
ಕೊಪ್ಪಳ: ನಗರದ ವಿವಿಧ ಬಡಾವಣೆಗಳ ಮನೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಕಲ್ಯಾಣ ನಗರ ಹಾಗೂ ಗಣೇಶ ನಗರದಲ್ಲಿ ಒಟ್ಟು ನಾಲ್ಕು ಮನೆಗಳಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ನಡೆದಿದ್ದವು.
ಒಂದು ವಾರದ ಅವಧಿಯಲ್ಲಿ ಕಲ್ಯಾಣ ನಗರದಲ್ಲಿಯೇ ಎರಡು ಮನೆಗಳಲ್ಲಿ ಘಟನೆ ನಡೆದಿದ್ದರಿಂದ ಅಲ್ಲಿನ ಜನ ಆತಂಕಕ್ಕೆ ಒಳಗಾಗಿದ್ದರು. ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಅಡುಗೆ ಗುತ್ತಿಗೆದಾರ ದಾವಣಗೆರೆ ಜಿಲ್ಲೆಯ ನಾಗರಕಟ್ಟಿ ಗ್ರಾಮದ ಪುರುಷೋತ್ತಮ ನಾಯ್ಕ್ (20), ಗಾರೆ ಕೆಲಸ ಮಾಡುತ್ತಿದ್ದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ವಿಜಯ್ ಮಾಳಾ (26) ಮತ್ತು ಆಟೊ ಚಾಲಕ ನಾಗರಕಟ್ಟಿ ಗ್ರಾಮದ ಅಜಯ್ ನಾಯ್ಕ್ (22) ಬಂಧಿತರು. ಇವರಿಂದ ₹7.90 ಲಕ್ಷ ಮೌಲ್ಯ ಬೆಲೆಬಾಳುವ 155 ಗ್ರಾಂ ಬಂಗಾರದ ಆಭರಣಗಳು ಮತ್ತು ₹5,000 ನಗದು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ಹಾಗೂ ಡಿಎಸ್‌ಪಿ ಶರಣಬಸಪ್ಪ ಸುಬೇದಾರ್ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆಯ ಇನ್‌ಸ್ಟೆಕ್ಟರ್ ಸಂತೋಷ ಡಿ. ಹಳ್ಳೂರ, ಸಿಬ್ಬಂದಿ ಖಾಜಾಸಾಬ್, ಸುಭಾಷ, ಚನ್ನವೀರ, ಅಶೋಕ, ಕೊಟ್ರಯ್ಯ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮಾಡಲಾಗಿತ್ತು.