
ಕೊಪ್ಪಳ :ಡಿಸೆಂಬರ್ 23 (ಕರ್ನಾಟಕ ವಾರ್ತೆ): ತಾಲ್ಲೂಕಿನ ಇರಕಲ್ಲಗಡಾ ಪದವಿ ಪೂರ್ವ ಕಾಲೇಜಿನಲ್ಲಿ “ರಕ್ತ ಹೀನತೆ ಮುಕ್ತ ಸಮಾಜ” ಎಂಬ ವಿನೂತನ ಜಾಗೃತಿ ಕಾರ್ಯಕ್ರಮ ಡಿಸೆಂಬರ್ 22 ರಂದು ಜರುಗಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಪ್ರಾ.ಆ.ಕೇಂದ್ರ ಹಾಗೂ ಸರ್ಕಾರಿ ಪ.ಪೂ.ಕಾ ಇರಕಲ್ಲಗಡಾ ಇವರ ಸಂಯುಕ್ತಾಶ್ರಯದಲ್ಲಿ ಕಾಲೇಜಿನಲ್ಲಿ ಬುಧವಾರದಂದು “ರಕ್ತ ಹೀನತೆ ಮುಕ್ತ ಸಮಾಜ” ಎಂಬ ವಿನೂತನ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಅವರು ಮಾತನಾಡಿ, ಗರ್ಭಿಣಿಯರು, ಹಾಲುಣಿಸುವ ತಾಯೆಂದಿರು 05 ವರ್ಷದೊಳಗಿನ ಮಕ್ಕಳಲ್ಲಿ ಹಾಗೂ 10 ರಿಂದ 19 ವರ್ಷದೊಳಗಿನ ಹದಿ-ಹರೆಯದವರಲ್ಲಿ ರಕ್ತ ಹೀನತೆ ಹೆಚ್ಚಾಗಿ ಕಂಡುಬರುತ್ತದೆ. ಅದನ್ನು ತಡೆಗಟ್ಟಲು ಎಲ್ಲಾ ಆರೋಗ್ಯ ಸಂಸ್ಥೆಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಹಾಗೂ ನಗರ ಪ್ರದೇಶಗಳ ಕೊಳಚೆ ಪ್ರದೇಶಗಳಲ್ಲಿ ರಕ್ತ ಹೀನತೆ ತಡೆಗಟ್ಟಲು ಅರಿವು ಮೂಡಿಸಲಾಗುತ್ತದೆ. ರಕ್ತ ಹೀನತೆ ಉಂಟಾಗಲು ಮುಖ್ಯ ಕಾರಣ, ಸರಿಯಾಗಿ ಪೌಷ್ಠಿಕ ಆಹಾರ ಸೇವನೆ ಮಾಡದಿರುವುದು ಹಾಗೂ ವಯಕ್ತಿಕ ಸ್ವಚ್ಛತೆ ಪಾಲಿಸದೇ ಹೋದರೆ ರಕ್ತ ಹೀನತೆ ಉಂಟಾಗುತ್ತದೆ ಎಂದರು.
ಹದಿ-ಹರೆಯದವರು ಈ ದೇಶದ ಸಂಪತ್ತು ಆಗಿದ್ದು, ಇವರ ಆರೋಗ್ಯ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ವಯಸ್ಸಿನಲ್ಲಿ ಅವರ ದೈಹಿಕ, ಮಾನಸಿಕ ಬೆಳವಣಿಗೆಗೆ ಪೌಷ್ಠಿಕ ಆಹಾರ ಅತ್ಯವಶ್ಯಕವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಪೌಷ್ಠಿಕ ಆಹಾರ ಸೇವಿಸಿ ರಕ್ತ ಹೀನತೆ ದೂರವಿಡಿ” ರಕ್ತ ಹೀನತೆಯಿಂದ ಆಯಾಸ, ಸುಸ್ತು, ಹೊಟ್ಟೆನೋವು ನಾಲಿಗೆ ಬಿಳಿಚಿಕೊಳ್ಳುವುದು ಇಂತಹ ಲಕ್ಷಣ ಕಂಡು ಬಂದ ತಕ್ಷಣ ರಕ್ತದ ಪರೀಕ್ಷೆ ಮಾಡಿಸಬೇಕು.

ರಕ್ತ ಹೀನತೆ ಉಂಟಾದರೆ ಚಿಕಿತ್ಸೆ ಪಡೆದುಕೊಳ್ಳಬೇಕು. ಈ ರಕ್ತ ಹೀನತೆ ತಡೆಗಟ್ಟಲು ದಿನ ನಿತ್ಯದ ಆಹಾರದಲ್ಲಿ ಸಾಧ್ಯವಾದಷ್ಟು ಹಸಿರು ತರಕಾರಿ, ಮೊಳಕೆ ಬರಿಸಿದ ಕಾಳು, ಹಾಲು, ಶೆಂಗಾಚೆಕ್ಕಿ, ಏಕದಳ ದಾನ್ಯಗಳಿಂದ ತಯಾರಿಸಿದ ಆಹಾರವನ್ನು ಹೆಚ್ಚಾಗಿ ಸೇವೆಸಬೇಕು. ಇಲಾಖೆಯಲ್ಲಿ ಪ್ರತಿವಾರ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರದಡಿಯಲ್ಲಿ ನೀಡುವ ಕಬ್ಬಿಣಾಂಶ ಮಾತ್ರೆ ಹಾಗೂ ಪ್ರತಿ 06 ತಿಂಗಳಿಗೊಮ್ಮೆ ನೀಡುವ ಜಂತು ನಿವಾರಕ ಮಾತ್ರೆ ಸೇವಿಸಿ ರಕ್ತ ಹೀನತೆ ತಡೆಗಟ್ಟಬೇಕು. ನಂತರ ಕಡ್ಡಾಯವಾಗಿ ಎಲ್ಲರೂ ಶೌಚಾಲಯ ಬಳಸಬೇಕು, ಕೈ ತೊಳೆಯುವ ವಿಧಾನಗಳ ಬಗ್ಗೆ ತಿಳಿದುಕೊಂಡು ಪ್ರತಿಯೊಬ್ಬರು, ಇನ್ನೊಬ್ಬರಿಗೆ ಅರಿವು ಮೂಡಿಸಿ ರಕ್ತ ಹೀನತೆ ಮುಕ್ತ ಸಮಾಜ ನಿರ್ಮಾಣ ಮಾಡಲು ಸಹಕರಿಸಬೇಕೆಂದು ತಿಳಿಸಿದರು.
ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಅವರು ಮಾತನಾಡಿ, ಹದಿ-ಹರೆಯದ ಹೆಣ್ಣುಮಕ್ಕಳ ವಯಕ್ತಿಕ ಸ್ವಚ್ಛತೆ ಕಡೆಗೆ ಹೆಚ್ಚು ಗಮನ ಅರಿಸಬೇಕು. ಪ್ರತಿ ತಿಂಗಳು ಮುಟ್ಟಾದಾಗ ಹೆಚ್ಚು ಹೆಚ್ಚು ಪೌಷ್ಠಿಕ ಆಹಾರ ಸೇವನೆ ಮಾಡುವುದು.
ಒಂದು ವೇಳೆ ಸಮಸ್ಯ ಕಂಡುಬಂದರೆ ತಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿರುವ ಸ್ನೇಹ ಕ್ಲಿನೀಕ್‌ಗೆ ಭೇಟಿ ನೀಡಿ, ಪರಿಹಾರ ಕಂಡುಕೊಳ್ಳಬೇಕು. 2025ರ ವೇಳೆಗೆ “ಕ್ಷಯ ಮುಕ್ತ ಕೊಪ್ಪಳ ಜಿಲ್ಲೆಯನ್ನಾಗಿ ಮಾಡಲು” ಪ್ರತಿಯೊಬ್ಬ ವಿದ್ಯಾರ್ಥಿಗಳು ಕ್ಷಯರೋಗದ ಲಕ್ಷಣಗಳನ್ನು ತಿಳಿದುಕೊಂಡು ತಮ್ಮ ಗ್ರಾಮದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಕ್ಷರೋಗವನ್ನು ದೂರವಿಡಬೇಕು ಹೊರತು ಕ್ಷಯರೋಗಿಯನ್ನಲ್ಲ ಎಂಬುದನ್ನು ಪ್ರತಿಯೊಬ್ಬರು ತಿಳಿಯಬೇಕು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರಾಜಬೇಗಂ, ಸಹ ಉಪನ್ಯಾಸಕರಾದ ಆಶಾ, ಸುಗಮಕಾರರಾದ ಕಲಾವತಿ ಸೇರಿದಂತೆ ಮತ್ತಿತರರಿದ್ದರು. ವಿದ್ಯಾರ್ಥಿಗಳು ಸಹ ಭಾಗವಹಿಸಿದ್ದರು.