
ನವದೆಹಲಿ: ‘ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆ ಮತ್ತು ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಬಡ್ತಿ ಸಂಬಂಧ ಕೊಲಿಜಿಯಂ ನೀಡಿರುವ ಶಿಫಾರಸನ್ನು ಅನುಮೋದನೆ ಮಾಡದಿದ್ದಲ್ಲಿ, ಆಡಳಿತಾತ್ಮಕ ಹಾಗೂ ನ್ಯಾಯಾಂಗೀಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
ಆದರೆ ಅದು ಅಷ್ಟೊಂದು ಹಿತಕರವಾಗಿ ಇರುವುದಿಲ್ಲ’ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಎಚ್ಚರಿಕೆ ನೀಡಿದೆ.
ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ವೇಳೆ ಕೇಂದ್ರದ ವಿಳಂಬ ಧೋರಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಸಂಜಯ್ ಕೃಷ್ಣ ಕೌಲ್ ಹಾಗೂ ಅಭಯ್ ಎಸ್. ಓಕಾ ಅವರಿದ್ದ ಪೀಠವು, ‘ಅಹಿತಕರವಾದ, ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡಬೇಡಿ’ ಎಂದಿತು.
ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆ ಹಾಗೂ ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕದ ಕುರಿತು ಕೊಲಿಜಿಯಂ ನೀಡಿರುವ ಶಿಫಾರಸಿಗೆ ಶೀಘ್ರವೇ ಅನುಮೋದನೆ ನೀಡುವುದಾಗಿ ಸರ್ಕಾರದ ಪರ ಹಾಜರಿದ್ದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರು ತಿಳಿಸಿದರು.
ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್, ಸಂಜಯ್ ಕರೋಲ್, ಪಿ.ವಿ. ಸಂಜಯ್ ಕುಮಾರ್, ಅಹ್ಸಾನುದ್ದೀನ್ ಅಮಾನುಲ್ಲಾ ಹಾಗೂ ಮನೋಜ್ ಮಿಶ್ರಾ ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡುವಂತೆ ಕೊಲಿಜಿಯಂ 2022ರ ಡಿಸೆಂಬರ್ 13ರಂದು ಶಿಫಾರಸು ಮಾಡಿತ್ತು.
ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಹಾಗೂ ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಬೇಕು ಎಂದು ಕೊಲಿಜಿಯಂ ಜನವರಿ 31ರಂದು ಶಿಫಾರಸು ಮಾಡಿತ್ತು.
ವರ್ಗಾವಣೆ ಸಂಬಂಧ ಸೆಪ್ಟೆಂಬರ್ ಹಾಗೂ ನವೆಂಬರ್‌ನಲ್ಲಿ ಸುಮಾರು 10 ಶಿಫಾರಸುಗಳನ್ನು ಕೊಲಿಜಿಯಂ ಮಾಡಿತ್ತು. ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಪಾತ್ರವು ಅತ್ಯಲ್ಪವಾದದ್ದು. ಆದರೂ, ‘ಕೊಲಿಜಿಯಂ ಶಿಫಾರಸುಗಳಿಗೆ ಅನುಮೋದನೆ ನೀಡದೆ, ವಿಳಂಬ ಮಾಡುತ್ತಿರುವುದು ಕೆಟ್ಟ ಸಂದೇಶ ನೀಡುತ್ತಿದೆ. ಇದನ್ನು ಕೊಲಿಜಿಯಂ ಎಂದೂ ಒಪ್ಪುವುದಿಲ್ಲ’ ಎಂದೂ ನ್ಯಾಯಾಲಯ ಹೇಳಿದೆ.
‘ಎಲ್ಲಕ್ಕಿಂತ ಗಂಭೀರವಾದ ವಿಚಾರ’
‘ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆ ಕುರಿತು ಕೇಂದ್ರ ಸರ್ಕಾರವು ನಿರ್ಧಾರ ತೆಗೆದುಕೊಳ್ಳದೇ ಇರುವುದು ಬಹಳ ಗಂಭೀರವಾದ ವಿಚಾರವಾಗಿದೆ. ಎಲ್ಲಕ್ಕಿಂತಲೂ ಹೆಚ್ಚು ಗಂಭೀರವಾದ ವಿಚಾರವಾಗಿದೆ’ ಎಂದು ನ್ಯಾಯಾಲಯ ಹೇಳಿದೆ.
‘ನಾವು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಅದಕ್ಕೆ ನೀವು ಅವಕಾಶ ನೀಡಬಾರದು’ ಎಂದು ಸುಪ್ರೀಂ ಕೋರ್ಟ್ ಹೇಳಿತು. ‘ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳ್ಳಲಿದೆ. ಹಾಗಾಗಿ ಏನ್ನನ್ನೂ ದಾಖಲಿಸಿಕೊಳ್ಳಬೇಡಿ’ ಎಂದು ಅಟಾರ್ನಿ ಜನರಲ್ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು, ‘ಈ ಪ್ರಕ್ರಿಯೆ ಯಾವಾಗಿನಿಂದಲೂ ನಡೆಯುತ್ತಿದೆ. ಆದರೆ, ಯಾವಾಗ ಇದು ಪೂರ್ಣಗೊಳ್ಳಲಿದೆ? ಹಲವು ವರ್ಷಗಳಿಂದ ಈ ಪ್ರಕ್ರಿಯೆ ನಡೆಯುತ್ತಲೇ ಇದೆ’ ಎಂದಿತು. ಕೊಲಿಜಿಯಂ ಶಿಫಾರಸುಗಳಿಗೆ ಅನುಮೋದನೆ ನೀಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಒಂದು ವಾರದ ಅವಕಾಶ ನೀಡಿತು.