
ವಚನಗಳ ರಕ್ಷಣೆಗೆ ಶ್ರಮಿಸಿದ ಕ್ರಾಂತಿ ಪುರುಷ ಮಾಚಿದೇವರು : ಡಾ ವಿ.ಬಸವರಾಜ
ಕೊಪ್ಪಳ: ಕಾಯಕ ನಿಷ್ಠೆಯಿಂದ ಸಾಂಸ್ಕತಿಕ ನಾಯಕರಾದ ಮಡಿವಾಳ ಮಾಚಿದೇವರು, ವಚನಗಳ ರಕ್ಷಣೆಗೆ ಶ್ರಮಿಸಿದವರು ಎಂದು ಚಿತ್ರದುರ್ಗ ಜಿಲ್ಲೆಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ ವಿ.ಬಸವರಾಜ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ತಾಲೂಕು ಕ್ರೀಡಾಂಗಣದಲ್ಲಿ ಫೆಬ್ರವರಿ 01 ರಂದು ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಶ್ರೀ ಮಡಿವಾಳ ಮಾಚಿದೇವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಶರಣ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿನ ತಳಮಟ್ಟದ ಜನರನ್ನು ಮೇಲಕ್ಕೆತ್ತುವ ಕಾಯಕಕ್ಕಾಗಿ ಶ್ರಮಿಸಿದ ಕ್ರಾಂತಿ ಪುರುಷ ಮಡಿವಾಳ ಮಾಚಿದೇವರಾಗಿದ್ದಾರೆ. 12ನೇ ಶತಮಾನದ ಕಲ್ಯಾಣ ಕ್ರಾಂತಿಯಲ್ಲಿ ಅಳಿದುಳಿದ ವಚನಗಳನ್ನು ಕಾಪಾಡಿದವರು ಮಾಚಿದೇವರು. 1111 ರಲ್ಲಿ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಪರ್ವತಯ್ಯ ಹಾಗೂ ಸುಜ್ಞಾನಮ್ಮ ದಂಪತಿಗಳ ಪುತ್ರರಾಗಿ ಮಡಿವಾಳ ಮಾಚಿದೇವರು ಜನಿಸಿದರು ಎಂದು ಅವರ ಬಗ್ಗೆ ತಿಳಿಯುತ್ತದೆ. ತನ್ನ ಗುರುಗಳಾದ ಮಲ್ಲಿಕಾರ್ಜುನಯ್ಯ ಸ್ವಾಮೀಗಳ ಆಶಯದಂತೆ ಕಲ್ಯಾಣಕ್ಕೆ ಪ್ರವೇಶಿಸಿದರು. ಹನ್ನೆರಡನೇ ಶತಮಾನದಲ್ಲಿ ಜಾತಿವ್ಯವಸ್ಥೆ ವಿರುದ್ಧ ಧ್ವನಿ ಎತ್ತಿ ಒಬ್ಬ ವ್ಯಕ್ತಿಯನ್ನು ಜಾತಿಯಿಂದ ಗುರುತಿಸದೆ ಬದುಕಿನ ಶೈಲಿಯಿಂದ ಗುರುತಿಸಬೇಕು ಎಂಬ ಕರೆ ನೀಡಿದ ಮೊದಲಿಗರು ಮಾಚಿದೇವರು. ದೇಹದ ಮೈಲಿಗೆ ಎಂಬ ಡಂಬಾಚಾರದ ಭಕ್ತಿಯನ್ನು ತೊರೆದು, ಶುದ್ಧ ಮನಸ್ಸಿನಿಂದ ಶರಣರನ್ನು ಆರಾಧಿಸಬೇಕು. ಪ್ರತಿಯೊಬ್ಬ ವ್ಯಕ್ತಿಯು ಅನುಭವಿಗಳ ಅನುಭವಗಳನ್ನು ಅರಿತು ಜೀವನ ಕಟ್ಟಿಕೊಳ್ಳಬೇಕು ಎಂಬ ನೀತಿಯನ್ನು ಸಾರಿದರು. ಬಡವರು, ಸಾಮಾಜಿಕ ಬಹಿಷ್ಕಾರ ಹಾಗೂ ಶೋಷಣೆಗೆ ಒಳಗಾದವರ ಬಗ್ಗೆ ಚಿಂತಿಸಿ ವ್ಯಕ್ತಿ ಮತ್ತು ವ್ಯಕ್ತಿಗಳ ಬಗ್ಗೆ ಇರುವ ಆತಂಕವನ್ನು ಹೋಗಲಾಡಿಸಲು ಪ್ರಮಾಣಿಕ ಪ್ರಯತ್ನ ಮಾಡಿದರು ಎಂದರು.

ಬಸವಾದಿ ಶರಣರು, ಮಾಚಯ್ಯನವರ ನೇತೃತ್ವದಲ್ಲಿ ವಚನಗಳನ್ನು ಸಂರಕ್ಷಿಸುವುದರ ಮೂಲಕ ಮಡಿವಾಳ ಮಾಚಿದೇವರ, ಕಾಯಕ, ನಿಷ್ಠೆ ತತ್ವವನ್ನು, ಓದುತ್ತ, ಇವರನ್ನು ಸಾಂಸ್ಕತಿಕ ನಾಯಕರು ಎಂದು ಕರೆದರು. ಬಸವಣ್ಣನವರ ವಚನಗಳನ್ನು ಸಂರಕ್ಷಣೆ ಮಾಡಿ, ತನ್ನ ಪರಿವಾರವನ್ನು ತಿರಸ್ಕರಿಸಿ ಶರಣರ ಪರಂಪರೆಯಲ್ಲಿ ಮುಂದುವರಿದರು. ಅಂದು ಪ್ರವೇಶ ಪರೀಕ್ಷೆಯ ಮೂಲಕ ಮಾಚಿದೇವರಿಗೆ 12ನೇ ಶತಮಾನದ ಮಹಾಮನೆ ಬಾಗಿಲು ಕಾಯುವ ಅವಕಾಶ ದೂರೆಯಿತು. ಸಮಾಜದಲ್ಲಿ ನಮಗೆ ಮಾಚಿದೇವರ ಅಶಯದಂತೆ ಸರಿಯಾದ ಸ್ಥಾನ-ಮಾನ ಸಿಗಬೇಕಾದರೆ, ಅವರ ಅಶಾಯದಂತೆ ನಡೆಯಬೇಕು. ಮಡಿವಾಳ ಸಮುದಾಯವು ಸಾಮಾಜಿಕ, ಆರ್ಥಿಕವಾಗಿ ತುಂಬಾ ಹಿಂದುಳಿದ ಸಮುದಾಯವಾಗಿದ್ದು, ನಮ್ಮ ಸಮುದಾಯ ಮುಂದೆ ಬರಬೇಕಾದರೆ, ಕಳೆದ 20 ವರ್ಷದಿಂದ ಹಾಗೇ ಉಳಿದಿರುವ ಅನ್ನಪೂರ್ಣಮ್ಮ ವರದಿ ಜಾರಿಯಾಗಬೇಕು ಎಂದು ಹೇಳಿದರು.
ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರಾಜು ಎಂ ತಲ್ಲೂರ್ ಅವರು ಮಾತನಾಡಿ, ಮಡಿವಾಳ ಸಮಾಜವು ತುಂಬಾ ಸಣ್ಣ ಸಮುದಾಯವಾಗಿದೆ. ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮುಂದುವರೆಯ ಬೇಕಾದರೆ ಎಲ್ಲರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ. ನಿಗಮದಿಂದ ವಿವಿಧ ಸೌಲಭ್ಯಗಳಿದ್ದು, ಮೊಬೈಲ್ ಮೂಲಕ ಆನ್‌ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಿ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಅನ್ನಪೂರ್ಣಮ್ಮ ವರದಿ ಜಾರಿಗಾಗಿ ಕೇಂದ್ರಕ್ಕೆ ಶೀಫಾರಸ್ಸು ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಚಿತ್ರದುರ್ಗ ಜಿಲ್ಲೆಯ ಶ್ರೀ ಮಡಿವಾಳ ಮಾಚಿದೇವ ಗುರುಪೀಠದ ಶ್ರೀ ಬಸವ ಮಾಚಿದೇವ ಶ್ರೀಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ.ಕಡಿ ಅವರು ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕರಾದ ಕೆ.ಹೆಚ್ ಚನ್ನೂರು, ಕೊಪ್ಪಳ ಸಹಾಯಕ ನಿರ್ದೇಶಕರಾದ ಕೊಟ್ರೇಶ್ ಮರಬನಳ್ಳಿ, ಮಡಿವಾಳರ ಸಂಘದ ಉತ್ತಮ ಕರ್ನಾಟಕ ರಾಜ್ಯಾಧ್ಯಕ್ಷರಾದ ಎಂ.ಕೆ ಹನುಮಂತಪ್ಪ, ಬೆಂಗಳೂರಿನ ಅಖಿಲ ಭಾರತ ಮಡಿವಾಳ ರಜಕ (ದೋಬಿ) ಮಹಾಸಭಾ ಅಧ್ಯಕ್ಷರಾದ ಜೆ.ಎಂಜೀರಪ್ಪ, ಮಡಿವಾಳ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷರಾದ ದುರಗೇಶ ಜಿ ಮಡಿವಾಳರ, ಮುಖಂಡರಾದ ಹುಲಗಪ್ಪ, ಈಶರಪ್ಪ ಮಡಿವಾಳರ್, ಬಸವರಾಜ ಬೆಳಗಲಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಶ್ರೀ ಮಡಿವಾಳ ಮಾಚಿದೇವರ ಭಾವಚಿತ್ರದ ಮೆರವಣಿಗೆಯು ನಗರದ ಕೋಟೆ ರಸ್ತೆಯ ಅಕ್ಕಮಹಾದೇವಿ ದೇವಸ್ಥಾನದಿಂದ ತಾಲ್ಲೂಕು ಕ್ರೀಡಾಂಗಣದವರೆಗೆ ಅದ್ದೂರಿಯಾಗಿ ಜರುಗಿತು. ವಿವಿಧ ಕಲಾತಂಡಗಳು, ಕುಂಬಹೊತ್ತ ಮಹಿಳೆಯರು ಮೆರವಣಿಗೆಯನ್ನು ಯಶಸ್ವಿಗೊಳಿಸಿದರು.