ಕೊಪ್ಪಳ ಜುಲೈ 28 : ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು ಹಾಗೂ ಜಿಲ್ಲಾ ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ ಮತ್ತು ತಾಲೂಕು ಆಡಳಿತ, ತಾಲೂಕು ಪಂಚಾಯತ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಗಂಗಾವತಿ ಹಾಗೂ ಬ್ರೈಟ್ ಇಂಡಿಯಾ ಸೂಸೈಟಿ, ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012, ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 ಮತ್ತು ಮಕ್ಕಳ ಕಡ್ಡಾಯ ಮತ್ತು ಉಚಿತ ಶಿಕ್ಷಣ ಹಕ್ಕು ಕಾಯ್ದೆ-2009ರ ಕುರಿತು ಜಾಗೃತಿ ಕಾರ್ಯಕ್ರಮವನ್ನು ಜುಲೈ 27ರಂದು ಗಂಗಾವತಿ ನಗರದ ಶ್ರೀ ಚನ್ನಮಲ್ಲಿಕಾರ್ಜುನ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಜಿ ರಾಮತ್ನಾಳ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ, ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆಯ (ಎನ್.ಎಫ್.ಎಚ್.ಎಸ್) ಅನ್ವಯ 2015-16ನೇ ಸಾಲಿನಲ್ಲಿ ಬಾಲ್ಯವಿವಾಹ ಪ್ರಮಾಣ 35.9% ಇದಿದ್ದು, 2019-20ನೇ ಸಾಲಿನಲ್ಲಿ ಈ ಪ್ರಮಾಣ 27.1% ಬಂದಿದೆ. ಸಮುದಾಯದಲ್ಲಿ ಕಾಯ್ದೆಯ ಕುರಿತು ಜಾಗೃತಿಯನ್ನು ಮೂಡಿಸುತ್ತಿರುವುದರ ಪರಿಣಾಮವಾಗಿ ಬಾಲ್ಯವಿವಾಹಗಳು 8.8 ಪ್ರಮಾಣದಷ್ಟು ಕಡಿಮೆಯಾಗಿದೆ. ಆದರೂ ಕೆಲವೆಡೆ ಬಾಲ್ಯವಿವಾಹ ಪ್ರಕರಣಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015ರನ್ವಯ ಪೋಷಣೆ ಮತ್ತು ರಕ್ಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿಗಳನ್ನು, ವಿಶೇಷ ದತ್ತು ಸೇವಾ ಕೇಂದ್ರಗಳನ್ನು ಸ್ಥಾಪಿಸಿದ್ದರೂ ಸಹ ಮಕ್ಕಳನ್ನು ಎಲ್ಲೆಂದರಲ್ಲಿ ತೊರೆದು ಹೋಗುತ್ತಿರುವ ಪ್ರಕರಣಗಳು ಇನ್ನೂ ವರದಿಯಾಗುತ್ತಲೇ ಇವೆ. ಮಕ್ಕಳ ಮೇಲೆನ ಲೈಂಗಿಕ ಅಪರಾಧಗಳನ್ನು ತಡೆಗಟ್ಟಲು ಸರಕಾರವು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012ನ್ನು ಜಾರಿಗೆ ತಂದಿದ್ದು, ಈ ಕಾಯ್ದೆಯನ್ನು 2019ರಲ್ಲಿ ತಿದ್ದುಪಡಿಯನ್ನು ಮಾಡಿದೆ. ಅದರನ್ವಯ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಿಗೆ ಹೆಚ್ಚಿನ ಅಂದರೆ 20 ವರ್ಷ, ಜೀವಾವಧಿ ಜೈಲು ಶಿಕ್ಷೆ ಅಥವಾ ಮರಣದಂಡನೆಯನೂ ಶಿಕ್ಷೆಯನ್ನು ಸಹಾ ನೀಡಬಹುದಾಗಿದೆ. ಆದರೂ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳು ತಗ್ಗಿಲ್ಲ. ಈ ಎಲ್ಲಾ ಅಂಶಗಳನ್ನು ಪರಿಶೀಲಿಸಲಾಗಿ ಸಮುದಾಯದಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮತ್ತು ಪ್ರಚಾರದ ಅವಶ್ಯಕತೆಯಿದೆ. ಗ್ರಾಮ ಪಂಚಾಯತ್, ಗ್ರಾಮ ಮಟ್ಟದಲ್ಲಿ ಹೆಚ್ಚಿನ ಪ್ರಮಾಣದ ಜಾಗೃತಿ, ಮೂಡಿಸುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಗ್ರಾಮ ಮಟ್ಟದ ಮಕ್ಕಳ ರಕ್ಷಣಾ ಸಮಿತಿಯ ಸದಸ್ಯರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದರು.

ಕರ್ನಾಟಕ ರಾಜ್ಯ ಸರಕಾರವು ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ನೀತಿ-2016ನ್ನು ಜಾರಿಗೆ ತಂದಿದ್ದು, ಅದರನ್ವಯ ಪ್ರತಿ ಶೈಕ್ಷಣಿಕ ಸಂಸ್ಥೆಗಳು ಅವುಗಳದೇ ಆದ ಮಕ್ಕಳ ಸುರಕ್ಷತಾ ನೀತಿಯನ್ನು ರಚಿಸಿ, ಅಳವಡಿಸಿ ಮತ್ತು ಅನುಷ್ಠಾನಗೊಳಿಸವುದು ಅವಶ್ಯಕವಾಗಿದೆ. ಮಕ್ಕಳ ಮೇಲಿನ ಯಾವುದೇ ರೀತಿಯ ದೌರ್ಜನ್ಯಗಳನ್ನು ತತಕ್ಷಣವೇ ಗುರುತಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವುದು ಅತ್ಯವಶ್ಯಕವಾಗಿದೆ. ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ದೂರವಾಣಿ ಸಂಖ್ಯೆ 080 2211 5291 ಅಥವಾ 1800 425 2900 ಸಂಖ್ಯೆ ಕರೆ ಮಾಡಿ ಮಾಹಿತಿಯನ್ನು ನೀಡಿದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ತಿಳಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ರೋಹಿಣಿ ಕೊಟಗಾರ ಅವರು ಮಾತನಾಡಿ, ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳಿಗಾಗಿ ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015ರ ಕಲಂ 41ರಡಿಯಲ್ಲಿ ಜಿಲ್ಲೆಯಲ್ಲಿ ಸರಕಾರಿ ಬಾಲಕರ ಮತ್ತು ಬಾಲಕಿಯರ ಬಾಲಮಂದಿರ ಹಾಗೂ ವಿಶೇಷ ದತ್ತು ಸೇವಾ ಕೇಂದ್ರಗಳನ್ನು ಸಾಂಸ್ಥಿಕ ಸೇವಾ ಕಾರ್ಯಕ್ರಮದಡಿಯಲ್ಲಿ ಆರಂಭಿಸಲಾಗಿದೆ. ಅಸಾಂಸ್ಥಿಕ ಸೇವೆಯಡಿಯಲ್ಲಿ ದತ್ತು ಕಾರ್ಯಕ್ರಮ, ಪೋಷಕತ್ವ ಕಾರ್ಯಕ್ರಮ, ಪ್ರಾಯೋಜಕತ್ವ ಮತ್ತು ಉಪಕಾರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಲೀಗಲ್ ಕಂ ಪ್ರೋಬೇಷನ್ ಆಫೀಸರ್ ಶಿವಲೀಲಾ ವನ್ನೂರು ಅವರು ಬಾಲ್ಯವಿವಾಹ ನಿಷೇಧ ಕಾಯ್ದೆ-2016 ಮತ್ತು ಕರ್ನಾಟಕ ತಿದ್ದುಪಡಿ ಕಾಯ್ದೆ-2016ರ ಬಗ್ಗೆ, ರಕ್ಷಣಾಧಿಕಾರಿ (ಅಸಾಂಸ್ಥಿಕ) ಪ್ರಶಾಂತ ರೆಡ್ಡಿ ಅವರು ದತ್ತು ಕಾರ್ಯಕ್ರಮ ಕುರಿತು ಮತ್ತು ರವಿಕುಮಾರ ಪವಾರ ಅವರು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 ಮತ್ತು ತಿದ್ದುಪಡಿ ಕಾಯ್ದೆ-2019ರ ಕುರಿತು ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯಾಧಿಕಾರಿಗಳಾದ ಶರಣಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಶರಣಪ್ಪ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ಎಸ್.ಎನ್. ಮುಜುಮದಾರ್, ಶಿಕ್ಷಣ ಇಲಾಖೆಯ ಸಂಯೋಜಕರಾದ ರಾಘವೇಂದ್ರ ಸೇರಿದಂತೆ ಮತ್ತಿತರರಿದ್ದರು.
ರವಿ ಬಡಿಗೇರ ನಿರೂಪಿಸಿದರು, ಮೇಘನಾ ಪ್ರಾರ್ಥಿನಿಸಿದರು, ಪ್ರಕಾಶ ಕಡಗದ ಸ್ವಾಗತಿಸಿದರು, ಯಮನಮ್ಮ ವಂದಿಸಿದರು. ಕಾರ್ಯಕ್ರಮದಲ್ಲಿ ಗಂಗಾವತಿ ತಾಲೂಕಿನ ನಗರ ವ್ಯಾಪ್ತಿಯ ಅಂಗನಾವಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

error: Content is protected !!