ಗಂಗಾವತಿ: ನಗರದ ವಾಣಿಜ್ಯ ಮಳಿಗೆಗಳು ಹಾಗೂ ಉದ್ಯಮಗಳಲ್ಲಿನ ನಾಮಫಲಕದಲ್ಲಿ ಕನ್ನಡ ಕಡ್ಡಾಯಗೊಳಿಸಿ. ಅನುಷ್ಠಾನಗೊಳಿಸುವಂತೆ ಫೆಬ್ರವರಿ-29 ಗುರುವಾರದಂದು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ತಹಸೀಲ್ದಾರರಿಗೆ ಮನವಿ ಪತ್ರ ನೀಡುವ ಮೂಲಕ ಒತ್ತಾಯಿಸಿದೆ.

ಮನವಿ ಪತ್ರ ಸಲ್ಲಿಸಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಯ ತಾಲೂಕ ಅಧ್ಯಕ್ಷ ಯಮನೂರ ಭಟ್‌ರವರು ಕನ್ನಡ ನಾಮಫಲಕ ಕಡ್ಡಾಯಗೊಳಿಸುವಂತೆ ವಿಧಾನ ಮಂಡಲ ಅಧಿವೇಶನದಲ್ಲಿ ಅನುಮೋದನೆ ದೊರೆತಿದ್ದು, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ 2024ರ ಸಂಬಂಧಿಸಿದಂತೆ ರಾಜ್ಯಪತ್ರ ಹೊರಡಿಸಲಾಗಿದೆ. ಕೂಡಲೇ ನಗರದ ಸರಕಾರ ಅಥವಾ ಸ್ಥಳೀಯ ಪ್ರಾಧಿಕಾರದಿಂದ ಅನುಮತಿ ಮತ್ತು ಮಂಜೂರಾತಿ ಪಡೆದ ವಾಣಿಜ್ಯ, ಕೈಗಾರಿಕೆ. ಟ್ರಸ್ಟ್‌ಗಳು, ಸಮಾಲೋಚನೆ ಕೇಂದ್ರಗಳು, ಪ್ರಯೋಗಾಲಯಗಳು, ಆಸ್ಪತ್ರೆಗಳು, ಔಷಧಿ ಅಂಗಡಿಗಳು, ಮನೋರಂಜನಾ ಕೇಂದ್ರಗಳು, ಹೋಟೆಲ್‌ಗಳು ಸೇರಿದಂತೆ ಇನ್ನಿತರ ಉದ್ದಿಮೆಗಳ ನಾಮಫಲಕಗಳಲ್ಲಿ ಶೇಕಡ 60 ರಷ್ಟು ಕನ್ನಡ ಭಾಷೆ ಪ್ರದರ್ಶಿಸುವಂತೆ ಕ್ರಮ ಕೈಗೊಳ್ಳಬೇಕು. ನಗರದ ಎಲ್ಲಾ ವಾಣಿಜ್ಯೋದ್ಯಮಿಗಳಿಗೆ ಈ ಕುರಿತಂತೆ ಪ್ರಕಟಣೆ ಹೊರಡಿಸಿ ಗಡುವು ನೀಡಬೇಕು. ನಿಗದಿತ ಸಮಯದೊಳಗೆ ಕನ್ನಡ ನಾಮಫಲಕ ಪ್ರದರ್ಶಿಸದ ವಾಣಿಜ್ಯೋದ್ಯಮಿಗಳ ಲೈಸೆನ್ಸ್ ರದ್ದುಪಡಿಸಬೇಕು. ತಪ್ಪಿದಲ್ಲಿ ನಮ್ಮ ಸಂಘಟನೆ ವತಿಯಿಂದ ನಾಮಫಲಕಗಳಿಗೆ ಕಪ್ಪುಮಸಿ ಬಳಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಸಂಘಟನೆಯ ತಾಲೂಕ ಪ್ರಧಾನ ಕಾರ್ಯದರ್ಶಿ ಪವನಕುಮಾರ ಗಡ್ಡಿ, ನಗರ ಘಟಕ ಅಧ್ಯಕ್ಷ ಹನುಮೇಶ ಕುರುಬರ, ತಾಲೂಕ ಯುವ ಘಟಕದ ಅಧ್ಯಕ್ಷ ಸುನೀಲ್ ಕುಮಾರ ಕುಲಕರ್ಣಿ, ತಾಲೂಕು ಉಪಾಧ್ಯಕ್ಷ ಸುರೇಶಕುಮಾರ ಚನ್ನಳ್ಳಿ, ತಾಲೂಕು ಉಪಾಧ್ಯಕ್ಷ ನಹೀಮ್ ಪಾಷಾ, ತಾಲೂಕು ಸಂಚಾಲಕ ಮುತ್ತುರಾಜ, ತಾಲೂಕ ಕಾರ್ಯದರ್ಶಿ ಹುಲಿಗೆಪ್ಪ ಹಾರೆಗರ, ತಾಲೂಕು ಉಪಾಧ್ಯಕ್ಷ ರಮೇಶ ಕುಮಾರ. ನಗರ ಘಟಕದ ಉಪಾಧ್ಯಕ್ಷ ಅಂಬಾಸ್ ಸೇರಿದಂತೆ ಮಂಜುನಾಥ ಆರತಿ, ವಿರೇಶ ಇ.ಡಿ., ಸಂಗಮೇಶ, ಹೊನ್ನಪ್ಪ ಗುತ್ತಿಗೆನೂರು ಹಾಗೂ ಇನ್ನಿತರ ಪದಾಧಿಕಾರಿಗಳು ಇದ್ದರು.

error: Content is protected !!