ಗಂಗಾವತಿ: ತಾವು ಅಧಿಕಾರದಲ್ಲಿದ್ದಾಗ 2016ರಲ್ಲಿ ನಗರದಲ್ಲಿ ನಡೆದ ಹನುಮಮಾಲೆ ಸಂಕೀರ್ತನಾ ಯಾತ್ರೆಯಲ್ಲಿ ಸೃಷ್ಟಿಯಾದ ಗಲಭೆಗೆ ಪುಷ್ಟಿ ನೀಡಿದ್ದ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ, ಅಂದು ಹನುಮಾಲಾಧಾರಿಗಳು ಮತ್ತು ರಾಮಭಕ್ತರನ್ನು ಕಳ್ಳರೆಂದು ಹೇಳಿಕೆ ನೀಡಿ, ನೂರಾರು ಹಿಂದು ಯುವಕರ ಮೇಲೆ ಪ್ರಕರಣ ದಾಖಲಿಸುವಂತೆ ಮಾಡಿದ್ದರು.
ಆದರೆ ಈಗ ಅದೇ ಹನುಮಮಾಲಾಧಾರಿಗಳಿಗೆ ಸ್ವಾಗತಿಸಿ ಬ್ಯಾನರ್ ಅಳವಡಿಸಿರುವ ಇಕ್ಬಾಲ್ ಅನ್ಸಾರಿ ಹಿಂದು ಮತಗಳ ಓಲೈಕೆಗಾಗಿ ಡೋಂಗಿ ನಾಟಕ ಮಾಡುತ್ತಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ನಗರ ಅಧ್ಯಕ್ಷ ವೆಂಕಟೇಶ ಕುರಬರ ಆಕ್ರೋಶ ವ್ಯಕ್ತಪಡಿಸಿ, ಹನುಮಮಾಲೆ ಕಾರ್ಯಕ್ರಮಕ್ಕೆ ಅನ್ಸಾರಿ ಹಾಕಿರುವ ಸ್ವಾಗತ ಬ್ಯಾನರ್‍ಗೆ ಖಂಡಿಸಿದ್ದಾರೆ.
ಈ ಕುರಿತು ಅವರು ಮಾಧ್ಯಮಗಳಿಗೆ ತಮ್ಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ತಾಲೂಕಿನ ಐತಿಹಾಸಿಕ ಅಂಜನಾದ್ರಿ ಪರ್ವತದ ಆಂಜನೇಯಸ್ವಾಮಿಗೆ ಶ್ರದ್ಧೆಯಿಂದ ಹಿಂದುಗಳು ಮಾಲೆ ಧರಿಸಿ ವ್ರತಾಚರಣೆ ಮಾಡುತ್ತಿದ್ದಾರೆ.
ಅಂಜನಾದ್ರಿ ಪರ್ವತ ಸಮಸ್ತ ಹಿಂದುಗಳ ಆರಾಧ್ಯ ಪುಣ್ಯಕ್ಷೇತ್ರವಾಗಿದೆ. ಈ ಹಿಂದೆ 2016ರಲ್ಲಿ ಹನುಮಮಾಲೆ ಸಂಕೀರ್ತನ ನಡೆಯುತ್ತಿದ್ದ ಸಂದರ್ಭದಲ್ಲಿ ಗಂಗಾವತಿ ನಗರದಲ್ಲಿ ಕೆಲವು ದುಷ್ಟ ಶಕ್ತಿಗಳು ಮಾಲಾಧಾರಿಗಳ ಮೇಲೆ ಕಲ್ಲು ಎಸೆದು ಗಲಭೆ ಸೃಷ್ಟಿಸಿದ್ದರು. ಅಂದು ಹಿಂದು-ಮುಸ್ಲಿಂ ಯುವಕರ ಮಧ್ಯೆ ವಿವಾದ ಉಂಟಾಗಿ ಕೋಮುಗಲಭೆಗೆ ಕಾರಣವಾಗಿತ್ತು.
ಈ ಸಂದರ್ಭದಲ್ಲಿ ಶಾಸಕರಾಗಿದ್ದ ಇಕ್ಬಾಲ್ ಅನ್ಸಾರಿ ಹಿಂದು-ಮುಸ್ಲಿಂರ ನಡುವೆ ಸೌಹಾರ್ದತೆ ಕಾಪಾಡುವ ಬದಲು ಹಿಂದುಗಳನ್ನು ನಿಂದಿಸಿ, ಹನುಮ ಮಾಲೆಧಾರಿಗಳ ಹೆಸರಿನಲ್ಲಿ ಹೊರಗಿನಿಂದ ಬಂದು ಗಲಭೆ ಎಬ್ಬಿಸುತ್ತಿದ್ದಾರೆ ಎಂದು ಪ್ರಚೋದನೆ ನೀಡಿ ಗಲಭೆಗೆ ಕಾರಣರಾಗಿದ್ದರು. ಆದರೆ ಅಂಜನಾದ್ರಿಯಲ್ಲಿ ಅಪಾರ ಶ್ರದ್ಧೆ ಹೊಂದಿರುವ ಹಿಂದುಗಳು ಯಾವುದೇ ಪ್ರಕರಣಗಳಿಗೆ ಹೆದರದೇ ಪ್ರತಿ ವರ್ಷವೂ ಮಾಲೆ ಧರಿಸಿ ವ್ರತಾಚರಣೆ ಮಾಡುತ್ತಾ ಬಂದಿದ್ದಾರೆ. ಈ ವರ್ಷವೂ ಕೂಡಾ ರಾಜ್ಯದಾದ್ಯಂತ ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಮಾಲೆ ಧರಿಸಿ ವಿಸರ್ಜನೆಗೆ ಅಂಜನಾದ್ರಿ ಪರ್ವತಕ್ಕೆ ಆಗಮಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಡಿಸೆಂಬರ್-5 ರಂದು ಗಂಗಾವತಿಯಲ್ಲಿ ಬೃಹತ್ ಸಂಕೀರ್ತನಾ ಯಾತ್ರೆ ನಡೆಯಲಿದೆ. ಈ ಯಾತ್ರೆಗೆ ವಿವಿಧ ರಾಜಕಾರಣ ಗಳು ಸ್ವಾಗತಿಸಿ ಬ್ಯಾನರ್ ಹಾಕುತ್ತಿದ್ದಾರೆ. ಅದೇ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಕೂಡಾ ಸ್ವಾಗತ ಬ್ಯಾನರ್ ಹಾಕಿದ್ದು, ನಾವು ತೀವ್ರವಾಗಿ ಖಂಡಿಸುತ್ತಿದ್ದೇವೆ. ಇಕ್ಬಾಲ್ ಅನ್ಸಾರಿ ಕೋಮು ಗಲಭೆ ಸೃಷ್ಟಿಸಿ ನೂರಾರು ಯುವಕರ ವಿರುದ್ಧ ಪ್ರಕರಣ ದಾಖಲಿಸಿ ಇಂದಿಗೂ ಕೋರ್ಟ್‍ಗೆ ಅಲೆಯುವಂತೆ ಮಾಡಿದ್ದಾರೆ.
ಆದರೆ ಈಗ ದಿಢೀರ್ ಎಚ್ಚೆತ್ತುಕೊಂಡು ಹನುಮ ಮಾಲೆ ಕಾರ್ಯಕ್ರಮಕ್ಕೆ ಸ್ವಾಗತ ಕೊರಿ ನಗರದಲ್ಲಿ ಬ್ಯಾನರ್ ಅಳವಡಿಸಿದ್ದಾರೆ. ಚುನಾವಣೆ ಬರುತ್ತಿರುವ ಈ ಸಮಯದಲ್ಲಿ ಅನ್ಸಾರಿ ಅವರು ಮಾಲಾಧಾರಿಗಳಿಗೆ ಶುಭ ಕೊರಿ ಸ್ವಾಗತ ಬ್ಯಾನರ್ ಅಳವಡಿಸಿರುವುದು ಹಿಂದು ಮತಗಳನ್ನು ಓಲೈಕೆ ಮಾಡುವ ಒಂದೇ ಉದ್ದೇಶವಾಗಿದೆ.
ಹನುಮ ಮತ್ತು ರಾಮಭಕ್ತರು ಕಳ್ಳರು, ಮಾಲೆ ಹೆಸರಿನಲ್ಲಿ ಮಚ್ಚು, ಲಾಂಗು ಹಿಡಿದು ರಾಮಭಕ್ತರು ಬರುತ್ತಾರೆ. ಅವರಿಗೆ ಗಂಗಾವತಿಯಲ್ಲಿ ಬರದಂತೆ ಕಡಿವಾಣ ಹಾಕಬೇಕು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ ಇಕ್ಬಾಲ್ ಅನ್ಸಾರಿ ಇಂದು ಅದೇ ಹನುಮ ಮಾಲಾಧಾರಿಗಳನ್ನು ಸ್ವಾಗತಿಸುತ್ತಿರುವುದು ಅವರ ಡೋಂಗಿ ನಾಟಕ ಎಂದು ವೆಂಕಟೇಶ ಲೆವಡಿ ಮಾಡಿದ್ದಾರೆ.
ಮುಂದುವರೆದು ಹೇಳಿಕೆ ನೀಡಿರುವ ವೆಂಕಟೇಶ, ದೇಶದಲ್ಲಿ ಮತ್ತು ಇತ್ತೀಚಿಗೆ ಮಂಗಳೂರಿನಲ್ಲಿ ಉಗ್ರನೊಬ್ಬ ಕುಕ್ಕರನಲ್ಲಿ ಬಾಂಬ್ ಬ್ಲಾಸ್ಟ್ ಮಾಡಿರುವುದು, ನಗರದಲ್ಲಿ ಪಿಎಫ್‍ಐ ಮುಖಂಡರನ್ನು ಬಂಧಿಸಿರುವುದನ್ನು ಖಂಡಿಸದೇ ಮೌನವಾಗಿದ್ದ ಇಕ್ಬಾಲ್ ಅನ್ಸಾರಿ ಅವರು ಹನುಮ ಮಾಲೆ ವಿಸರ್ಜನೆಗೆ ಬರುತ್ತಿರುವ ಮಾಲಾಧಾರಿಗಳನ್ನು ಸ್ವಾಗತಿಸುತ್ತಿರುವುದು ಹಿಂದುಗಳ ಓಲೈಕೆಗೆ ಮಾತ್ರ ಎಂಬುದು ಯಾರು ಮರೆಯಬಾರದು.
ಅನ್ಸಾರಿ ಅವರಿಗೆ ನಿಜವಾಗಿಯೂ ಹನುಮ ಮತ್ತು ರಾಮಭಕ್ತರ ಮೇಲೆ ಮತ್ತು ಅಂಜನಾದ್ರಿಯಲ್ಲಿ ಶ್ರದ್ಧೆ, ಭಕ್ತಿ ಇದ್ದರೆ ಮೊದಲು ಕನ್ನಡ ನಾಡಿನಲ್ಲಿ ದುಷ್ಕøತ್ಯ ನಡೆಸುತ್ತಿರುವ ಮುಸ್ಲಿಂ ಉಗ್ರರನ್ನು ಖಂಡಿಸಬೇಕು ಎಂದು ಒತ್ತಾಯಿಸಿದ್ದಾರೆ.