪೇರಲ ಹಣ್ಣಿನ 5 ಕ್ಕೂ ಹೆಚ್ಚು ತಳಿಗಳು ಮತ್ತು ದಾಳಿಂಬೆಯ 2 ತಳಿಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು. ಗ್ರಾಹಕರು ಇವುಗಳನ್ನು ನೋಡಿ ಅತ್ಯಂತ ಖುಷಿಪಟ್ಟರು. ರೈತರು ಸಹ ಮೇಳದಲ್ಲಿ ಪ್ರದರ್ಶನದಲ್ಲಿ ಇಟ್ಟಿರುವ ವಿವಿಧ ದ್ರಾಕ್ಷಿ ತಳಿಗಳನ್ನು ನೋಡಿ ತಾವು ಸಹ ಈ ರೀತಿಯ ತಳಿಗಳನ್ನು ಬೆಳೆಯಬೇಕೆಂದು ಇಚ್ಛಿಸಿರುತ್ತಾರೆ ಹಾಗೂ ಇಲಾಖೆಯಲ್ಲಿ ಲಭ್ಯವಿರುವ ಅನೇಕ ಯೋಜನೆಗಳ ಸದ್ಭಳಕೆ ಮಾಡಿಕೊಂಡು ದ್ರಾಕ್ಷಿ ಅಲ್ಲದೇ ಇತರೇ ಹಣ್ಣುಗಳನ್ನು ಬೆಳೆಯಲು ಆಸಕ್ತಿ ಹೊಂದಿರುತ್ತಾರೆ.


ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ಈ ಮೇಳದಲ್ಲಿ ಅವರ ಹಣ್ಣುಗಳನ್ನು ಉತ್ತಮ ರೀತಿಯಲ್ಲಿ ಪ್ಯಾಕ್ ಮಾಡಿ ಸರಬರಾಜು ಮಾಡಲು ಪುನೆಟ್ ಬಾಕ್ಸ್ ಮತ್ತು ರಟ್ಟಿನ ಬಾಕ್ಸ್ ಗಳನ್ನು ಸಬ್ಸಿಡಿ ದರದಲ್ಲಿ ನೀಡುವ ಮುಖಾಂತರ ಮೌಲ್ಯವರ್ಧನೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು, ರೈತರು ಪುನೆಟ್ ಬಾಕ್ಸ್ ನಲ್ಲಿ ದ್ರಾಕ್ಷಿ ಹಣ್ಣುಗಳನ್ನು ಪ್ಯಾಕ್ ಮಾಡಿ ಹೆಚ್ಚಿನ ಮೌಲ್ಯಕ್ಕೆ ಸರಬರಾಜು ಮಾಡಿರುತ್ತಾರೆ.
ಸೆಲ್ಫಿ ಪಾಯಿಂಟ್: ಈ ಮೇಳದ ಪ್ರಮುಖ ಆಕರ್ಷಣೆಯಾಗಿ ಹೃದಯಾಕಾರದಲ್ಲಿ ವಿವಿಧ ತಳಿಗಳ ದ್ರಾಕ್ಷಿ ಜೋಡಣೆ ಮಾಡಿದ ಸೆಲ್ಫಿ ಪಾಯಿಂಟ್ ಅಳವಡಿಸಲಾಗಿದ್ದು, ಸಾವಿರಾರು ಜನ ಗ್ರಾಹಕರು ಸೆಲ್ಫಿ ಪೋಟೊ ತೆಗೆಸಿಕೊಂಡು ಉತ್ಸಾಹ ಮೆರೆದಿದ್ದಾರೆ.


ಹೀಗೇ ಒಟ್ಟಾರೆ ರೈತರು ಮತ್ತು ಗ್ರಾಹಕರ ನಡುವೆ ಉತ್ತಮ ಸೇತುವೆ ಕಲ್ಪಿಸುವಲ್ಲಿ ಈ ಮೇಳ ಅತ್ಯಂತ ಸಹಕಾರಿಯಾಗಿದ್ದು, ರೈತರಿಗೆ ಉತ್ತಮ ದರ ಮತ್ತು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಯೋಗ್ಯ ದರದಲ್ಲಿ ಒದಗಿಸುವಲ್ಲಿ ಸಹಕಾರಿಯಾಗಿ ಅತ್ಯಂತ ಯಶಸ್ವಿಯಿಂದ ಸಮಾರೋಪಗೊಂಡಿದೆ.


ಈ ಮೇಳವು ರೈತರ ಹಣ್ಣುಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಿದಲ್ಲದೇ ಗ್ರಾಹಕರಿಗೂ ಸಹ ಯೋಗ್ಯ ಬೆಲೆಗೆ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ಒಂದೇ ಸೂರಿನಡಿ ಹತ್ತಾರು ಹಣ್ಣುಗಳನ್ನು ಮಹಾಶಿವರಾತ್ರಿ ಹಬ್ಬಕ್ಕೆ ಖರೀದಿಸಲು ಅವಕಾಶ ಕಲ್ಪಿಸಿದ್ದಕ್ಕಾಗಿ ಗ್ರಾಹಕರು ಮತ್ತು ರೈತರು ತೋಟಗಾರಿಕೆ ಇಲಾಖೆಗೆ ಅಭಿನಂದನೆಗಳೊಂದಿಗೆ ಹರ್ಷ ವ್ಯಕ್ತಪಡಿಸಿರುತ್ತಾರೆ.


“ಮುಂದಿನ ದಿನಮಾನಗಳಲ್ಲಿ ರೈತರ ಜಮೀನಿನಲ್ಲಿ ಮಣ್ಣು ಮತ್ತು ನೀರಿನ ಗುಣಧರ್ಮದ ಆಧಾರದ ಮೇಲೆ ವಿವಿಧ ಹಣ್ಣುಗಳನ್ನು ಬೆಳೆಯಲು ಅವಕಾಶ ನೀಡಲಾಗುವುದು’’ ಎಂದು ಹೇಳುತ್ತಾರೆ ತೋಟಗಾರಿಕೆ ಉಪನಿರ್ದೇಶಕರಾ ಕೃಷ್ಣ ಸಿ ಉಕ್ಕುಂದ್ ಅವರು.

error: Content is protected !!