ಕೊಪ್ಪಳ ಜುಲೈ 26: ಕೊಪ್ಪಳ ಜಿಲ್ಲೆಯಲ್ಲಿ ಸಹ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನತೆಗೆ ಸ್ಪಂದನೆ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಜಾಗೃತೆವಹಿಸಿ ಕಾರ್ಯನಿರ್ವಹಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಹೇಳಿದರು.
ಕೊಪ್ಪಳ ಜಿಲ್ಲೆಯಲ್ಲಿ ಇತ್ತೀಚೆಗೆ ವಿವಿಧ ಭಾಗಗಳಲ್ಲಿ ಸುರಿದ ಮುಂಗಾರು ಮಳೆಯಿಂದ ಉಂಟಾದ ತೊಂದರೆಗಳು ಮತ್ತು ಕೈಗೊಂಡ ಕ್ರಮಗಳ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜುಲೈ 26ರಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಮಳೆಗಾಲ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿ ಹಾಗೂ ಮಳೆ ಕೊರತೆಯಾದಲ್ಲಿ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ, ಶಾಸಕರ ಅಧ್ಯಕ್ಷತೆಯ ತಾಲೂಕುಮಟ್ಟದ ಟಾಸ್ಕಪೋರ್ಸ ಸಭೆಯಲ್ಲಿ ಚರ್ಚಿಸಿ ನಿಯಮಾನುಸಾರ ಕ್ರಮ ವಹಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಆಯಾ ತಹಸೀಲ್ದಾರರು, ತಾಲೂಕು ಮಟ್ಟದ ಟಾಸ್ಕಪೋರ್ಸ ಸಭೆಯಲ್ಲಿ
ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ಯ ಎಂಜಿನಿಯರಿಂಗ್ ಇಲಾಖೆಯ ಅಧೀನದ ರಸ್ತೆಗಳ ಸ್ಥಿತಿಗತಿಯ ಬಗ್ಗೆ ಚರ್ಚಿಸಿ ಕ್ರಮ ವಹಿಸಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಸೂಚನೆ ನೀಡಿದರು.
ಹಾನಿ ಪ್ರದೇಶಕ್ಕೆ ಭೇಟಿ ಕೊಡಿ: ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ನಿರಂತರ ಮಳೆ ಬೀಳುತ್ತಿದೆ. ಹೀಗಾಗಿ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಿಯಮಾನುಸಾರ ಪರಿಹಾರ ಕೊಡುವ ಕಾರ್ಯವು ನಿಯಮಿತವಾಗಿ ನಡೆಸಬೇಕು.
ಮಳೆಯಿಂದಾಗಿ ಏನೇ ತೊಂದರೆಯಾದಲ್ಲಿ ಸರ್ಕಾರ ಸ್ಪಂದಿಸುತ್ತಿದೆ ಎನ್ನುವ ಭಾವನೆ ಜನರಲ್ಲಿ ಬರಬೇಕು. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಕಾರ್ಯ ನಿರ್ವಹಿಸಬೇಕು ಎಂದು ಸಚಿವರು ಸೂಚನೆ ನೀಡಿದರು.
ಸಮನ್ವಯತೆ ಇರಲಿ:
ತಹಸೀಲ್ದಾರರು, ತಾಪಂ ಇಓಗಳು, ನಗರಸಭೆ, ಪುರಸಭೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ವಿವಿಧೆಡೆಗಳಲ್ಲಿ ನಿರಂತರ ಸಂಚಾರ ಕೈಗೊಂಡು ಹಾನಿಯ ಬಗ್ಗೆ ಪರಿಶೀಲಿಸಬೇಕು. ಈಗಾಗಲೇ ತಾಲೂಕುವಾರು ನೇಮಿಸಿರುವ ನೋಡಲ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದು ಸಚಿವರು ಸೂಚಿಸಿದರು.
ಶಿಕ್ಷಣಾಧಿಕಾರಿಗಳಿಗೆ ಸೂಚನೆ: ನಿರಂತರ ಮಳೆಯಿಂದಾಗಿ ಶಾಲಾ ಕೊಠಡಿಗಳು ಸೋರುತ್ತಿದ್ದಲ್ಲಿ ಅಂತಹ ಕೊಠಡಿಗಳಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡದಂತೆ ಜಾಗೃತೆ ವಹಿಸಬೇಕು. ರಿಪೇರಿ ಸಾಧ್ಯತೆ ಇರುವ ಶಾಲಾ ಕೊಠಡಿಗಳನ್ನು ತುರ್ತಾಗಿ ಸರಿಪಡಿಸುವ ಸಂಬಂಧ ಅಂತಹ ಶಾಲೆಗಳ ಮಾಹಿತಿಯನ್ನು ಕೂಡಲೇ ಸಲ್ಲಿಸಲು ಸಚಿವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸ್ತೆ ಸರಿಪಡಿಸಲು ಸಲಹೆ: ಸಾರ್ವಜನಿಕರ ಬೇಡಿಕೆಯಂತೆ ಕೊಪ್ಪಳ ಗ್ರಾಮೀಣ ಭಾಗದ ವಿವಿಧ ಹಳ್ಳಿಗಳ ಸಂಪರ್ಕ ರಸ್ತೆಗಳು, ಕಿನ್ನಾಳ ರಸ್ತೆ, ಹುಲಗಿ ರಸ್ತೆ ಸೇರಿದಂತೆ ವಿವಿಧೆಡೆಗಳಲ್ಲಿನ ರಸ್ತೆ ದುರಸ್ಥಿಪಡಿಸಬೇಕು ಎಂದು ಶಾಸಕರಾದ ರಾಘವೇಂದ್ರ ಹಿಟ್ನಾಳ ಅವರು ತಿಳಿಸಿದರು.
ನೀರಿನ ಕೊರತೆಯಾಗದಿರಲಿ:
ಬೇರೆ ತಾಲೂಕುಗಳಿಗೆ ಹೋಲಿಸಿದರೆ ಕುಷ್ಟಗಿ ತಾಲೂಕಿನಲ್ಲಿ ವಾಡಿಕೆಗಿಂತ ಅತಿ ಕಡಿಮೆ ಮಳೆ ಸುರಿದಿದೆ. ಹೀಗಾಗಿ ಯಾವುದೇ ಕಡೆಗಳಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳು ಜಾಗೃತೆ ವಹಿಸಬೇಕು ಎಂದು ಶಾಸಕರಾದ ದೊಡ್ಡನಗೌಡ ಪಾಟೀಲ ಅವರು ಹೇಳಿದರು.
ನೀರು ಪೂರೈಕೆಗೆ ಕ್ರಮ:
ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಎದುರಾದ ಕಡೆಗಳಲ್ಲಿ ಹೊಸ ಬೋರವೆಲ್ ಕೊರೆಯಿಸಿ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಲು ತಾಪಂ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಪಾಂಡೆಯ ಅವರು ತಿಳಿಸಿದರು.
ಸಂತ್ರಸ್ಥರಿಗೆ ಪರಿಹಾರ:
ಜಿಲ್ಲೆಯಲ್ಲಿ ಪೂರ್ವ ಮುಂಗಾರು ಸೇರಿದಂತೆ ಇದುವರೆಗೆ ಸಂಭವಿಸಿದ 7 ಮಾನವ ಜೀವಹಾನಿ ಪ್ರಕರಣಗಳಿಗೆ 35 ಲಕ್ಷ ರೂ.ಪರಿಹಾರ ನೀಡಲಾಗಿದೆ.ಜಾನುವಾರು ಜೀವಹಾನಿಯ 41 ಪ್ರಕರಣಗಳಿಗೆ ಸಹ ಪರಿಹಾರ ಕೊಡಲಾಗಿದೆ. ಅದೇ ರೀತಿ 80 ಮನೆ ಹಾನಿ ಪ್ರಕರಣಗಳಿಗೆ ಸಹ ಪರಿಹಾರ ನೀಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ಸಭೆಗೆ ಮಾಹಿತಿ ನೀಡಿದರು.
ಜೂನ್ ದಿಂದ ಇಲ್ಲಿಯವರೆಗೆ ವಾಡಿಕೆ ಮಳೆ 132 ಮಿಮಿ ಇದ್ದು ವಾಸ್ತವಿಕವಾಗಿ 128 ಮಿಮಿ ಸುರಿದು ಶೇ.03ರಷ್ಟು ಕಡಿಮೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ ವಾಡಿಕೆ ಮಳೆ 211 ಮಿಮಿ ಇದ್ದು ವಾಸ್ತವವಾಗಿ 190 ಮಿಮಿ ಮಳೆಯಾಗಿ ಶೇ.10ರಷ್ಟು ಮಳೆ ಕೊರತೆಯಾಗಿದೆ. ಒಟ್ಟು 3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬಿತ್ತನೆ ಗುರಿಯ ಪೈಕಿ ಇದುವರೆಗೆ ಶೇ.64ರಷ್ಟು ಬಿತ್ತನೆ ಆಗಿದೆ. ಶೇ.20ರಷ್ಟು ಭತ್ತ ಬಿತ್ತನೆ, ಶೇ.10ರಷ್ಟು ಮೆಕ್ಕೆಜೋಳ ಮತ್ತು ಶೇ.6ರಷ್ಟು ಇನ್ನೀತರ ಬೆಳೆಗಳ ಬಿತ್ತನೆಯಾಗಬೇಕಿದೆ. ಜಿಲ್ಲೆಯಲ್ಲಿ ಇಲ್ಲಿವರೆಗೆ 9,707 .61 ಬಿತ್ತನೆ ಬೀಜ ದಾಸ್ತಾನು ಸ್ವೀಕೃತಿ ಪೈಕಿ 7,449.89 ಕ್ವಿಂಟಲ್ ಬೀಜ ಮಾರಾಟವಾಗಿದೆ. 2257.72 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಇದ್ದು ಬಿತ್ತನೆ ಬೀಜಕ್ಕೆ ಕೊರತೆಯಿಲ್ಲ. ಏಪ್ರೀಲ್ ನಿಂದ
ಸೆಪ್ಟೆಂಬರ್ ವರೆಗೆ ಕೊಪ್ಪಳ ಜಿಲ್ಲೆಗೆ ಯೂರಿಯಾ, ಡಿಎಪಿ, ಎಂಓಪಿ, ಎನ್ ಕೆ ಪಿಎಸ್, ಎಸ್ ಎಸ್ ಪಿ ಸೇರಿ ಒಟ್ಟು 92,666 ಮೆ.ಟನ್ ರಸಗೊಬ್ಬರ ಹಂಚಿಕೆಯಾಗಿದೆ. ಈ ಪೈಕಿ ಜುಲೈ 25ರವರೆಗೆ 70.917 ಮೆ ಟನ್ ದಾಸ್ತಾನು ಇದೆ. ಸೆಪ್ಟೆಂಬರವರೆಗೆ ರಸಗೊಬ್ಬರಕ್ಕೆ ಯಾವುದೇ ರೀತಿಯ ಕೊರತೆಯಾಗುವುದಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ವಿವಿಧ ತಾಲೂಕುಗಳ ತಹಸೀಲ್ದಾರರು, ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಅಧಿಕಾರಿಗಳು ಸೇರಿದಂತೆ ಇನ್ನೀತರ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.