ಸಿಂಧನೂರು : ತಾಲ್ಲೂಕಿನ ಜವಳಗೇರಾ ಗ್ರಾಮದ ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಮತ್ತು ಅವರ ಕುಟುಂಬದ ಸದಸ್ಯರಿಗೆ ಹೆಚ್ಚುವರಿಯಾಗಿರುವ 4,900 ಎಕರೆ ಜಮೀನನ್ನು ತನಿಖೆಗೊಳಪಡಿಸುವಂತೆ ಆಗ್ರಹಿಸಿ ಸಿಪಿಐಎಂಎಲ್ ರೆಡ್‍ಸ್ಟಾರ್ ಮತ್ತು ಕರ್ನಾಟಕ ರೈತ ಸಂಘಗಳು ಜಂಟಿಯಾಗಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದವು.
ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ಕ್ಕೆ ತಿದ್ದುಪಡಿ ತಂದು ಎಲ್ಲ ಹೆಚ್ಚುವರಿ ಭೂ ಪ್ರಕರಣಗಳನ್ನು ಮರು ವಿಚಾರಣೆ ಮಾಡುವಂತೆ ಆದೇಶ ಹೊರಡಿಸಬೇಕು ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ ಅವರು ಮನವಿ ಮಾಡಿದರು.
ಎ.ದರ್ಜೆ ಭೂಮಿಯ ಪೈಕಿ 450 ಎಕರೆಯನ್ನು ಈ ಹಿಂದೆ ಭೂ ಹೀನರಿಗೆ ಹಂಚಲಾಗಿದೆ. ಆದಾಗ್ಯೂ ನಕಲಿ ವಂಶಾವಳಿ, ನಕಲಿ ಹೇಳಿಕೆಗಳಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಾನೂನು ಬಾಹಿರವಾಗಿ ನಾಡಗೌಡರ ಕುಟುಂಬ ಭೂ ಸ್ವಾಧೀನದಲ್ಲಿಟ್ಟುಕೊಂಡಿದೆ. ರೈತರಿಗೆ ಸಿಗಬೇಕಾದ ಭೂಮಿಯನ್ನು ಸಮಗ್ರ ತನಿಖೆ ಕೈಗೊಂಡರೆ ಸಹಸ್ರಾರು ಎಕರೆ ಭೂಮಿ ರೈತರಿಗೆ ಸಿಗುತ್ತದೆ ಎಂದು ಮುಖ್ಯಮಂತ್ರಿ ಅವರಿಗೆ ವಿವರಿಸಿದರು.
ಮುಖಂಡರಾದ ಮಾಬುಸಾಬ ಬೆಳ್ಳಟ್ಟಿ, ಅಂಬಮ್ಮ ಬಸಾಪುರ, ಹನುಂತಪ್ಪ ಗೋಡಿಹಾಳ, ಸಂತೋಷ ಹಿರೇದಿನ್ನಿ ಇದ್ದರು.