ಬೆಂಗಳೂರು, ಜೂನ್ 04; ಕರ್ನಾಟಕ ಕಾಂಗ್ರೆಸ್ ಘೋಷಣೆ ಮಾಡಿದ 5 ಗ್ಯಾರಂಟಿಗಳಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಸಹ ಒಂದು. ‘ಶಕ್ತಿ’ ಹೆಸರಿನ ಈ ಯೋಜನೆಗೆ ಜೂನ್ 11ರಂದು ಚಾಲನೆ ಸಿಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಸಚಿವ ಸಂಪುಟ ಸಭೆಯ ಬಳಿಕ ಘೋಷಣೆ ಮಾಡಿದ್ದಾರೆ.

ಸರ್ಕಾರಿ ಬಸ್‌ನಲ್ಲಿ ಮಹಿಳೆಯರು ಉಚಿತವಾಗಿ ಸಂಚಾರ ನಡೆಸಬೇಕಾದರೂ ಸಹ ಟಿಕೆಟ್ ಪಡೆಯಬೇಕಿದೆ. ಇದಕ್ಕಾಗಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಹೊಸ ಮಾದರಿ ಟಿಕೆಟ್ ಬಿಡುಗಡೆ ಮಾಡಲಿವೆ. ಆದರೆ ಈ ಟಿಕೆಟ್ ಪಡೆಯಲು ಮಹಿಳೆಯರು ಹಣ ಕೊಡಬೇಕಿಲ್ಲ.

ವಿದ್ಯಾರ್ಥಿನಿಯರು ಸೇರಿ ಎಲ್ಲಾ ವರ್ಗದ ಮಹಿಳೆಯರು ‘ಶಕ್ತಿ’ ಯೋಜನೆಯಡಿ ಎಸಿ ಹಾಗೂ ಲಕ್ಷುರಿ ಬಸ್‌ಗಳನ್ನು ಹೊರತುಪಡಿಸಿ ಇತರ ಎಲ್ಲಾ ಬಸ್‌ಗಳಲ್ಲಿ ಕರ್ನಾಟಕ ರಾಜ್ಯದೊಳಗೆ ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಜೂನ್ 11ರಂದು ಚಾಲನೆ; ಸರ್ಕಾರಿ ಬಸ್‌ನಲ್ಲಿ ಮಹಿಳೆಯರು ಉಚಿತವಾಗಿ ಸಂಚಾರ ನಡೆಸುವ ‘ಶಕ್ತಿ’ ಯೋಜನೆಗೆ ಜೂನ್ 11ರಂದು ಚಾಲನೆ ಸಿಗಲಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ‘ಶಕ್ತಿ’ ಯೋಜನೆ ಜಾರಿಗೊಳಿಸಲು ವಿಶೇಷ ಟಿಕೆಟ್ ರೂಪಿಸಿದೆ. ಮಹಿಳೆಯರು ಬಸ್‌ನಲ್ಲಿ ಟಿಕೆಟ್ ಪಡೆಯಬೇಕು. ಆದರೆ ಅದಕ್ಕೆ ಯಾವುದೇ ಹಣವನ್ನು ಪಾವತಿ ಮಾಡಬೇಕಿಲ್ಲ.

ಈ ಟಿಕೆಟ್ ‘ಮಹಿಳಾ ಪ್ರಯಾಣಿಕರ ಉಚಿತ ಚೀಟಿ ಶಕ್ತಿ ಯೋಜನೆ’ ಎಂಬ ಬರಹ ಒಳಗೊಂಡಿದೆ. ಎಲ್ಲಿಂದ, ಎಲ್ಲಿಗೆ ಪ್ರಯಾಣ ಮಾಡುತ್ತಾರೆ ಎಂಬ ಮಾಹಿತಿ ಹೊಂದಿರುತ್ತದೆ. ಆದರೆ ದರಗಳು ನಮೂದು ಆಗಿರುವ ಜಾಗದಲ್ಲಿ ನಿಲ್ Nill ಎಂದು ಬರೆದಿರುತ್ತದೆ. ಈ ಚೀಟಿಯನ್ನು ಯಾವುದೇ ಹಣ ಪಾವತಿ ಮಾಡದೇ ಮಹಿಳೆಯರು ಪಡೆಯಬೇಕು.

ಶಕ್ತಿ’ ಯೋಜನೆ ಜಾರಿಗೊಳಿಸುತ್ತಿರುವ ಕರ್ನಾಟಕ ಸರ್ಕಾರ ಬಸ್‌ನಲ್ಲಿ ಒಂದು ಟ್ರಿಪ್‌ನಲ್ಲಿ ಸಂಚಾರ ನಡೆಸಿದ ಮಹಿಳೆಯರು ಎಷ್ಟು?. ಒಂದು ದಿನ ಬೆಂಗಳೂರು ನಗರದಲ್ಲಿ ಎಷ್ಟು ಮಹಿಳೆಯರು ಸಂಚಾರ ನಡೆಸಿದರು? ಹೀಗೆ ಯೋಜನೆ ಫಲಾನುಭವಿಗಳ ಕುರಿತು ಮಾಹಿತಿ ಸಂಗ್ರಹ ಮಾಡಲು ಈ ಮಾದರಿ ಟಿಕೆಟ್ ರೂಪಿಸಿದೆ.

ನಿರ್ವಾಹಕರ ಕೈಯಲ್ಲಿ ಇರುವ ಟಿಕೆಟ್ ನೀಡುವ ಯಂತ್ರದಲ್ಲಿ ಈ ಮಾದರಿ ಟಿಕೆಟ್ ನೀಡಲು ತಂತ್ರಾಂಶ ಅಭಿವೃದ್ಧಿಗೊಳಿಸಲಾಗುತ್ತಿದೆ. ಕಂಟಕ್ಟರ್‌ಗಳಿಗೆ ಈ ಟಿಕೆಟ್ ನೀಡುವ ಕುರಿತು ತರಬೇತಿಯನ್ನು ಸಹ ನೀಡಲಾಗುತ್ತದೆ. ಅಂತಿಮವಾಗಿ ಸರ್ಕಾರಕ್ಕೆ ಫಲಾನುಭವಿಗಳ ಲೆಕ್ಕಬೇಕು, ಯೋಜನೆ ದುರುಪಯೋಗವಾಗದಂತೆ ಎಚ್ಚರ ವಹಿಸಬೇಕಿದೆ.

ಈ ಹಿಂದೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ‘ಶಕ್ತಿ’ ಯೋಜನೆ ಜಾರಿಗೆ ಪಾಸುಗಳನ್ನು ಪರಿಚಯಿಸುವ ಉದ್ದೇಶವಿದೆ ಎಂದು ಹೇಳಿದ್ದರು. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆ ಘೋಷಣೆ ಮಾಡುವಾಗಲೂ ಟಿಕೆಟ್ ಬಗ್ಗೆ ಹೇಳಿರಲಿಲ್ಲ. ಆದರೆ ಈಗ ಮಾದರಿ ಟಿಕೆಟ್‌ಗಳನ್ನು ರೂಪಿಸಿ ಬಿಎಂಟಿಸಿ ಬಿಡುಗಡೆ ಮಾಡಿದೆ. ಕೆಎಸ್‌ಆರ್‌ಟಿಸಿಯಲ್ಲೂ ಸಹ ಇದೇ ಮಾದರಿ ಟಿಕೆಟ್ ಬರುವ ಸಾಧ್ಯತೆ ಇದೆ.

‘ಶಕ್ತಿ’ ಯೋಜನೆಯಡಿ ಕರ್ನಾಟಕದ ರಾಜ್ಯದೊಳಗೆ ಮಾತ್ರ ಪ್ರಯಾಣ ಮಾಡಬಹುದು. ಸರ್ಕಾರ ಈ ಯೋಜನೆಯ ಷರತ್ತುಗಳು, ಮಾನದಂಡಗಳ ಬಗ್ಗೆ ಅಧಿಕೃತವಾದ ಆದೇಶವನ್ನು ಇನ್ನೂ ಹೊರ ಹೊರಡಿಸಿಲ್ಲ. ಜೂನ್ 11ರಂದು ಯೋಜನೆಗೆ ಚಾಲನೆ ನೀಡಲಾಗುತ್ತದೆ ಎಂದು ಮಾತ್ರ ಹೇಳಿದೆ.

ಕರಾವಳಿ, ಮಲೆನಾಡು ಭಾಗದಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ಕಡಿಮೆ. ಆದ್ದರಿಂದ ಖಾಸಗಿ ಬಸ್‌ಗಳಲ್ಲಿಯೂ ಉಚಿತ ಪ್ರಯಾಣ ಘೋಷಣೆ ಮಾಡಬೇಕು ಎಂಬ ಆಗ್ರಹ ಇದೆ. ಆದರೆ ಖಾಸಗಿ ಬಸ್ ಮಾಲೀಕರು ಇದಕ್ಕೆ ಒಪ್ಪಿಗೆ ನೀಡಿಲ್ಲ. ಸರ್ಕಾರ ಸಹ ಈ ಕುರಿತು ಯಾವುದೇ ತೀರ್ಮಾನವನ್ನು ಇನ್ನೂ ಕೈಗೊಂಡಿಲ್ಲ.

error: Content is protected !!