ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಹಲವಾರು ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಅಲಕನಂದಾ ಕೆ. ಮಳಗಿ ಅವರು ತಿಳಿಸಿದ್ದಾರೆ.
ಕುಡಿಯುವ ನೀರಿನ ಪರೀಕ್ಷೆಗಾಗಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಾಲೆಯಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು ಸಾಕಷ್ಟು ಪ್ರಮಾಣದಲ್ಲಿ ಔಷಧಿಗಳು ಲಭ್ಯವಿರುವಂತೆ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಗ್ರಾಮದಲ್ಲಿ ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಗ್ರಾಮದಲ್ಲಿ ಗ್ರಾಮ ಪಂಚಾಯತ್ವತಿಯಿಂದ ಡಂಗೂರ ಹಾಕಿಸಿ ಕಾಯಿಸಿ ಆರಿಸಿದ ನೀರನ್ನು ಕುಡಿಯಲು ತಿಳಿಸುವಂತೆ ಕ್ರಮ ವಹಿಸಲಾಗಿದೆ. ಗ್ರಾಮದಲ್ಲಿ ಹೋಟೆಲ್ಗಳಿಗೆ ಭೇಟಿ ನೀಡಿ ಸ್ವಚ್ಚತೆ ಕಾಪಾಡುವಂತೆ ಹೋಟೆಲ್ ಮಾಲೀಕರಿಗೆ ತಿಳಿಸಲಾಗಿದೆ. ಮನೆಯಲ್ಲಿ ಎಲ್ಲರೂ ಬಿಸಿಬಿಸಿ ಆಹಾರ ಸೇವಿಸುವಂತೆ ಆರೋಗ್ಯ ಶಿಕ್ಷಣ ನೀಡಲಾಗಿದೆ. ಪ್ರತಿಯೊಬ್ಬರು ಕಡ್ಡಾಯವಾಗಿ ಶೌಚಾಲಯ ಬಳಸುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ. ತೆರೆದಿಟ್ಟ ತಿಂಡಿ ತಿನಿಸುಗಳನ್ನು ತಿನ್ನದಂತೆ ಜಾಗೃತಿ ಮೂಡಿಸಲಾಗಿದೆ. ಊಟಕ್ಕೂ ಮೊದಲು ಹಾಗೂ ಶೌಚಾಯಲ ಬಳಸಿದ ನಂತರ ಕೈಗಳಿಗೆ ಸೋಪು ಬಳಸಿ ಕೈ ತೊಳೆದುಕೊಳ್ಳುವಂತೆ ಅರಿವು ಮೂಡಿಸಲಾಗಿದೆ ಎಂದು ಡಿಎಚ್‌ಓ ಅವರು ತಿಳಿಸಿದ್ದಾರೆ.
ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿಯು ಮನೆಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡಿ ಸ್ವಚ್ಚತೆ, ಆರೋಗ್ಯ ಶಿಕ್ಷಣ ನೀಡಲು ಮತ್ತು ಪ್ರಕರಣ ಕಂಡುಬಂದಲ್ಲಿ ತಕ್ಷಣವೇ ವೈದ್ಯಾಧಿಕಾರಿಗಳ ಗಮನಕ್ಕೆ ತರಲು ತಿಳಿಸಲಾಗಿದೆ. ಆದ್ದರಿಂದ ಗ್ರಾಮಸ್ಥರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ಡಿಎಚ್‌ಓ ಡಾ.ಅಲಕನಂದಾ ಕೆ. ಮಳಗಿ ಅವರು ತಿಳಿಸಿದ್ದಾರೆ.