
ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಮುನ್ನಾ ದಿನವಾದ ಸೋಮವಾರ ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆ ಕರೆದಿದೆ.
ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ವಾಡಿಕೆಯಂತೆ ಸಭೆ ಕರೆದಿದ್ದು, ಜನವರಿ 30 ರಂದು ಮಧ್ಯಾಹ್ನ ಸಂಸತ್ತಿನ ಆವರಣದಲ್ಲಿ ಸಭೆ ನಡೆಯಲಿದೆ.
ಈ ವೇಳೆ ಸರ್ಕಾರ ಸುಗಮ ಕಲಾಪ ನಡೆಸಲು ಎಲ್ಲಾ ಪಕ್ಷಗಳ ಸಹಕಾರ ಕೋರುವ ನಿರೀಕ್ಷೆಯಿದೆ.
ಪ್ರತಿಪಕ್ಷಗಳು ಕೂಡ ಕಲಾಪಕ್ಕೆ ಸಜ್ಜಾಗಿದ್ದು ಬಜೆಟ್ ಸೇರಿದಂತೆ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಅಧಿವೇಶನದಲ್ಲಿ ಚರ್ಚಿಸುವ ನಿರೀಕ್ಷೆಯಿದೆ. ಜತೆಗೆ ಈಗಾಗಲೇ ಯೋಜಿಸಿಕೊಂಡಿರುವ ಅನೇಕ ವಿಚಾರಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಕಾರ್ಯತಂತ್ರ ರೂಪಿಸಿವೆ.
ಮಧ್ಯಾಹ್ನ ಎನ್‌ಡಿಎ ಸಂಸದೀಯ ನಾಯಕರ ಸಭೆಯೂ ನಡೆಯಲಿದ್ದು, ಅಧಿವೇಶನದ ಕಾರ್ಯತಂತ್ರ ರೂಪಿಸಲಿದೆ.
ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಲಿದ್ದಾರೆ. ನಂತರ ಮುಂಗಡ ಪತ್ರ ಮಂಡನೆಯಾಗಲಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. 2023-24ರ ಬಜೆಟ್ ಮುಂಬರುವ ಲೋಕಸಭೆ ಚುನಾವಣೆಗೆ ಪೂರಕವಾಗಿ ಸಿದ್ಧಗೊಂಡಿರಬಹುದೆಂದು ಅಂದಾಜಿಸಲಾಗಿದೆ.
ಅಧಿವೇಶನದ ಜನವರಿ 31 ರಿಂದ ಪ್ರಾರಂಭವಾಗಲಿದ್ದು, ಫೆಬ್ರವರಿ 13 ರವರೆಗೆ ಮುಂದುವರಿಯುವ ಸಾಧ್ಯತೆಯಿದೆ.