—-
ಕೊಪ್ಪಳ ಜನವರಿ 23: ಮಾದಕ ವಸ್ತುಗಳಿಂದ ಮಕ್ಕಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ.ಕಡಿ ಅವರು ಸಂಬಂದಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.


ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮಕ್ಕಳ ಸಂರಕ್ಷಣೆಗಾಗಿ ತಯಾರಿಸಿರುವ ಮಾದಕ ವಸ್ತುಗಳಿಂದ ಮತ್ತು ಮಾದಕ ವಸ್ತು ಸಾಗಾಣಿಕೆಯಲ್ಲಿ ಮಕ್ಕಳ ರಕ್ಷಣೆ ಕುರಿತಾದ ಜಂಟಿ ಕ್ರೀಯಾಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ  ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜನವರಿ 23 ರಂದು ಹಮ್ಮಿಕೊಂಡಿದ್ದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಮಾದಕ ವಸ್ತುಗಳನ್ನು ಮಕ್ಕಳು ಬಳಸದಂತೆ ಕ್ರಮ ಕೈಗೊಳ್ಳಬೇಕು. ಸಧ್ಯದಲ್ಲಿ ಜಾರಿಯಲ್ಲಿರುವ ವಿವಿಧ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆಗೊಳಿಸಿ ಶಾಲಾ, ಕಾಲೇಜು ಮತ್ತು ಶೈಕ್ಷಣಿಕ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟವನ್ನು ನಿಷೇಧಿಸಬೇಕು. ಮಾದಕ ವ್ಯಸನಿ ಮಕ್ಕಳ ಚಿಕಿತ್ಸೆ, ಪುನರವಸತಿಗಾಗಿ ಜಾರಿಯಲ್ಲಿರುವ ವಿವಿಧ ಯೋಜನೆ, ಕಾರ್ಯಕ್ರಮಗಳ ಮತ್ತು ನೀತಿಗಳನ್ನು ಸೇವೆಯಡಿಯಲ್ಲಿ ತರಬೇಕು. ಮಾದಕ ವಸ್ತುಗಳು ಮತ್ತು ಅಕ್ರಮ ಮಾರಾಟ ನಿಷೇಧಕ್ಕಾಗಿ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳಿಗೆ ಅವರ ಕರ್ತವ್ಯ, ಪಾತ್ರ, ಜವಾಬ್ದಾರಿಗಳ ಬಗ್ಗೆ ಮನವರಿಕೆ ಮಾಡುವುದು ಮತ್ತು ಸಾರ್ಮಥ್ಯಾಭಿವೃದ್ಧಿಗೊಳಿಸುವುದು ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಜಾಗೃತಿ ಮತ್ತು ಉತ್ತಮ ಅಭ್ಯಾಸಗಳನ್ನು ವೃದ್ಧಿಸಬೇಕು ಎಂದರು.


ಶೈಕ್ಷಣಿಕ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮತ್ತು ಔಷಧಾಲಯಗಳಲ್ಲಿ ಮಕ್ಕಳಿಗೆ ಮಾದಕ ವಸ್ತುಗಳು ಲಭ್ಯವಾಗದಂತೆ ಕಣ್ಗಾವಲನ್ನು ವೃದ್ಧಿಸಬೇಕಾಗಿದೆ. ಮಕ್ಕಳಿಗೆ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಣಿಕೆ ನಿಷೇಧಕ್ಕಾಗಿ ವಿವಿಧ ಕಾನೂನುಗಳಲ್ಲಿ ಲಭ್ಯವಿರುವ ಅವಕಾಶಗಳನ್ನು ಬಲಪಡಿಸುವುದರ ಜೊತೆಗೆ ಅವುಗಳನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು. ಮಕ್ಕಳಿಗೆ ಮಾದಕ ವಸ್ತುಗಳನ್ನು ನೀಡುವುದನ್ನು ಪ್ರತಿಬಂಧಿಸಲು ವಿವಿಧ ಇಲಾಖೆಗಳು ಸಮನ್ವಯತೆಯನ್ನು ಸಾಧಿಸಿ, ಸಮಗ್ರ ಪ್ರಯತ್ನ ನಡೆಸಬೇಕು ಎಂದು ಸೂಚನೆ ನೀಡಿದರು. 


ಕರ್ನಾಟಕ ರಾಜ್ಯ ಅಬಕಾರಿ ಕಾಯ್ದೆ-1965ರ ಕಲಂ-20(1) ರನ್ವಯ 18 ವರ್ಷದೊಳಗಿನ ಮಕ್ಕಳನ್ನು ಮದ್ಯ ಮಾರಾಟಗಾರರು ಯಾವುದೇ ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ನಿ಼ಷೇಧಿಸುತ್ತದೆ. ಈ ಕಾಯ್ದೆಯಡಿ 21 ವರ್ಷದೊಳಗಿನ ವ್ಯಕ್ತಿಗಳಿಗೆ ಮದ್ಯ ಮಾರಾಟವನ್ನು ಸಹ ನೀಷೇಧಿಸಿದ್ದು, ಈ ಬಗ್ಗೆ ಸಂಬಂಧಪಟ್ಟ ಮಾರಾಟಗಾರರಿಗೆ ಅಬಕಾರಿ ಇಲಾಖೆಯಿಂದ ಕಟ್ಟು ನಿಟ್ಟಿನ ನಿರ್ದೇಶನ ನೀಡಬೇಕು ಎಂದು ಸೂಚಿಸಿದರು.


*ಶಾಲೆಗಳಲ್ಲಿ ಕಾರ್ಯಚಟುವಟಿಕೆಗಳು:* ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಮಕ್ಕಳ ಕ್ಲಬ್, ಜಾಗೃತಿ ಮತ್ತು ಸಾರ್ಮಥ್ಯಾಭಿವೃದ್ಧಿ (ಎನ್.ಸಿ.ಸಿ. ಎನ್.ಎಸ್.ಎಸ್, ರೆಡ್ ರಿಬ್ಬನ ಕ್ಲಬ್, ಭಾರತ ಸ್ಕೌಟ್ಸ್ ಮತ್ತು ಗೈಡ್) ಪ್ರಹಾರಿ ಕ್ಲಬ್‌ಗಳು ರಚನೆಯಾಗಬೇಕು. ಅಲ್ಲದೆ ಎಲ್ಲಾ ಶಾಲೆಗಳನ್ನು ತಂಬಾಕು ಮುಕ್ತ ಶಾಲೆ ಮಾಡುವುದು ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ 1800112356 ಟೋಲ್ ಫ್ರೀ ನಂಬರನ್ನು ನಮೂದಿಸಬೇಕು ಎಂದರು.


ಎಲ್ಲಾ ಶಾಲೆಗಗಳಲ್ಲಿ ಸಿಸಿಟಿವಿ ಅಳವಡಿಸಿ, ಅದರ ಮೇಲ್ವಿಚಾರಣೆ ಮಾಡಬೇಕು. ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳಿಂದ (ಪಿ.ಎಸ್.ಐ) ಸಿಸಿಟಿವಿಗಳ ಪರಿಶೀಲನೆ ಮತ್ತು ಮೇಲ್ವಿಚಾರಣೆ ಮಾಡಬೇಕು. ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವುದು. ಶಾಲೆಗಳಿಗೆ ಅನುಮತಿ ಮತ್ತು ನವೀಕರಿಸುವ ಸಂದರ್ಭದಲ್ಲಿ ಎಲ್ಲಾ ಅಂಶಗಳನ್ನು ಪಾಲಿಸಿದ ಬಗ್ಗೆ ವರದಿಯನ್ನು ಪರಿಶೀಲಿಸಿ ಅನುಮತಿ ನೀಡಬೇಕು. ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಮತ್ತು ಭದ್ರತೆಯಲ್ಲಿ ಕಾನೂನಿನಲ್ಲಿರುವ ಅವಕಾಶಗಳ ಜಾರಿಗೊಳಿಸಬೇಕು. ಶೈಕ್ಷಣಿಕ ಸಂಸ್ಥೆಗಳ ವ್ಯಾಪ್ತಿಯ 100 ಮೀಟರನೊಳಗಡೆಯಿರುವ ಅಂಗಡಿ ಅಥವಾ ಶಾಪ್‌ಗಳ ಪರಿಶೀಲನೆಗೆ ಕ್ರಮ ಜರುಗಿಸಬೇಕು. ಮಾದಕ ವಸ್ತುಗಳಿಂದ ಮಕ್ಕಳ ರಕ್ಷಣೆಗೆ ಕುರಿತಂತೆ ವಿಶೇಷವಾಗಿ ವಸತಿ ಶಾಳೆಗಳ ಮಕ್ಕಳ ಬಗ್ಗೆ ಸಂಬAಧಪಟ್ಟ ವಸತಿ ನಿಲಯ ಪಾಲಕರು ಕಾಳಜಿವಹಿಸಬೇಕು. ಅಲ್ಲದೇ ಕೋಟ್ಪಾ-2003 6(ಬಿ)ಎ ಕಾಯ್ದೆಯ ಬಗ್ಗೆ ಶಾಲೆ, ಕಾಲೇಜು ಮತ್ತು ಶೈಕ್ಷಣಿಕೆ ಸಂಸ್ಥೆಗಳ ಹೂರಗಡೆ ಗೋಡೆಬರಹ ಬಿಡಿಸುವುದು ಸೇರಿದಂತೆ ಈ ಎಲ್ಲಾ ಅಂಶಗಳ ಪಾಲನೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ರೋಹಿಣಿ ಕೊಟಗಾರ, ಡಿವೈಎಸ್ಪಿ ಶರಣಪ್ಪ ಸುಬೇದಾರ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ನಿಲೋಫರ್ ಎಸ್.ರಾಮಪೂರಿ, ಬಾಲ ನ್ಯಾಯ ಮಂಡಳಿಯ ಸದಸ್ಯರಾದ ಶೇಖರಗೌಡ ಜಿ.ರಾಮತ್ನಾಳ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿದೇಶಕರಾದ ಮೃಣಲಾ ಸಾಹುಕಾರ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ನಂದಕುಮಾರ ಹೆಚ್., ಯುನಿಸ್ಸೆಫ್ ಜಿಲ್ಲಾ ಸಂಯೋಜಕರಾದ ಹರೀಶ್ ಜೋಗಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಚಿದಾನಂದ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುರೇಶ ಕೊಕರೇ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!