ಬೆಂಗಳೂರು, ಜೂನ್ 04: ಪತಿಯಿಂದ ವಿವಾಹ ವಿಚ್ಛೇದನ ನೋಟಿಸ್‌ ಬಂದ ನಂತರ ಪತ್ನಿ, ಪತಿ ಹಾಗೂ ಅವರ ಸಂಬಂಧಿಗಳ ವಿರುದ್ಧ ದೂರು ನೀಡಿದರೆ ಅದನ್ನು ಮಾನ್ಯ ಮಾಡಲಾಗುದು ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.

ಅಲ್ಲದೇ, ಇಂತಹ ವೇಳೆ ಪತಿ ವಿರುದ್ಧ ಪತ್ನಿ ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಿಸಿದರೆ ಆ ದೂರು ತನ್ನ ಮಹತ್ವವನ್ನು ಕಳೆದುಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟು, ಪತಿ ವಿರುದ್ಧ ಪತ್ನಿ ನೀಡಿದ್ದ ದೂರನ್ನು ಕೋರ್ಟ್ ರದ್ದು ಮಾಡಿದೆ.

ನಾಗೇಶ್‌ ಗುಂಡ್ಯಾಲ್‌ ಅವರ ಪತ್ನಿ ವಿಜಯ, ಪುತ್ರಿ ಅಂಜನಾ ಮತ್ತು ಆಕೆಯ ಪತಿ ಅನಿಲ್‌ ಸೇರಿದಂತೆ ಮಹಾರಾಷ್ಟ್ರದ ಸೊಲ್ಲಾಪುರದ ಜನರು ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಚ್‌. ರಾಚಯ್ಯ ಅವರಿದ್ದ ಏಕಸದಸ್ಯ ಪೀಠ ಕಲಬರುಗಿಯಲ್ಲಿ ಇತ್ತೀಚೆಗೆ ಈ ಆದೇಶ ನೀಡಿದೆ. ವಾದ-ಪ್ರತಿವಾದ ಆಲಿಸಿದ ನಂತರ ಪತಿಯ ಸಂಬಂಧಿಗಳ ವಿರುದ್ಧ ಹೂಡಿದ್ದ ಕ್ರಿಮಿನಲ್‌ ದೂರಿನ ಎಫ್‌ಐಆರ್‌ ಅನ್ನು ರದ್ದುಗೊಳಿಸಿದೆ.

ಏನಿದು ಪ್ರಕರಣ?: ರಾಯಚೂರಿನ ದೇವದುರ್ಗದ ಸುಮಾ ಮತ್ತು ಖಾಸಗಿ ಕಂಪನಿಯ ನೌಕರ ಗೋಪಾಲ್‌ ಗುಂಡ್ಯಾಲ್‌ ನಡುವೆ 2013ರ ಮೇ ತಿಂಗಳಲ್ಲಿ ವಿವಾಹ ನಡೆದಿತ್ತು. ಆನಂತರ, ತನಗೆ ಹಿಂದಿ ಅಥವಾ ಮರಾಠಿ ಬಾರದ ಹಿನ್ನೆಲೆಯಲ್ಲಿ ಪತಿ ತನ್ನನ್ನು ಪುಣೆಗೆ ಕರೆದುಕೊಂಡು ಹೋಗದೆ ತನ್ನ ಸಂಬಂಧಿಗಳ ಮನೆಯಲ್ಲೇ ಬಿಟ್ಟು ಹೋಗಿದ್ದರು ಎಂದು ಸುಮಾ ಆರೋಪಿಸಿದ್ದಾರೆ. ಅಲ್ಲದೇ, ಪತಿಯ ಸಂಬಂಧಿಗಳು ಪುಣೆಯಲ್ಲಿರುವ ಪತಿಯ ಮನೆಗೆ ಹೋಗು ಎಂದು ಬಲವಂತಪಡಿಸುತ್ತಿದ್ದರು, ನಿರಂತರವಾಗಿ ಕಿರುಕುಳ ನೀಡುತ್ತಿದ್ದರೆಂದು ಹೇಳಿದ್ದಾರೆ.

ಹೀಗೆ ಪತಿ ಪತ್ನಿ ನಡುವೆ ಮನಸ್ತಾಪ ಹೆಚ್ಚಾಯಿತು. ಪತಿ 2018ರ ಡಿಸೆಂಬರ್ 17ರಂದು ವಿವಾಹ ವಿಚ್ಛೇದನಕ್ಕೆ ಸೊಲ್ಲಾಪುರದ ಕೌಟುಂಬಿಕ ನ್ಯಾಯಾಲಯದಲ್ಲಿಅರ್ಜಿ ಹಾಕಿ ಪತ್ನಿಗೆ ನೋಟಿಸ್‌ ಕಳುಹಿಸಿದ್ದರು. ಆನಂತರ ಪತ್ನಿ, ಪತಿ ವಿರುದ್ಧ ಸೇಡು ತೀರಿಸಿಕೊಳ್ಳಲು ಪತಿ ಹಾಗೂ ಅವರ ಸಂಬಂಧಿಗಳೆಲ್ಲರ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ದೌರ್ಜನ್ಯದ ದೂರು ನೀಡಿದ್ದರು. ಅದನ್ನು ಆಧರಿಸಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.

ಕೋರ್ಟ್ ಏನು ಹೇಳಿದೆ? ಪತಿ ಹಾಗೂ ಆತನ ಸಂಬಂಧಿಗಳ ವಿರುದ್ಧ ಸಾಮಾನ್ಯ ಆರೋಪಗಳನ್ನು ಎಸಗಿದ್ದಾರೆಂದು ದೂರು ನೀಡಿದ್ದಾರೆ. ಆದರೆ ವೈಯಕ್ತಿಕವಾಗಿ ಪ್ರತಿಯೊಬ್ಬರು ಇಂತಹುದೇ ಆರೋಪ ಮಾಡಿದ್ದಾರೆಂದು ನಿರ್ದಿಷ್ಟವಾಗಿ ಏನೂ ಹೇಳಿಲ್ಲ. ಹಾಗಾಗಿ ಅರ್ಜಿದಾರರು ಆರೋಪವನ್ನು ಎಸಗಿದ್ದಾರೆಂಬ ತೀರ್ಮಾನಕ್ಕೆ ಬರಲಾಗದು ಎಂದು ನ್ಯಾಯಪೀಠ ಹೇಳಿದೆ.

ಅಲ್ಲದೇ, ಈ ಪ್ರಕರಣದಲ್ಲಿ ಪತಿ 2018ರ ಡಿಸೆಂಬರ್ 17ರಂದು ಸೊಲ್ಲಾಪುರ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಸೇಡಿನಿಂದ ಪತ್ನಿ, ಪತಿ ಹಾಗೂ ಆತನ ಸಂಬಂಧಿಗಳೆಲ್ಲರ ವಿರುದ್ಧ ಕ್ರಿಮಿನಲ್‌ ದೂರು ದಾಖಲಿಸಿದ್ದಾರೆ, ಹಾಗಾಗಿ ಅದಕ್ಕೆ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ.

error: Content is protected !!