
ಮಕ್ಕಳ ಪೌಷ್ಠಿಕ ಗುಣಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳಿ : ಟಿ.ಕೆ.ಅನಿಲ ಕುಮಾರ್
ಕೊಪ್ಪಳ : ಮಕ್ಕಳ ಪೌಷ್ಠಿಕ ಗುಣಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಕೊಪ್ಪಳ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿಗಳಾದ ಟಿ.ಕೆ.ಅನಿಲ ಕುಮಾರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಕಚೇರಿಯ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ಜನವರಿ 07 ರಂದು 2022-23ನೇ ಸಾಲಿನ ಡಿಸೆಂಬರ್-2022ರ ಅಂತ್ಯದವರೆಗಿನ ಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೂಕ್ತ ಪೌಷ್ಠಿಕ ಆಹಾರ ನೀಡಲು ಜಿಲ್ಲೆಯಲ್ಲಿ ಗುರುತಿಸಲಾದ ಅಪೌಷ್ಠಿಕತೆ ಉಳ್ಳ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ನಿಗಾ ವಹಿಸಬೇಕು.
ಈ ಬಗ್ಗೆ ಇಲಾಖೆಯ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಮಾತೃಪೂರ್ಣ, ಮಾತೃ ವಂದನಾ ಯೋಜನೆಗಳ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ನೀಡಬೇಕು. ಗರ್ಭಿಣಿಯರು ಹಾಗೂ ಬಾಣಂತಿಯರ ಸಂಖ್ಯೆಯನ್ನು ಸರಿಯಾಗಿ ದಾಖಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈಗಾಗಲೇ ಬಿತ್ತನೆಯಾದ ಹಿಂಗಾರು ಹಂಗಾಮಿನ ಬೆಳೆಗಳಿಗೆ ಅವಶ್ಯವಿರುವ ರಸಗೊಬ್ಬರ ರೈತರ ಬೇಡಿಕೆಯಂತೆ ಸಮರ್ಪಕವಾಗಿ ಪೂರೈಕೆ ಮಾಡಬೇಕು. ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಗುಣಮಟ್ಟದ ಗೊಬ್ಬರ ಪೂರೈಸಬೇಕು. ಅಲ್ಲದೇ ಹಿಂಗಾರಿನ ಬೆಳೆಗಳಲ್ಲಿ ಕಂಡುಬರುವ ರೋಗಗಳ ನಿಯಂತ್ರಣ, ಹತೋಟಿ ಕ್ರಮಗಳ ಬಗ್ಗೆ ರೈತರಿಗೆ ಸೂಕ್ತ ಜಾಗೃತಿ ಮೂಡಿಸಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚರ್ಮಗಂಟು ರೋಗದಿಂದ ಮರಣಹೊಂದಿದ ಜಾನುವಾರುಗಳ ಮಾಲೀಕರಿಗೆ ಕೂಡಲೇ ಸರ್ಕಾರದ ಪರಿಹಾರಧನವನ್ನು ನೀಡುವಂತೆ ಕ್ರಮ ವಹಿಸಬೇಕು.
ಜಿಲ್ಲೆಗೆ ಒಂದು ಸರ್ಕಾರಿ ಗೋಶಾಲೆ ಯೋಜನೆಯಡಿ ರಾಜ್ಯ ಸರ್ಕಾರದಿಂದ ಕೊಪ್ಪಳ ಜಿಲ್ಲೆಗೂ ಒಂದು ಗೋಶಾಲೆ ಮಂಜೂರಾಗಿದ್ದು, ಗೋಶಾಲೆಯನ್ನು ತ್ವರಿತವಾಗಿ ಉದ್ಘಾಟಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿಯಿಂದ ನರೇಗಾ ಯೋಜನೆಯಡಿ ಮಾನವ ದಿನಗಳನ್ನು ಸೃಜಿಸಿ ಗ್ರಾಮಸ್ಥರಿಗೆ ಉದ್ಯೋಗ ಒದಗಿಸಿ. ಕೂಲಿ ನೀಡುವಲ್ಲಿ ವಿಳಂಬ ಮಾಡದೆ, ಸಕ್ರಿಯ ಜಾಬ್ ಕಾರ್ಡ್ ಹೊಂದಿದವರಿಗೆ ಉದ್ಯೋಗ ನೀಡಿ, ಆರ್ಥಿಕ ನೆರವು ಒದಗಿಸಿ. ಫಲಾನುಭವಿ ಆಧಾರಿತ ಯೋಜನೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ. ನಿಗದಿತ ಕಾಲಮಿತಿಯೊಳಗೆ ಯೋಜನೆಯನ್ನು ಅನುಷ್ಠಾನಗೊಳಿಸಿ ಎಂದು ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯ ವಿವಿಧ ಇಲಾಖೆಗಳ ಅಧೀನದಲ್ಲಿಬರುವ ವಸತಿ ಶಾಲೆಗಳು, ವಸತಿ ನಿಲಯಗಳು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧೀನದ ಶಾಲಾ ಕಾಲೇಜುಗಳಲ್ಲಿ ಕೊಠಡಿ, ನವೀಕರಣ ಇತ್ಯಾದಿ ಪ್ರಸ್ತಾವನೆಗಳನ್ನು ಸಲ್ಲಿಸಬೇಕು. ಅಲ್ಲದೇ ಸ್ವಂತ ಕಟ್ಟಡಕ್ಕೆ ನಿವೇಶನಗಳ ಖರೀದಿ ಹಾಗೂ ಹೊಸ ಕಟ್ಟಡ ನಿರ್ಮಾಣದಂತಹ ಯೋಜನೆಗಳ ಮಾಹಿತಿಯನ್ನು ನೀಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಫೌಜಿಯಾ ತರನ್ನುಮ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕಾವ್ಯ ಚತುರ್ವೇದಿ, ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ.ಕಡಿ, ಉಪ ವಿಭಾಗಾಧಿಕಾರಿಗಳಾದ ಬಸವಣಪ್ಪ ಕಲಶೆಟ್ಟಿ, ಜಿ.ಪಂ ಉಪಕಾರ್ಯದರ್ಶಿಗಳಾದ ಸಮೀರ್ ಮುಲ್ಲಾ, ಜಿ.ಪಂ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ.ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.