ಕಾರಟಗಿ : ಕ್ಷೇತ್ರದ ನೆಚ್ಚಿನ ನಾಯಕ ಶಿವರಾಜ ತಂಗಡಗಿಯವರಿಂದ ಅಭಿವೃದ್ಧಿಯಾಗಬೇಕಿರುವ ಕೆಲಸಗಳ ಕುರಿತು ಮಾತನಾಡಿ, ಅದನ್ನು ಬಿಟ್ಟು ಇಸ್ಪೀಟ್ ಮಟ್ಕಾ ಮರಳು ದಂಧೆಗಳ ಅನುಮತಿ-ರದ್ದತಿ ಕುರಿತು ಮಾತನಾಡುವುದು ಶೋಭೆಯಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೆಗೌಡ ಮಾಲಿಪಾಟೀಲ್ ಹಾಗೂ ಎಸ್ಸಿ ಘಟಕದ ಅಧ್ಯಕ್ಷರಾದ ಶಿವಕುಮಾರ್ ವಕೀಲರು ತಿಳಿಸಿದರು.
ಮಾಜಿ ಶಾಸಕ ಬಸವರಾಜ ಧಡೇಸುಗೂರು ಹಾಗೂ ಬಿಜೆಪಿ ಮುಖಂಡ ಕಾಶಿ ವಿಶ್ವನಾಥ ಬಿಚ್ಚಾಲಿಯವರ ಹೇಳಿಕೆಯನ್ನು ಖಂಡಿಸಿ, ಅಗಸ್ಟ್-10ರಂದು ಕಾಂಗ್ರೆಸ್ ಪಕ್ಷದ ಗೃಹ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಕ್ಷೇತ್ರದಲ್ಲಿ ಸಾರ್ವಜನಿಕರಿಗಾಗುತ್ತಿರುವ ತೊಂದರೆಗಳ ಕುರಿತು ಮತ್ತು ಅಭಿವೃದ್ಧಿಯ ಕುರಿತು ಮಾತನಾಡಬೇಕು, ಅದರಲ್ಲೂ ಮುಖ್ಯವಾಗಿ ಕೊನೆ ಭಾಗದ ರೈತರಿಗೆ ನೀರು ಸಿಗುತ್ತಿಲ್ಲ, ರಸ್ತೆ ದುರಸ್ತಿ ಕುರಿತು, ಯೋಜನೆಗಳ ಸಮರ್ಪಕ ಬಳಕೆ, ಬಡ ಕಾರ್ಮಿಕರ ಸಾರ್ವಜನಿಕರ ಅನಾನುಕೂಲದ ಕುರಿತು ಆರೋಪ ಮಾಡಿದರೆ ಅದನ್ನು ತಿದ್ದುಕೊಳ್ಳುವ ಪ್ರಯತ್ನ ಮಾಡುತ್ತೇವೆ. ಅವೆಲ್ಲವೂ ಬಿಟ್ಟು ಬಿಜೆಪಿಗರ ಮರಳು ಕ್ಲಬ್‌ಗಳನ್ನು ಬಂದ್ ಮಾಡಿಸಲಾಗಿದೆ. ಬೆಂಬಲಿಗರು ಹಣ ತಿನ್ನುತ್ತಿದ್ದಾರೆ ಎಂದು ಆಧಾರ ರಹಿತ ಆರೋಪಗಳನ್ನು ಮಾಡುವುದು ಬಿಡಬೇಕು ಎಂದರು.
ಅಧಿಕೃತವಾಗಿ ಮರಳು ಸಾಗಿಸುತ್ತಿದ್ದರೆ ಇಲ್ಲವೇ ಕ್ಲಬ್ ನಡೆಸುತ್ತಿದ್ದರೆ ಯಾರಿಗೂ ಹಣ ಕೊಡುವ ಅಗತ್ಯವಿಲ್ಲ ಅಲ್ಲದೆ ಅದನ್ನು ಯಾರೂ ನಿಲ್ಲಿಸಲು ಸಾಧ್ಯವಿಲ್ಲ, ಒಂದು ವೇಳೆ ನಿಲ್ಲಿಸಿದರು ಅಂತವರ ವಿರುದ್ಧ ಸಾಕ್ಷಿ ಸಮೇತ ಅಧಿಕಾರಿಗಳಿಗೆ ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬರಲ್ಲೂ ಇದೆ. ನೀವೇ ಅನಧಿಕೃತ ಮಾಡಿದರೆ ಸೂಕ್ತ ಕ್ರಮವಹಿಸಿ ಅಧಿಕಾರಿಗಳೇ ಬಂದ್ ಮಾಡಿಸುತ್ತಾರೆ.
ನಿಮ್ಮೆಲ್ಲಾ ಮರಳು ಪಾಯಿಂಟ್ಗಳು, ಕ್ಲಬ್ ಗಳು ಅಧಿಕೃತವಾಗಿದ್ದರೆ ಅಧಿಕಾರಿಗಳನ್ನು ಪ್ರಶ್ನಿಸಿ.. ಅದನ್ನು ಬಿಟ್ಟು ಸುಮ್ಮನೆ ಸಚಿವರ ಮೇಲೆ ಆರೋಪ ಬೇಡ, ಕಾಂಗ್ರೆಸ್ ಬೆಂಬಲಿಗರು ಅನಾಧಿಕೃತವಾಗಿ ಕ್ಲಬ್ ಮರಳು ದಂಧೆ ನಡೆಸುತ್ತಿದ್ದರೆ ನಮಗೆ ತಿಳಿಸಿ ನಾವೇ ಕೇಸ್ ದಾಖಲಿಸುತ್ತೇವೆ. ಅದು ಅಲ್ಲದೆ ಸಚಿವರ ಹಿಂಬಾಲಕರು ಹಣ ಪಡೆಯುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದೀರಿ… ಹಣ ಪಡೆದವರು ಯಾರು ಸಾಕ್ಷಿ ಸಮೇತ ತನ್ನಿ ಅಂತವರಿಗೆ ನಾವೇ ಶಿಕ್ಷೆ ನೀಡುವಂತೆ ಮಾಡುತ್ತೇವೆ.
ಇವೆಲ್ಲವನ್ನೂ ಬಿಟ್ಟು ಸಚಿವರ ಘನತೆಗೆ ಕುಂದು ತರುವ ಕೆಲಸ ಮಾಡುವುದು ಬೇಡ, ಯಾವುದೇ ಆರೋಪ ಮಾಡಿದರು ಸಾಕ್ಷಿ ಸಮೇತ ಮಾಡಿರುವುದು ಒಳ್ಳೆಯದು, ಆಧಾರ ರಹಿತ ಆರೋಪ ನಾಚಿಕೆಗೇಡಿನ ವಿಷಯವಾಗಿದೆ ಎಂದರು.
ಕಂಡವರ ಮಾತಿಗೆ ಪ್ರತ್ಯುತ್ತರ ನೀಡುವ ಅವಶ್ಯಕತೆ ನಮಗಿಲ್ಲ, ಅರ್ಹತೆ ಉಳ್ಳವರಿಗೆ ಪ್ರತ್ಯುತ್ತರ ನೀಡುತ್ತೇವೆ. ಪಕ್ಕದಲ್ಲಿ ಮಾಜಿ ಶಾಸಕರಿದ್ದಾರೆ ಎನ್ನುವ ಕಾರಣಕ್ಕೆ ಅವರ ಮಾತಿಗೆ ಪ್ರತ್ಯುತ್ತರವಾಗಿ ಈ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದೆ ಎಂದರು.