ಕೊಪ್ಪಳ ಜೂನ್ 17 : ಯಲಬುರ್ಗಾ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಬೇವೂರು ಗ್ರಾಮಕ್ಕೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ ಮತ್ತು ತಂಡದವರು ಜೂನ್ 17ರಂದು ಭೇಟಿ ನೀಡಿ ಸಂಶಯಾಸ್ಪದ ವಾಂತಿ-ಭೇದಿ ಪ್ರಕರಣಗಳ ಬಗ್ಗೆ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದರು.
ಬೇವೂರು ಗ್ರಾಮದಲ್ಲಿ ಕುಡಿಯುವ ನೀರಿನ ಮೂಲಗಳು, ನೀರು ಪರೀಕ್ಷೆ ಪೈಪ್‌ಲೈನ್ ಸೋರಿಕೆ ಬಗ್ಗೆ ಹಾಗೂ ಗ್ರಾಮಗಳ ನೈರ್ಮಲ್ಯತೆ ಕುರಿತು ವೈದ್ಯರ ಜೊತೆ ಚರ್ಚಿಸಿದರು. ಕ್ಷೇತ್ರ ಸಿಬ್ಬಂದಿಗೆ ದೈನಂದಿನ ಕೆಲಸದಲ್ಲಿ ಎಲ್ಲಾ ಗ್ರಾಮದಲ್ಲಿರುವ ಕುಡಿಯುವ ನೀರನ ಮೂಲಗಳನ್ನು ಪ್ರತಿ 15 ದಿನಕೊಮ್ಮೆ ಪರೀಕ್ಷಿಸುವಂತೆ ತಿಳಿಸಿದರು.
ಗ್ರಾಮದಲ್ಲಿ ವಾಂತಿ-ಭೇದಿ ಉಂಟಾಗದಂತೆ ಆರೋಗ್ಯ ಸಿಬ್ಬಂದಿಯು ಮನೆಮನೆಗೆ ಭೇಟಿ ನೀಡಿ ಶುದ್ಧ ಕುಡಿವ ನೀರು, ಶೌಚಾಲಯ ಬಳಸುವ ಬಗ್ಗೆ ಹಾಗೂ ಸೋಪು ಬಳಸಿ ಕೈತೊಳೆಯುವ ವಿಧಾನಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಸೂಚಿಸಿದರು. ಮತ್ತು ವಾರದಲ್ಲಿ ಎರಡು ದಿನ ಕ್ಷೇತ್ರ ಸಿಬ್ಬಂದಿಯು ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಭೇಟಿ ನೀಡಿ ಕ್ಲೋರಿನೇಶನ್ ಹಾಗೂ ನೈರ್ಮಲ್ಯತೆ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಮಾರ್ಗಸೂಚಿ ನೀಡಲು ತಿಳಿಸಿದರು.
ಬೇವೂರು ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರಿನ ಕ್ಲೋರಿನೇಶನ್ ಮಾಡಿಸಿ, ವಾಂತಿ-ಭೇದಿ ಹರಡದಂತೆ ಮುಂಜಾಗೃತೆ ಕ್ರಮಕೈಗೊಳ್ಳಲು ಸಂಬಂಧಪಟ್ಟ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ನಂತರ ವಣಗೇರಿ ಮತ್ತು ಮುರಡಿ ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಸ್ಥಳ ಪರಿಶೀಲಿಸಿ ಸ್ವಚ್ಛತೆ ಕಾಪಾಡಲು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ.ನೇತ್ರಾವತಿಗಳು, ಎಲ್.ವಿ ಸಜ್ಜನ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
