ದಾವಣಗೆರೆ: ಕಾಮಗಾರಿಯೊಂದಕ್ಕೆ ಅನುಮತಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟು, ಮನೆಯಲ್ಲಿ ಪಡೆಯುತ್ತಿದ್ದಾಗ ಹರಿಹರ ನಗರಸಭೆಯ ಎಇ ಲೋಕಾಯುಕ್ತ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಎಇ ಅಬ್ದುಲ್ ಹಮೀದ್ ಎಂಬುವರು, ಗುತ್ತಿಗೆದಾರರೊಬ್ಬರಿಗೆ ಕಾಮಗಾರಿಗೆ ಅನುಮತಿ ನೀಡುವ ಸಂಬಂಧ 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ಗುತ್ತಿಗೆದಾರರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇಂದು ಹರಿಹರದ ಎಇ ಅಬ್ದುಲ್ ಹಮೀದ್ ಅವರು ಗುತ್ತಿಗೆದಾರನಿಂದ 20 ಸಾವಿರ ಲಂಚ ಪಡೆಯುತ್ತಿದ್ದಾಗ ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್ ಕೌಲಾಪುರೆ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಮೂಲಕ ಅವರನ್ನು ವಶಕ್ಕೆ ಪಡೆದಿದ್ದಾರೆ.
ಅಂದಹಾಗೇ ನಿನ್ನೆಯಷ್ಟೇ ಹರಿಹರ ನಗರಸಭೆಯ ಸದಸ್ಯೆ ನಾಗರತ್ನ ಎಂಬುವರು ಲಂಚಕ್ಕೆ ಬೇಡಿಕೆ ಇಟ್ಟು, ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ಈ ಬೆನ್ನಲ್ಲೇ ಇಂದು ನಗರಸಭೆಯ ಇಂಜಿನಿಯರ್ ಅಬ್ದುಲ್ ಹಮೀದ್ ಬಿದ್ದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.