ಬೆಂಗಳೂರು : ಪ್ರತಿಯೊಬ್ಬರೂ ಪತ್ರಿಕೆಯನ್ನು ಓದುವುದರಿಂದ ಪತ್ರಿಕಾ ರಂಗ ಬೆಳೆಯಲು ಸಹಾಯಕವಾಗುತ್ತದೆ ಎಂದು ಕಂದಾಯ ಸಚಿವರಾದ ಆರ್. ಅಶೋಕ್ ಹೇಳಿದರು.

ಕಬ್ಬನ್ ಪಾರ್ಕ್ ಪ್ರೆಸ್ ಕ್ಲಬ್‌ನಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಹಮ್ಮಿಕೊಂಡಿದ್ದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಪ್ರಕರ್ತರಿಗೆ ಟ್ಯಾಬ್ ವಿತರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ 16ಪತ್ರಕರ್ತರಿಗೆ ಟ್ಯಾಬ್‌ಗಳನ್ನು ವಿತರಣೆ ಮಾಡಿ ಮಾತನಾಡಿದ ಸಚಿವರು, ಮಾಧ್ಯಮದಲ್ಲಿ ಕೆಲಸ ಮಾಡುವವರಿಗೂ ಸವಲತ್ತುಗಳ ಅವಶ್ಯಕತೆ ಇದೆ.

ಆಧುನಿಕ ಯುಗದಲ್ಲಿ ತಂತ್ರಜ್ಞಾನ ಮುಂದುವರಿದಂತೆ, ವರದಿಯನ್ನು ಮುಟ್ಟಿಸುವಲ್ಲಿ ವೇಗ ಕಂಡಿದ್ದು, ಅದರಂತೆ ಪತ್ರಿಕಾ ರಂಗದಲ್ಲಿ ಪತ್ರಕರ್ತರು ತಮ್ಮ ವೃತ್ತಿ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು. ಟ್ಯಾಬ್ ವಿತರಿಸುವುದರ ಜೊತೆಗೆ ಅದನ್ನು ಉಪಯೋಗಿಸುವ ವಿಧಾನ, ಅದರ ವಿಶೇಷತೆ ಮತ್ತು ಅನುಕೂಲದ ಕುರಿತು ತರಬೇತಿ ನೀಡುವ ಅವಶ್ಯಕತೆ ಇದೆ. ಎಲೆಕ್ಟ್ರಾನಿಕ್ ಮಾಧ್ಯಮಕ್ಕೂ, ಮುದ್ರಣ ಮಾಧ್ಯಮಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಎಲೆಕ್ಟ್ರಾನಿಕ್ ಮಾಧ್ಯಮವು ಬ್ರೇಕಿಂಗ್ ನ್ಯೂಸ್ ನೀಡುವ ಆತುರದಲ್ಲಿ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ತಕ್ಷಣವೇ ಪ್ರಸಾರ ಮಾಡುತ್ತಿವೆ, ಆದರೆ ಮುದ್ರಣ ಮಾಧ್ಯಮಗಳು ಪರಿಶೀಲಿಸಿ ಸುದ್ದಿ ನೀಡುತ್ತಾರೆ ಎಂದರು.

ಮಾಧ್ಯಮದ ಕುಂಟುಂಬದವರಿಗೂ ಹಾಗೂ ಬರವಣಿಗೆಗೆ ಏನೇನು ಅವಶ್ಯಕತೆ ಇದೆಯೋ ಅದನ್ನು ಮಾಡಲು ಪ್ರ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದ ಸಚಿವರು, ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ಮನೆಬಾಗಿಲಿಗೆ ತಲುಪುವಂತೆ ಪಿಂಚಣಿ ಸೌಲಭ್ಯ ಕಲ್ಪಿಸಲಾಗಿದೆ. ಏಳು ದಿನಗಳಲ್ಲಿ ಭೂ ಪರಿವರ್ತನೆ ಮಾಡಲಾಗುತ್ತಿದ್ದು, ಕಾಫಿ ಬೆಳೆಗಾರರಿಗೆ 1 ಲಕ್ಷ ಎಕರೆ ಹಾಗೂ ಬಡ ರೈತರಿಗೆ 1.50 ಲಕ್ಷ ಎಕರೆ ಜಮೀನು ನೀಡಲಾಗಿದೆ. 75 ಲಂಬಾಣಿ ತಾಂಡ ವಾಸವಿರುವ ಜಮೀನನ್ನು ನೊಂದಣಿ ಮಾಡಿಕೊಡಲಾಗಿದ್ದು, ಹಲವಾರು ಕ್ರಾಂತಿಕಾರಿ ಬದಲಾವಣೆ ತರುವ ಮೂಲಕ ಕಂದಾಯ ಇಲಾಖೆಯನ್ನು ಬಲವರ್ಧನೆ ಮಾಡಲಾಗಿದೆ. ಮಾಧ್ಯಮ ಮತ್ತು ಸರ್ಕಾರ ಜನರ ಪರವಾಗಿ ಕೆಲಸ ಮಾಡಿದಾಗ ಜನರಲ್ಲಿ ವಿಶ್ವಾಸ ಬರುತ್ತದೆ. ಪ್ರಪಂಚ ನಡೆಯುತ್ತಿರುವುದೇ ನಂಬಿಕೆಯ ಮೇಲೆ. ನಂಬಿಕೆಗೆ ಚ್ಯುತಿ ಬರದಂತೆ ಕೆಲಸ ಮಾಡೋಣ ಎಂದರು.

ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಕೆ.ಸದಾಶಿವ ಶೆಣೈ, ಮುಖ್ಯಮಂತ್ರಿಗಳ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಎನ್. ಮಂಜುನಾಥ್ ಪ್ರಸಾದ್, ನಟಿ ಪ್ರೇಮ ಹಾಗೂ ಕಾರ್ಯದರ್ಶಿ ಸಿ.ರೂಪಾ ಉಪಸ್ಥಿತರಿದ್ದರು.

error: Content is protected !!