ಳ್ಳಾರಿ (ಜ.30) : ದೇವರನ್ನು ಒಲಿಸಿಕೊಳ್ಳಲು ಯುವಕನೊಬ್ಬ ತನ್ನ ನಾಲಗೆ ಕತ್ತರಿಸಿಕೊಂಡಿರುವ ಘಟನೆ ಸಿರುಗುಪ್ಪ ತಾಲೂಕಿನ ಉಪ್ಪಾರ ಹೊಸಹಳ್ಳಿ ಗ್ರಾಮದಲ್ಲಿ ಭಾನುವಾರ ಜರುಗಿದೆ. ಸದ್ಯ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಲಗೆ ಮರು ಜೋಡಣೆ ಕಷ್ಟಎಂದು ಹೇಳಲಾಗುತ್ತಿದೆ.

ಗ್ರಾಮದ ವೀರೇಶ್‌ (32) ಎಂಬಾತ ನಾಲಿಗೆ ಕತ್ತರಿಸಿಕೊಂಡಾತ. ವೀರೇಶ್‌ ಖಿನ್ನತೆಯಿಂದ ಬಳಲುತ್ತಿದ್ದು, ಆಗಾಗ್ಗೆ ದೇವರು, ದೈವದ ಬಗ್ಗೆ ಮಾತನಾಡುತ್ತಿದ್ದ ಎನ್ನಲಾಗಿದೆ. ಮನೆಯಲ್ಲಿದ್ದ ಚಾಕುವಿನಿಂದ ನಾಲಿಗೆ ಕತ್ತರಿಸಿಕೊಂಡಿರುವ ವೀರೇಶ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

‘ತೀರಿಕೊಂಡಿರುವ ನನ್ನ ತಾತ ಶಂಕರಪ್ಪನಿಗಾಗಿ ನಾಲಿಗೆ ಕತ್ತರಿಸಿಕೊಂಡಿದ್ದೇನೆ. ದೇವರು ಕನಸಿನಲ್ಲಿ ಬಂದು ನನ್ನ ಒಲಿಸಿಕೊಳ್ಳಲು ನಿನ್ನ ನಾಲಿಗೆ ಕತ್ತರಿಸಿ ಕೊಡು ಎಂದು ಕೇಳಿದರು. ಹೀಗಾಗಿ ನಾನು ಚಾಕುವಿನಿಂದ ನಾಲಿಗೆ ಕತ್ತರಿಸಿ ದೇವರಿಗೆ ಅರ್ಪಿಸಿದ್ದೇನೆ’ ಎಂದು ವೀರೇಶ ಹೇಳಿಕೊಂಡಿದ್ದಾನೆ.

ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ವಿಮ್ಸ್‌ಗೆ ದಾಖಲಾದ ವೀರೇಶನ ನಾಲಿಗೆ ಮರುಜೋಡಣೆಗಾಗಿ ವಿಮ್ಸ್‌ ಆಸ್ಪತ್ರೆ ವೈದ್ಯರನ್ನು ಪೋಷಕರು ಸಂಪರ್ಕಿಸಿದ್ದಾರೆ. ಆದರೆ, ವೈದ್ಯರು ನಾಲಿಗೆ ಜೋಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ವೀರೇಶನಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

error: Content is protected !!