ನವದೆಹಲಿ :ಲೋಕಸಭೆ ಚುನಾವಣೆ ಫಲಿತಾಂಶವು (Lok Sabha Election Result 2024) ಬಿಜೆಪಿ ಹಾಗೂ ಕಾಂಗ್ರೆಸ್‌ಗೂ ಅಚ್ಚರಿ ತಂದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಕೂಟದ ಸ್ಥಾನಗಳು 290ಕ್ಕೆ ಇಳಿಕೆಯಾಗಿದ್ದು ಚಿಂತೆಗೀಡು ಮಾಡಿದೆ. ಅತ್ತ, ನಿರೀಕ್ಷೆಗೂ ಮೀರಿ ಇಂಡಿಯಾ ಒಕ್ಕೂಟವು 230ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದಿದ್ದರೂ ಸತತ ಮೂರನೇ ಬಾರಿಗೆ ಎನ್‌ಡಿಎ ಸರ್ಕಾರ ರಚಿಸುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi Election) ಅವರು ಚುನಾವಣೆ ಫಲಿತಾಂಶದ ಕುರಿತು ಪೋಸ್ಟ್‌ ಮಾಡಿದ್ದಾರೆ. ‘ದೇಶದ ಜನರು ಎನ್‌ಡಿಎ ಮೇಲೆ ವಿಶ್ವಾಸ ಇಟ್ಟಿದ್ದು, ಮೂರನೇ ಬಾರಿ ಸರ್ಕಾರ ರಚಿಸಲು ಅವಕಾಶ ನೀಡಿರುವುದು ಐತಿಹಾಸಿಕ’ ಎಂದಿದ್ದಾರೆ.

‘ದೇಶದ ಜನರು ಎನ್‌ಡಿಎ ಮೈತ್ರಿಕೂಟದ ಮೇಲೆ ನಂಬಿಕೆ ಇರಿಸಿದ್ದಾರೆ. ಇದೇ ಕಾರಣಕ್ಕಾಗಿ, ಸತತವಾಗಿ ಮೂರನೇ ಬಾರಿ ಸರ್ಕಾರ ರಚಿಸಲು ಅವಕಾಶ ಕೊಟ್ಟಿದ್ದಾರೆ. ಜನರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ಕೃತಜ್ಞನಾಗಿದ್ದೇನೆ. ಮುಂದಿನ ದಿನಗಳಲ್ಲೂ ಜನರ ಆಶೋತ್ತರಗಳನ್ನು ಈಡೇರಿಸುವ ದಿಸೆಯಲ್ಲಿ ನಾವು ಉತ್ತಮ ಆಡಳಿತ ನೀಡುತ್ತೇವೆ. ಹಾಗೆಯೇ, ಚುನಾವಣೆಯಲ್ಲಿ ಸತತವಾಗಿ ಶ್ರಮ ವಹಿಸಿದ ಕಾರ್ಯಕರ್ತರಿಗೂ ನಾನು ಧನ್ಯವಾದ ತಿಳಿಸುತ್ತೇನೆ. ಕಾರ್ಯಕರ್ತರ ಶ್ರಮವನ್ನು ಬಣ್ಣಿಸಲು ನನ್ನ ಬಳಿ ಪದಗಳೇ ಇಲ್ಲ’ ಎಂಬುದಾಗಿ ನರೇಂದ್ರ ಮೋದಿ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಎನ್‌ಡಿಎ ಮೈತ್ರಿಕೂಟವು 290 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಮ್ಯಾಜಿಕ್‌ ನಂಬರ್‌ ಆದ 272ರ ಗಡಿಯನ್ನು ದಾಟಿದೆ. ಆದರೆ, ಎನ್‌ಡಿಎ ಮೈತ್ರಿಕೂಟದಲ್ಲಿರುವ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಹಾಗೂ ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಇಂಡಿಯಾ ಮೈತ್ರಿಕೂಟದ ನಾಯಕರು ಸಂಪರ್ಕಿಸಲು ಯತ್ನಿಸುತ್ತಿದ್ದಾರೆ. ಇದರಿಂದಾಗಿ, ಎನ್‌ಡಿಎ ಮೈತ್ರಿಕೂಟವು ಮೂರನೇ ಬಾರಿಗೆ ಸರ್ಕಾರ ರಚಿಸಲು ಇನ್ನಿಲ್ಲದ ಕಸರತ್ತು ಮಾಡುವಂತಾಗಿದೆ.

ಚುನಾವಣೆಯಲ್ಲಿ ಬಿಜೆಪಿಗೆ ಏಕೈಕ ಪಕ್ಷವಾಗಿ ಗರಿಷ್ಠ ಸೀಟುಗಳು (239) ಪ್ರಾಪ್ತಿಯಾಗಿರುವ (BJP Vote Share) ಹೊರತಾಗಿಯೂ ಆ ಪಕ್ಷಕ್ಕೆ ಸಣ್ಣ ಮುಖಭಂಗವಾಗಿದೆ. ಯಾಕೆಂದರೆ ಈ ಪಕ್ಷವು ಈ ಹಿಂದಿನ ಎರಡು ಚುನಾವಣೆಯಲ್ಲಿ ಬಿಜೆಪಿ ಗಳಿಸಿದ ಸ್ಥಾನಗಳನ್ನು ಹೋಲಿಸಿದರೆ ಇದು ದೊಡ್ಡ ಹಿನ್ನಡೆ. 2014ರಲ್ಲಿ 282 ಸ್ಥಾನ ಗೆದ್ದಿದ್ದ ಬಿಜೆಪಿ 2019ರಲ್ಲಿ 303 ಸ್ಥಾನ ತನ್ನದಾಗಿಸಿಕೊಂಡಿತ್ತು. ಹೀಗಾಗಿ ಈ ಬಾರಿ ಸರಳ ಬಹುಮತಕ್ಕೆ ಬೇಕಾದ 272 ಸೀಟ್​ಗಳನ್ನೂ ಪಡೆಯಲಾಗದ ಸ್ಥಿತಿ ತಲುಪಿರುವುದು ಅಚ್ಚರಿ. ಬಿಜೆಪಿಗೆ ಇದು ಪರ್ವಕಾಲದಂತೆ ಕಂಡು ಬಂದಿದ್ದ ಹೊರತಾಗಿಯೂ ವಿಶ್ವದ ಬಲಿಷ್ಠ ರಾಜಕೀಯ ಪಕ್ಷಕ್ಕೆ ಈ ರೀತಿಯ ಹಿನ್ನಡೆಯಾಗಿರುವುದು ಅಚ್ಚರಿ ಹಾಗೂ ಭಾರತದ ಪ್ರಜಾಪ್ರಭುತ್ವದ ಸೌಂದರ್ಯ ಕೂಡ. ಆದಾಗ್ಯೂ ಎನ್​​ಡಿಎ ಒಕ್ಕೂಟದ ಮೂಲಕ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ

error: Content is protected !!