ಕಾಲ್ನಡಿಗೆಯೊಂದಿಗೆ ಬೆಟ್ಟದತ್ತ ಹೊರಟ ಮಾಲಾಧಾರಿಗಳು: ಹನುಮ ಜನಿಸಿದ ಪುಣ್ಯ ಭೂಮಿಯಲ್ಲಿ ಹಬ್ಬದ ಸಂಭ್ರಮ.

ಕೊಪ್ಪಳ, ಡಿಸೆಂಬರ್ 4: ಹನುಮ ಜನಿಸಿದ ಭೂಮಿ ಅಂಜನಾದ್ರಿಯಲ್ಲಿ ನಡೆಯುವ ಮಹತ್ವದ ಪಾವನ ಹೋಮದ ಮುನ್ನಾ ದಿನವಾದ ಡಿಸೆಂಬರ್ 4ರಂದು ಹಬ್ಬದ ಸಂಭ್ರಮ ಕಂಡುಬಂದಿತು.

ಹನುಮವ್ರತವನ್ನೇ ಆಚರಿಸಿದ ಮಾಲಾಧಾರಿಗಳು ಪಾದಯಾತ್ರೆ ಮೂಲಕ ಕಿಷ್ಕಿಂದೆಯ ಅಂಜನಾದ್ರಿ ಪರ್ವತದತ್ತ, ಜೈಶ್ರೀರಾಮ ಘೋಷಣೆಯೊಂದಿಗೆ ಭಗವಾದ್ವಜ ಹಿಡಿದು ಕೇಸರಿ ಧರಿಸಿನೊಂದಿಗೆ ಬೆಟ್ಟದತ್ತ ಸಾಲುಸಾಲಾಗಿ ಸಾಗುತ್ತಿರುವುದು, ದೇವರ ದರ್ಶನಕ್ಕಾಗಿ ಕುಟುಂಬ ಸಮೇತ ಬಂದ ಭಕ್ತರು ಬಯಲು ಗದ್ದೆಗಳಲ್ಲಿ ವಾಸ್ತವ್ಯ ಹೂಡುತ್ತಿರುವುದು ಕಂಡು ಬಂದಿತು.

ಭಗವಾಧ್ವಜ ಹಿಡಿದು ಸಾಗಿದರು: ಕೊಪ್ಪಳ, ಗಂಗಾವತಿ, ಕಾರಟಗಿ, ಕನಕಗಿರಿ ಸುತ್ತಿಲಿನ ನಾನಾ ಹಳ್ಳಿಗಳ ಹನುಮ ಮಾಲಾಧಾರಿಗಳು ಕೈಯಲ್ಲಿ ಭಗವಾದ್ವಜ ಹಿಡಿದು, ವಾಹನಗಳಿಗೆ ಭಗವಾಧ್ವಜ ಕಟ್ಟಿ ತಂಡೋಪತಂಡವಾಗಿ ಬೆಟ್ಟದತ್ತ ಸಾಗುತ್ತಿರುವುದು ಸಾಮಾನ್ಯ ದೃಶ್ಯವಾಗಿತ್ತು.

ಹನುಮ ದೇವಾಲಯಗಳಲ್ಲಿ ಪೂಜೆ: ತಾವುಗಳು ನಡೆಯುವ ದಾರಿಯಲ್ಲಿನ ಹನುಮ ದೇವಾಲಯಗಳಲ್ಲಿ ಮಾಲಾಧಾರಿಗಳು ಪೂಜೆ ನೆರವೇರಿಸಿ, ದೇವಸ್ಥಾನದ ಆವರಣದಲ್ಲಿ ವಿರಮಿಸಿ ಸಾಗಿದರು. ಅಭಯ ಆಂಜನೇಯ ಸ್ವಾಮಿ ದೇವಸ್ತಾನ ಸೇರಿದಂತೆ ಇನ್ನೀತರ ಕಡೆಗಳಲ್ಲಿ ಭಕ್ತರು ವಿರಮಿಸಿರುವುದು ಕಂಡು ಬಂದಿತು.

ಗಮನ ಸೆಳೆದ ಒದ್ನಾಳ ಮಾಲಾಧಾರಿಗಳು: ಸಿಂಧೋಗಿ ಹತ್ತಿರದ ಒದ್ನಾಳದಿಂದ ಅಂಜನಾದ್ರಿಗೆ ಹೊರಟಿದ್ದ ಮಾಲಾಧಾರಿಗಳು ವಿಶ್ರಾಂತಿಗಾಗಿ ಅಗಳಕೇರಾ ಜಮೀನಿನಲ್ಲಿ ಸಾಲಾಗಿ ಮಲಗಿ ಗಮನ ಸೆಳೆದರು.

ಹನುಮ ಆರಾಧಕರಿಂದ ಭಕ್ತಿ ಸೇವೆ: ದಾರಿಯಲ್ಲಿ ಸಂಚರಿಸುತ್ತಿದ್ದ ಮಾಲಾಧಾರಿಗಳಿಗೆ ಬರ್ರಿ ಸ್ವಾಮಿಗಳೇ ಎಂದು ಕರೆಯುತ್ತ ಅಗಳಕೇರಾದ ಮಂಜುನಾಥ ಶೆಟ್ರು ಜಿಎಂ ಗಂಗಾವತಿ, ರಾಜು ಗಡಾದ ಮತ್ತು ಮೇಘರಾಜ ಸಿಂಧೋಗಿ ಅವರು ಫಲಾವು ಮತ್ತು ಮಜ್ಜಿಗೆಯ ವಿತರಣೆ ಸೇವೆ ಮಾಡಿದರು.

ಆಂಜನೇಯ ದೇವರ ಸ್ತುತಿ: ಅಂಜನಾದ್ರಿ ಪರ್ವತದತ್ತ ಹೆಜ್ಜೆ ಹಾಕುತ್ತಿರುವ ಭಕ್ತರು ಮೊಬೈಲನಲ್ಲಿ ಆಂಜನೇಯ ದೇವರ ಕುರಿತ ಭಕ್ತಿ ಗೀತೆ ಕೇಳುತ್ತ, ಕೆಲ ಭಕ್ತರು ನಟ ಪುನಿತ್ ರಾಜಕುಮಾರ ಅವರ ಫೋಟೊ ಹಿಡಿದು ಸಾಗುತ್ತಿರುವುದು ಕಂಡು ಬಂದಿತು.

ಎಸ್ಪಿ ಅವರ ಪ್ರತಿಕ್ರಿಯೆ: ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಹಾಯವಾಣಿ ಸ್ಥಾಪಿಸಲಾಗಿದೆ. ಮಾಲಾಧಾರಿಗಳು ನಿರ್ಭಯದಿಂದ ಬಂದು ಹೋಗಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ ಅವರು ತಿಳಿಸಿದ್ದಾರೆ.

ನೋಡಲ್ ಅಧಿಕಾರಿಗಳ ಪ್ರತಿಕ್ರಿಯೆ: ಹನುಮ ಮಾಲಾಧಿಕಾರಿಗಳಿಗೆ ಆಂಜನೇಯ ದರ್ಶನಕ್ಕಾಗಿ ಅಂಜನಾದ್ರಿ, ಗಂಗಾವತಿ ಮತ್ತು ಹುಲಗಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹನುಮಮಾಲಾ ಕಾರ್ಯಕ್ರಮದ ವಿಶೇಷ ನೋಡಲ್ ಅಧಿಕಾರಿಗಳು ಆಗಿರುವ ಸಹಾಯಕ ಆಯುಕ್ತರಾದ ಬಸವಣ್ಣೆಪ್ಪ ಕಲಶೆಟ್ಟಿ ಅವರು ಪ್ರತಿಕ್ರಿಯಿಸಿದ್ದಾರೆ.

ನಮ್ಮ ನೆಚ್ಚಿನ ದೇವರು: ನಮ್ಮ ನೆಚ್ಚಿನ ದೇವರಾದ ಆಂಜನೇಯ ದರ್ಶನಕ್ಕಾಗಿ ನಾವು ಪ್ರತಿ ವರ್ಷವೂ ನಮ್ಮೂರಿನಿಂದ‌ ನಡೆದು ಬರುತ್ತೇವೆ ಎಂದು ಹಗರಿಬೊಮ್ಮನಹಳ್ಳಿ ಮಹೇಶ ಮತ್ತು ಬ್ಯಾಲ್ಯಾಳದ ಶ್ರೀಧರ ಅವರು ಪ್ರತಿಕ್ರಿಯಿಸಿದರು.

error: Content is protected !!