ಧಾರವಾಡ: ‘ಪ್ರತಿಯೊಬ್ಬ ನಾಗರಿಕರು ಕಾನೂನಿನ ಮಹತ್ವ ತಿಳಿದಾಗ ಮಾತ್ರ ನೆಮ್ಮದಿಯಿಂದ ಬದುಕಲು ಸಾಧ್ಯ. ಮನೆಯಲ್ಲಿ ಬಗೆಹರಿಸಬಲ್ಲ ಸಮಸ್ಯೆಗಳನ್ನು ಕೋರ್ಟ್‌ಗೆ ತರಬೇಡಿ’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ.ಶಾಂತಿ ಹೇಳಿದರು.
ಶಾಂತಿ ಹೇಳಿದರು.
2023ರ ಜನವರಿ 1ರಿಂದ ಮೇ ವರೆಗೆ ಕಾನೂನು ಪ್ರಾಧಿಕಾರದಿಂದ ಜಿಲ್ಲೆಯಾದ್ಯಂತ ಒಟ್ಟು 146 ಕಾನೂನು ಅರಿವು-ನೆರವು ಕಾರ್ಯಕ್ರಮಗಳನ್ನು ನೆರವೇರಿಸಲಾಗಿದೆ. ಆ ಮೂಲಕ 126 ಕ್ರಿಮಿನಲ್ ಪ್ರಕರಣಗಳಲ್ಲಿ ಅರ್ಹ ವ್ಯಕ್ತಿಗಳಿಗೆ ಉಚಿತ ಕಾನೂನು ನೆರವು ನೀಡಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಸಾಲಿನಲ್ಲಿ ಪ್ರಾಧಿಕಾರದಿಂದ ಜಿಲ್ಲಾ ಸಿವಿಲ್ ನ್ಯಾಯಾಲಯದ ಮಕ್ಕಳ ಸ್ನೇಹಿ ಪೋಲಿಸ್ ಘಟಕದ ಮಧ್ಯಸ್ಥಿಕೆದಾರರಿಗೆ, ಪ್ರಾಧಿಕಾರದ ಪ್ಯಾನಲ್ ವಕೀಲರಿಗೆ, ಅರೆ ಕಾನೂನು ಸ್ವಯಂ ಸೇವಕರಿಗೆ ಹಾಗೂ ಜಿಲ್ಲೆಯ ಎಲ್ಲ ನ್ಯಾಯಾಧೀಶರಿಗೆ ತರಬೇತಿ ನೀಡಲಾಗಿದೆ ಎಂದರು.
ಕಳೆದ ಫೆಬ್ರುವರಿಯಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 1,27,991 ಪೂರ್ವ ರಾಜ್ಯ ಪ್ರಕರಣ ಮತ್ತು ನ್ಯಾಯಾಲಯದಲ್ಲಿ ಬಾಕಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಅವುಗಳಲ್ಲಿ 75 ಕ್ರಿಮಿನಲ್, 577 ಚೆಕ್ ಬೌನ್ಸ್, 128 ಹಣ ವಸೂಲಾತಿ, 104 ಅಪಘಾತ ಪರಿಹಾರ, 208 ವಿಭಾಗ ದಾವೆಗಳು, 8 ಕೌಟುಂಬಿಕ, 61 ಜೀವನಾಂಶ ಮತ್ತು ಡಿವಿ ಕಾಯ್ದೆಯ ಪ್ರಕರಣಗಳನ್ನು ವಕೀಲರು, ಕಕ್ಷಿದಾರರ, ಸಂಬಂಧಪಟ್ಟ ಅಧಿಕಾರಿಗಳ ಸಹಯೋಗದೊಂದಿಗೆ ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದರು.
ಜು 8ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 2,830 ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ರಾಜೀ ಪ್ರಕರಣಗಳನ್ನು ಗುರುತಿಸಲಾಗಿದೆ. ಅವುಗಳನ್ನು ವಕೀಲರು, ಕಕ್ಷಿದಾರರ, ಸಂಬಂಧಪಟ್ಟ ಅಧಿಕಾರಿಗಳ ಸಹಯೋಗದೊಂದಿಗೆ ರಾಜಿ ಸಂಧಾನಕ್ಕೆ ಒಪ್ಪಿಸಲಾಗಿದೆ. ಆರು ತಿಂಗಳಲ್ಲಿ 6,818ಕ್ಕೂ ಹೆಚ್ಚಿನ ಜನರಿಗೆ ಕಾನೂನು ಅರಿವು ಮೂಡಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 2023ರ ಜನವರಿಯಿಂದ ಮೇ ವರೆಗೆ ಒಟ್ಟು 1,06,766 ಟ್ರಾಫಿಕ್ ಚಲನ್‌ಗಳು ಬಾಕಿ ಇದ್ದು, ಅವುಗಳಿಂದ ಒಟ್ಟು ₹5,34,03,000 ದಂಡ ಮೊತ್ತ ವಸೂಲಿ ಮಾಡುವ ಕೆಲಸ ಬಾಕಿ ಇದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ಎಫ್. ದೊಡ್ಡಮನಿ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎನ್.ಆರ್. ಮಟ್ಟಿ, ಡಿಸಿಪಿ ಡಾ. ಗೋಪಾಲ್ ಬ್ಯಾಕೋಡ ಇದ್ದರು.