
—
ಕೊಪ್ಪಳ: ಕೊಪ್ಪಳ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಪ್ರತಿ ವರ್ಷದಂತೆ ಫೆ.02 ರಂದು ನರೇಗಾ ದಿನವೆಂದು ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಬಿ.ಫೌಜಿಯಾ ತರುನ್ನುಮ್ ಅವರು ತಿಳಿಸಿದ್ದಾರೆ.
ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು 02-02-2006 ರಂದು ಜಾರಿ ತರಲಾಗಿದ್ದು, ಆ ದಿನವನ್ನು ನರೇಗಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಂದು
ಜಿಲ್ಲೆ, ತಾಲ್ಲೂಕ ಮತ್ತು ಗ್ರಾಮ ಪಂಚಾಯತಿ ಮಟ್ಟದ ಎಲ್ಲಾ ಕಾಮಗಾರಿ ಸ್ಥಳಗಳಲ್ಲಿ ಭೇಟಿ ನೀಡಲು ಕ್ರಮವಹಿಸಲಾಗಿದೆ.
ಮುಖ್ಯವಾಗಿ ನರೇಗಾ ಯೋಜನೆಯಡಿ 100 ದಿನಗಳನ್ನು ಪೂರೈಸಿರುವ ಕುಟುಂಬ ವ್ಯಕ್ತಿಗಳಿಗೆ ಗೌರವ ಸಮರ್ಪಣೆ ಕಾಯಕ ಸಮ್ಮಾನ್ ನೀಡಲಾಗುವುದು. ಕಾಮಗಾರಿ ಸ್ಥಳಗಳಲ್ಲಿ ಆರೋಗ್ಯ ಶಿಬರ ಆಯೋಜನೆ ಮಾಡಲಾಗುವುದು. ಇ-ಶ್ರಮ್ ಕಾರ್ಡಗಳನ್ನು ನೋಂದಣಿ ಮಾಡಿಸಲಾಗುವುದು. ಜಲ ಸಂಜೀವಿನಿ ವಿಶೇಷ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗುವುದು. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನ ಹಾಗೂ ಪ್ರಧಾನ ಮಂತ್ರಿ ಜೀವನ ಸುರಕ್ಷಾ ವಿಮಾ ಯೋಜನೆಯನ್ನು ಕೂಲಿ ಕಾರ್ಮಿಕರ ಸಹಮತಿಯೊಂದಿಗೆ ಅವರ ಖಾತೆಯ ಬ್ಯಾಂಕ್ ಗಳ ಸಹಕಾರದೊಂದಿಗೆ ನೋಂದಣಿ ಮಾಡಿಸುವುದು ಸೇರಿದಂತೆ ಇನ್ನಿತರ ಜಾಗೃತಿ ಕಾರ್ಯಕ್ರಮಗಳ ಮುಖಾಂತರ ನರೇಗಾ ಕೂಲಿಕಾರರಿಗೆ ಯೋಜನೆಯ ಸೌಲಭ್ಯಗಳನ್ನು ತಲುಪಿಸಲು ಹಾಗೂ ನರೇಗಾ ದಿನಾಚರಣೆಯನ್ನು ಯಶಸ್ವಿ ಮತ್ತು ಸ್ಮರಣೀಯಗೊಳಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
*ಪಾರದರ್ಶಕ ಅನುಷ್ಠಾನ:*
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೂಲಿ ಉದ್ಯೋಗ ಬಯಸಿದ ಅಕುಶಲ ಗ್ರಾಮೀಣ ಜನರಿಗೆ ನೋಂದಾಯಿತ ಒಂದು ಕುಟುಂಬಕ್ಕೆ ಕನಿಷ್ಟ 100 ದಿನಗಳ ನೀಡುತ್ತಾ ಬಂದಿದ್ದು ಇಂದಿಗೆ ತನ್ನ ಗಾತ್ರ ಮತ್ತು ವಿನ್ಯಾಸಗಳಲ್ಲಿ ಮತ್ತು ಮೂಲೂದ್ದೇಶಗಳಲ್ಲಿ ವಿಭಿನ್ನವೆನಿಸಿದೆ. ಅದರ ತಲಾ ಸ್ಪರ್ಶಿಯಾದ ಜನ ಕೇಂದ್ರಿತವಾದ, ಬೇಡಿಕೆ ಆಧಾರಿತವಾದ, ಸ್ವ ಆಯ್ಕೆಗೆ ಅವಕಾಶವುಳ್ಳ ಹಾಗೂ ಹಕ್ಕು ಅಧಿಕಾರಿಗಳನ್ನು ಆಧರಿಸುತ್ತಾ ತನ್ನ ಪಾರದರ್ಶಕವಾಗಿ ಜಿಲ್ಲೆಯಲ್ಲಿ ಅನುಷ್ಟಾನಗೊಳಿಸಲಾಗುತ್ತಿದೆ.
*ನಾನಾ ಕಾಮಗಾರಿ:* ಈ ಯೋಜನೆಯ ಸಮರ್ಪಕ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಿಲ್ಲೆಯ ಗ್ರಾಮೀಣ ಭಾಗದ ಸಮಗ್ರ ಶಾಲಾ ಅಭಿವೃದ್ಧಿಯಡಿ ಬಾಲಕ, ಬಾಲಕಿಯರ ಹೈಟೆಕ್ ಶೌಚಾಲಯ ನಿರ್ಮಾಣ, ತಡೆಗೋಡೆ ನಿರ್ಮಾಣ, ಮಳೆ ನೀರಿನ ಕೊಯ್ಲು, ಪೌಷ್ಟಿಕ ಕೈತೋಟ, ಶಾಲಾ ಅಡುಗೆ ಕೋಣೆ ಮತ್ತು ಭೋಜನಾಲಯ, ಆಟದ ಅಂಕಣಗಳ ನಿರ್ಮಾಣಗಳಿಂದ ಗ್ರಾಮೀಣ ವಿದ್ಯಾರ್ಥಿಗಳ ಬೌದ್ಧಿಕ, ಆರೋಗ್ಯ ಮತ್ತು ಶಿಕ್ಷಣಕ್ಕೆ ಮಹತ್ವವನ್ನು ನೀಡಿ ಪ್ರತಿಭೆಗಳು ಹೊರಬರಲು ಒತ್ತು ನೀಡಲಾಗಿದೆ. ಅಂತರ್ಜಲ ಮಟ್ಟ, ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳಾದ ಅಮೃತ ಸರೋವರ ಕೆರೆಗಳ ನಿರ್ಮಾಣ, ಕಂದಕ ಬದು ನಿರ್ಮಾಣ, ಕೃಷಿ ಹೊಂಡ, ನಾಲಾ ಅಭಿವೃದ್ಧಿಯಿಂದ ಜಿಲ್ಲೆಯ ರೈತರ ಹೊಲಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಗೊಂಡಿವೆ.
ಹೊಲದಲ್ಲಿ ತೇವಾಂಶ ಮತ್ತು ಫಲವತ್ತತೆ ಹೆಚ್ಚಿಸಲಾಗಿದೆ. ರೈತರು ಆರ್ಥಿಕ ಕೃಷಿ ಚಟುವಟಿಕೆಗಳಲ್ಲಿ ತೊಡಗಲು ಪ್ರೋತ್ಸಾಹಿಸಲಾಗಿದೆ. ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳನ್ನು ಗ್ರಾಮ ಪಂಚಾಯತಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
*ಮಹಿಳಾ ಭಾಗವಹಿಸುವಿಕೆ:*
ಮಹಿಳಾ ಕಾಯಕೋತ್ಸವ ಅಭಿಯಾನದಡಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸಿ ಇದರಿಂದ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ.
*ಗುಣಾತ್ಮಕ ಬದಲಾವಣೆ:*
ದುಡಿಯೋಣ ಬಾ ಅಭಿಯಾನದ ಮುಖಾಂತರ ಹಿರಿಯ ನಾಗರೀಕರಿಗೆ, ವಿಕಲಚೇತನರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ, ಸಣ್ಣ ಅತೀ ಸಣ್ಣ ರೈತರಿಗೆ, ಎಸ್.ಸಿ-ಎಸ್.ಟಿ ವರ್ಗದವರಿಗೆ ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿಗಳಲ್ಲಿ ಕೆಲಸ ಮತ್ತು ಕಾಯಕ ಸಂಘಗಳನ್ನು ರಚಿಸಿ ಯೋಜನೆಯನ್ನು ಬಲಪಡಿಸಿ ನೈಜ್ಯ ಬೇಡಿಕೆಯನ್ನು ಆಧರಿಸಿ ಕೆಲಸ ಒದಗಿಸಿ ಗ್ರಾಮೀಣ ಜನರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರಲಾಗಿದೆ.
*ಜಲ ಸಂಜೀವಿನಿ:* ಅಂಗನವಾಡಿ ನಿರ್ಮಾಣ, ಗ್ರಾಮೀಣ ಗೋದಾಮುಗಳು, ಎನ್‌ಆರ್‌ಎಲ್‌ಎಂ ವರ್ಕಶೆಡ್, ವೈಯಕ್ತಿಕ ಪೌಷ್ಟಿಕ ಕೈತೋಟಗಳು, ಎರೆಹುಳು ತೊಟ್ಟಿಗಳು ಬರುವ ಆರ್ಥಿಕ ಸಾಲಿನಲ್ಲಿ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ವೈಜ್ಞಾನಿಕ ಉಪಚಾರದ ಮುಖಾಂತರ ಜಲಸಂಜೀವಿನಿ ಕಾಮಗಾರಿ ಸೇರಿದಂತೆ ಹತ್ತು ಹಲವು ಕಾಮಗಾರಿಗಳನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಟಾನಗೊಳಿಸಲಾಗಿದೆ.
ಅದರಂತೆ ಈ ವರ್ಷವೂ ಸಹ ಗ್ರಾಮೀಣ ಭಾಗದ ಕೂಲಿಕಾರರಿಂದ ನರೇಗಾ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಹಾಗೂ ಅಮೃತ ಸರೋವರ ದಂಡೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕುರಿತು ವಿನೂತನ ಚಟುವಟಿಕೆಗಳನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಿಇಓ ಅವರು ತಿಳಿಸಿದ್ದಾರೆ.