ಗವಿಸಿದ್ದೇಶ್ವರ ಜಾತ್ರೆ: ಹೊಸ ಇತಿಹಾಸ ಬರೆದ ಶ್ರೀಮಠದ ಜಾಗೃತಿ ಜಾಥಾ


ಕೊಪ್ಪಳ ಜನವರಿ 04: “ಗವಿಸಿದ್ದೇಶ್ವರ ಶ್ರೀಮಠದ ಅಂಗಳದಲ್ಲಿ ದಾಖಲೆಯ ವಿದ್ಯಾರ್ಥಿ ಸಮಾವೇಶ.. ರಸ್ತೆಯುದ್ದಕ್ಕೂ ಸಾಲುಸಾಲಾಗಿ ಹೆಜ್ಜೆ ಹಾಕಿದ ವಿದ್ಯಾರ್ಥಿಗಳಿಂದ ಮೊಳಗಿದ ಅಂಗಾಂಗ ದಾನ ಮಹತ್ವದ ಸಂದೇಶ..”
ಅಭಿನವ ಗವಿಸಿದ್ದೇಶ್ವರ ಶ್ರೀಗಳ ದೂರದೃಷ್ಟಿ ಹಿನ್ನೆಲೆಯಲ್ಲಿ ಶ್ರೀ ಗವಿಸಿದ್ದೇಶ್ವರರ ಜಾತ್ರೋತ್ಸವದ ವಿಶೇಷತೆ ಮತ್ತು ಪರಂಪರೆಯಾಗಿ ನಡೆದುಕೊಂಡ ಬಂದ ಮತ್ತೊಂದು ಆರೋಗ್ಯ ಜಾಗೃತಿ ಕಾರ್ಯಕ್ರಮ `ಸತ್ತ ಮೇಲೂ ಬದುಕುವ ಯೋಗ, ಸಾಯುವವನಿಗೆ ಅಂಗಾಂಗ ಯೋಗ’ ಎನ್ನುವ ಘೋಷ ವಾಕ್ಯದೊಂದಿಗೆ ನಡೆದ ಶ್ರೀಮಠದ ಜಾಗೃತಿ ನಡಿಗೆ-2023ರ ಚಿತ್ರಣವಿದು.


ಹೌದು..! ಐತಿಹಾಸಿಕ ಕೊಪ್ಪಳದ ಶ್ರೀ ಗವಿಸಿದ್ದೇಶ್ವರರ ಜಾತ್ರೆಯನ್ನು ಸಮಾಜಮುಖಿಯಾಗಿ ತೆಗೆದುಕೊಂಡು ಹೋಗಬೇಕು ಎನ್ನುವ ಅಭಿನವ ಗವಿಶ್ರೀಗಳ ಸಂಕಲ್ಪದ ಮತ್ತೊಂದು ಸಾರ್ಥಕವಾದ ಆರೋಗ್ಯ ಜಾಗೃತಿ ಕಾರ್ಯಕ್ರಮವು ಜನವರಿ 4ರಂದು ನಡೆಯಿತು. ಈ ಕಾರ್ಯಕ್ರಮಕ್ಕೆ ಜಿಲ್ಲೆಯ 73ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಮತ್ತು 23ಕ್ಕು ಹೆಚ್ಚು ಸಂಘ-ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಮತ್ತು ಇನ್ನೀತರರು ಸಾಕ್ಷಿಯಾದರು.


ಗವಿಮಠ ಸಂಸ್ಥಾನದ ಸಹಯೋಗದೊಂದಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೀಮ್ಸ್, ಪ್ಯಾರಾ ಮೆಡಿಕಲ್, ನರ್ಸಿಂಗ್ ಕಾಲೇಜುಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ಕೃಷಿ ವಿವಿ ಸ್ನಾತಕೋತ್ತರ ಕೇಂದ್ರ, ಖಾಸಗಿ ಶಾಲೆಗಳ ಒಕ್ಕೂಟ, ಭಾರತೀಯ ರೆಡ್ ಕ್ರಾಸ್, ವಿವಿಧ ಸಂಘ ಸಂಸ್ಥೆಗಳು, ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಜನವರಿ 4ರ ಬೆಳಗ್ಗೆ ಬಾಲಕಿಯರ ಸರ್ಕಾರಿ ಕಾಲೇಜಿನ ಮೈದಾನದಲ್ಲಿ, ಗವಿಸಿದ್ದೇಶ್ವರ ಶ್ರೀಗಳ ಸಮ್ಮುಖದಲ್ಲಿ ಅಂಗಾಂಗ ದಾನ ಜಾಗೃತಿ ಜಾಥಾ ಆರೋಗ್ಯ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಬಿ.ಫೌಜಿಯಾ ತರುನ್ನುಮ್ ಅವರು ವಿದ್ಯುಕ್ತ್ ಚಾಲನೆ ನೀಡಿದರು.


ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಗವಿಸಿದ್ದೇಶ್ವರ ಶ್ರೀಗಳ ಜಾತ್ರೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ನಡೆಯುವ ಆರೋಗ್ಯ ಜಾಗೃತಿ ಕಾರ್ಯಕ್ರಮವು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗಿಯಾಗುವ ದಾಖಲೆಗಳೊಂದಿಗೆ ಯಶಸ್ಸುಗೊಳ್ಳುವುದು ಕರ್ನಾಟಕದಲ್ಲಿಯೇ ಹೊಸ ಇತಿಹಾಸ ಸೃಷ್ಟಿಸಿದೆ ಎಂದು ತಿಳಿಸಿದರು.


ಸಾಲಾಗಿ ಹೊರಟ ವಿದ್ಯಾರ್ಥಿಗಳು: ಬಾಲಕಿಯರ ಸರ್ಕಾರಿ ಕಾಲೇಜಿನ ಮೈದಾನದಿಂದ ಆರಂಭವಾದ ಜನಜಾಗೃತಿ ಜಾಥಾ ಮೂಲಕ ಸಾಲುಸಾಲಾಗಿ ಹೊರಟ ವಿದ್ಯಾರ್ಥಿಗಳು ಅಶೋಕ ವೃತ್ತ, ಜವಾಹರ ರಸ್ತೆ, ಗಡಿಯಾದ ಕಂಬದ ಮೂಲಕ ಗವಿಮಠದ ಜಾತ್ರಾ ಮಹಾದಾಸೋಹ ಸ್ಥಳಕ್ಕೆ ಬಂದು ಸಮಾವೇಶಗೊಂಡರು.


ಶ್ರೀಗಳಿಂದ ಆಶೀರ್ವಚನ: ಗವಿಮಠದ ಜಾತ್ರಾ ಮಹಾದಾಸೋಹ ಸ್ಥಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ವಿದ್ಯಾರ್ಥಿಗಳನ್ನುದ್ದೇಶಿಸಿ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಆಶೀರ್ವಚನ ನೀಡಿ, ಜಾತ್ರೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷವೂ ಒಂದು ಮಹತ್ವದ ವಿಷಯವನ್ನು ಎತ್ತಿಕೊಂಡು ಜಾಗೃತಿ ಮೂಡಿಸುತ್ತ ಪರಂಪರೆ ರೀತಿಯಲ್ಲಿ ಸಾಗುತ್ತಿರುವ ಕಾರ್ಯಕ್ರಮದಲ್ಲಿ ಸೇರುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ 6 ಸಾವಿರದಿಂದ 18 ಸಾವಿರಕ್ಕೆ ಹೆಚ್ಚಿರುವುದು ಇಡೀ ರಾಜ್ಯದಲ್ಲಿಯೇ ಹೊಸ ಇತಿಹಾಸ ಸೃಷ್ಟಿಸಿದೆ ಎಂದು ತಿಳಿಸಿದರು.

ನಾವು ಈ ದಿನ ಹಾಕುವ ಪ್ರತಿಯೊಂದು ಹೆಜ್ಜೆಯು ಮುಂದಿನ ನಮ್ಮ ಬದುಕಿಗೆ ದಿಕ್ಸೂಚಿಯಂತಿರುತ್ತದೆ. ಇದನ್ನು ವಿದ್ಯಾರ್ಥಿಗಳು ಅರಿಯಬೇಕು. ನಾನು ಯಶಸ್ವಿಯಾಗಿಬೇಕು ಅನ್ನುವ ಆಸೆಯು ಎಲ್ಲರಲ್ಲಿಯೂ ಇರುತ್ತದೆ. ಅತಿ ಹೆಚ್ಚು ಹಣ ಗಳಿಸಿದರಷ್ಟೇ, ಎಲ್ಲರಿಗಿಂತ ಹೆಚ್ಚು ಅಂಕ ಪಡೆದರಷ್ಟೇ ಯಶಸ್ವಿ ಜೀವನ ಅಲ್ಲ; ಬದಲಾಗಿ ನಮ್ಮ ಮಾತು ಕಾರ್ಯಗಳಿಂದ ಇನ್ನೊಬ್ಬರ ಜೀವನದಲ್ಲಿ ನಗುವನ್ನು ತರುವುದು, ನಮ್ಮ ಮಾತು ಕಾರ್ಯಗಳಿಂದ ಇನ್ನೊಬ್ಬರ ಕಣ್ಣಿನಲ್ಲಿ ಆನಂದಭಾಷ್ಪ ಹರಿಯುವಂತೆ ಮಾಡುವುದೇ ಯಶಸ್ವಿ ಜೀವನ ಎಂದು ತಿಳಿಸಿದರು. ಎಲ್ಲ ಧರ್ಮಗಳ ಸಾರವು ಉತ್ತಮನಾಗಬೇಕು ಉಪಕಾರಿಯಾಗು ಎಂಬುದೇ ಆಗಿದೆ.

ವಿದ್ಯಾರ್ಥಿಗಳು ಇದನ್ನರಿತು ಮುಂದೆ ಸಾಗಬೇಕು ಎಂದು ತಿಳಿಸಿದರು.
ಬಹುಮಾನ ವಿತರಣೆ: ಆರೋಗ್ಯ ಜಾಗೃತಿ ಕಾರ್ಯಕ್ರಮದ ನಿಮಿತ್ತ ಡಿ.19ರಂದು ಅಂಗಾಂಗ ದಾನದ ಅವಶ್ಯಕತೆ ವಿಷಯದ ಮೇಲೆ ಏರ್ಪಡಿಸಿದ್ದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೆ ವೇಳೆ ಬಹುಮಾನ ವಿತರಿಸಲಾಯಿತು.

ಪ್ರೌಢಶಾಲಾ ವಿಭಾಗದಲ್ಲಿ ಶಾಂತಾ ನಾಗರಾಳ ಪ್ರಥಮ, ವಾಣಿಶ್ರೀ ಮಳ್ಳಿ ದ್ವಿತೀಯ ಮತ್ತು ಸೃಷ್ಟಿ ಗೊಲ್ಲರ ತೃತೀಯ ಸ್ಥಾನ ಪಡೆದು ಬಹುಮಾನ ಗಿಟ್ಟಿಸಿದರು. ಪಿಯು ವಿಭಾಗದಲ್ಲಿ ಜಗದೀಶ ಪ್ರಥಮ, ಶಶಿಕುಮಾರ ಉಳಾಗಡ್ಡಿ ದ್ವಿತೀಯ ಮತ್ತು ಸೌಮ್ಯ ನೀಲಕಂಠ ತೃತೀಯ ಸ್ಥಾನ ಗಿಟ್ಟಿಸಿ ಬಹುಮಾನ ಪಡೆದರು.

ಪದವಿ ವಿಭಾಗದಲ್ಲಿ ಪ್ರದೀಪ ಕುಮಾರ ಪ್ರಥಮ, ಚೆನ್ನಮ್ಮ ದ್ವಿತೀಯ ಮತ್ತು ಅನಿತಾ ಗುರಿಕಾರ ತೃತೀಯ ಸ್ಥಾನ ಪಡೆದು ಬಹುಮಾನ ಪಡೆದರು. ಮೆಡಿಕಲ್ ವಿಭಾಗದಲ್ಲಿ ಅಭಿಷೇಖ ಸೂಡಿ ಪ್ರಥಮ, ಶಿಲ್ಪಾ ದ್ವಿತೀಯ ಹಾಗೂ ವಿವೇಕ ಮತ್ತು ಬಾಲಾಜಿ ಅವರು ತೃತೀಯ ಸ್ಥಾನ ಪಡೆದು ಬಹುಮಾನ ಗಿಟ್ಟಿಸಿದರು.


ಸನ್ಮಾನ: ಕಾರ್ಯಕ್ರಮವನ್ನುದ್ದೇಶಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಅಲಕಾನಂದ ಅವರು ಮಾತನಾಡಿದರು. ಅಂಗಾಗ ದಾನಕ್ಕಾಗಿ ನೋಂದಣಿ ಮಾಡಿದ ಮಹನಿಯರಿಗೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಆರೋಗ್ಯ ಜಾಗೃತಿ ಜಾಥಾ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಜಾಥಾ, ಭಾಷಣ ಮತ್ತು ಇನ್ನೀತರ ಸ್ಪರ್ಧೆಗಳು ನಡೆದವು. ಕಾರ್ಯಕ್ರಮದಲ್ಲಿ ಗವಿಮಠ ಸಂಸ್ಥಾನದ ಶರಣಬಸವ ಶೆಟ್ಟರ್ ಹಾಗೂ ಇನ್ನೀತರರು ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಸೋಮರೆಡ್ಡಿ ಅಳವಂಡಿ ಹಾಗೂ ಇನ್ನೀತರ ಪದಾಧಿಕಾರಿಗಳು ಮತ್ತು ಇನ್ನೀತರರು ಇದ್ದರು. ಬಸವರಾಜಪ್ಪ ಬಿಳಿಯಲಿ ಅವರು ನಿರೂಪಿಸಿದರು.


ಹಿಂದೆಯೂ ಜಾಗೃತಿ ಜಾಥಾ: ಮಹಾ ರಕ್ತದಾನ ಶಿಬಿರ, ಬಾಲ್ಯ ವಿವಾಹ ತಡೆ ಜಾಗೃತಿ ನಡಿಗೆ, ಜಲ ಸಂರಕ್ಷಣೆ ಜಾಗೃತಿ ಅಭಿಯಾನ, ಸಶಕ್ತ ಮನ-ಸಂತೃಪ್ತ ಜೀವನ, ಕೃಪಾ ದೃಷ್ಟಿ, ಲಕ್ಷ ವೃಕ್ಷೋತ್ಸವ ವೃಕ್ಷ ಸಂರಕ್ಷಣೆಯ ಜಾಗೃತಿ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಈ ಹಿಂದೆ ಗವಿಶ್ರೀ ಮಠದಿಂದ ಜಾಗೃತಿ ಜಾಥಾ ನಡೆದಿರುವುದನ್ನು ಸ್ಮರಿಸಬಹುದಾಗಿದೆ.

error: Content is protected !!