ಕೊಪ್ಪಳ: ಕುಷ್ಟಗಿ ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ನಡೆಸಿದ್ದರೂ ಬಿಲ್‌ ನೀಡಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಂಗಳವಾರ ಸಾಮಗ್ರಿ ಪೂರೈಕೆದಾರರು ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಕ್ರಿಮಿನಾಶಕ ಸೇವಿಸಲು ಯತ್ನಿಸಿದರು.

ಕುಷ್ಟಗಿ ತಾಲ್ಲೂಕಿನ ತುಗ್ಗಲಡೋಣಿ ಸೇರಿದಂತೆ ಹಲವು ಕಡೆಗಳಲ್ಲಿ ಚೆಕ್ ಡ್ಯಾಂ, ಕಾಂಕ್ರೀಟ್ ರಸ್ತೆ, ಹೊಲದ ರಸ್ತೆ, ಚರಂಡಿ, ಕೆರೆ ಹೂಳೆತ್ತುವುದು ಸೇರಿ ನಾನಾ ಕಾಮಗಾರಿಗಳು ಪೂರ್ಣಗೊಳಿಸಿ ಮೂರು ವರ್ಷಗಳಾಗಿವೆ. ಬಿಲ್‌ ಪಾವತಿಸುವಂತೆ ಹಲವು ಬಾರಿ ಅಲೆದಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಸಾಕುಸಾಕಾಗಿ ಹೋಗಿದೆ. ಆದ್ದರಿಂದ ಕ್ರಿಮಿನಾಶಕ ಕುಡಿಯಲು ತೀರ್ಮಾನಿಸಿಕೊಂಡೇ ಇಲ್ಲಿಗೆ ಬಂದಿದ್ದೇವೆ ಎಂದು ಹನುಮಂತ ಹಿರೇಮನಿ ಮಾಧ್ಯಮಗಳಿಗೆ ತಿಳಿಸಿದರು.

2018-19ರಲ್ಲಿ ಕುಷ್ಟಗಿ ತಾಲ್ಲೂಕಿನಲ್ಲಿ ನರೇಗಾ ಕಾಮಗಾರಿಗಳ ಬಿಲ್‌ಗಳನ್ನು ನೀಡಿಲ್ಲ. ಜನಪ್ರತಿನಿಧಿಗಳು ಹಾಗೂ ಮಾಜಿ ಶಾಸಕರು ಹೇಳಿದರೂ ಪ್ರಯೋಜನವಾಗುತ್ತಿಲ್ಲ. ಬಿಲ್ ವಿಳಂಬದಿಂದ ಈಗಾಗಲೇ ಇಬ್ಬರು ಸಾಮಗ್ರಿ ಪೂರೈಕೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಲಗಾರರು ಪ್ರತಿದಿನ ಮನೆಗೆ ಬರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದಷ್ಟು ಬೇಗನೆ ಬಿಲ್‌ ಪಾವತಿಸಬೇಕು ಎಂದು ಆಗ್ರಹಿಸಿದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು. ಶರಣು ತೆಗ್ಗಿಹಾಳ ಎಂಬುವರು ಕ್ರಿಮಿನಾಶಕ ಸೇವಿಸಲು ಯತ್ನಿಸುತ್ತಿದ್ದಂತೆ ಪೊಲೀಸರು ಜಿಲ್ಲಾಡಳಿತ ಭವನದ ಹೊರಗಡೆ ಕಳುಹಿಸಿದರು. ಅಲ್ಲಿ ಪ್ರತಿಭಟಿಸಿ ಸಿಇಒ ಉದ್ದೇಶಪೂರ್ವಕ ನಿರ್ಲಕ್ಷ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. ಕೆಲ ಹೊತ್ತಿನ ಬಳಿಕ ಮೂರ್ನಾಲ್ಕು ಜನಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಬಳಿ ಚರ್ಚೆಗೆ ಅವಕಾಶ ಮಾಡಿಕೊಟ್ಟರು.

error: Content is protected !!