ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡಿ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಶುಕ್ರವಾರದ ಶುಭ ಸುದ್ದಿ ನೀಡಿದೆ.‌ ಆದರೆ ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ ರೈತರಿಗೆ ಶಾಕಿಂಗ್ ಸುದ್ದಿಯೊಂದನ್ನ ನೀಡಿದೆ. ರೈತರಿಗೆ ನೀಡ್ತಿದ್ದ ಹಾಲಿನ ಪ್ರೋತ್ಸಾಹ ಧನಕ್ಕೆ ಕತ್ತರಿ ಹಾಕಿದೆ.

ಹೌದು ಬೇಸಿಗೆಯಲ್ಲಿ ಹಸಿರು ಮೇವಿನ ಸಮಸ್ಯೆಯಿಂದ ಹಾಲಿನ ಉತ್ಪಾದನೆ ಕಮ್ಮಿಯಾಗಿತ್ತು.‌ ಹೀಗಾಗಿ ರೈತರಿಗೆ ನೆರವಾಗಲು ಬಮೂಲ್​ ಬೇಸಿಗೆ ಸಮಯದಲ್ಲಿ ಪ್ರತಿ ಲೀಟರ್ ಹಾಲಿಗೆ 2 ರೂಪಾಯಿ 85 ಪೈಸೆ ವಿಶೇಷ ಪ್ರೋತ್ಸಾಹ ಧನ ಘೋಷಣೆ ಮಾಡಿತ್ತು. ಏಪ್ರಿಲ್ 1 ರಿಂದ ಮೇ 31 ರವರೆಗೆ ವಿಶೇಷ ಪ್ರೋತ್ಸಾಹ ಧನ ನೀಡಿ ಆದೇಶ ಹೊರಡಿಸಿತ್ತು. ಆದ್ರೀಗ ಏಕಾಏಕಿ ಲೀಟರ್​ಗೆ 1 ರೂಪಾಯಿ 50 ಪೈಸೆ ಕಡಿತ ಮಾಡಿದೆ ಎಂದು ಬಮೂಲ್​ ಸಂಸ್ಥೆಯ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಈಗ ಉತ್ತಮ ಮಳೆಯಾಗಿ ಹಸಿರು ಮೇವು ಲಭ್ಯವಾಗ್ತಿದೆ. ಹೀಗಾಗಿ ಹಸಿರು ಮೇವಿನ ಸಮಸ್ಯೆ ಬಗೆಹರಿದಿರುವುದರಿಂದ ಹಾಲು ಉತ್ಪಾದನೆ ಹೆಚ್ಚಾಗಿದೆ. ಏಪ್ರಿಲ್ ತಿಂಗಳ ಆರಂಭದಲ್ಲಿ ಪ್ರತಿದಿನ 13.50 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗ್ತಿತ್ತು. ಆದರೆ ಈಗ ಪ್ರತಿದಿನ 16 ಲಕ್ಷ ಲೀಟರ್ ಉತ್ಪಾದನೆಯಾಗ್ತಿದೆ. ದಿನಕ್ಕೆ ಸುಮಾರು 2.50 ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಳವಾಗಿದೆ.‌ ಹೀಗಾಗಿ ಲೀಟರ್ ಗೆ ಏಕಾಏಕಿ 1.50 ರೂಪಾಯಿ ಕಡಿತ ಮಾಡಿದೆ. ಇನ್ನೂ, ಈಗಾಗಲೇ ರೈತರು ವರ್ಷದಿಂದ ವರ್ಷಕ್ಕೆ ಜಾನುವಾರುಗಳ ಸಾಕಾಣಿಕೆ ವೆಚ್ಚ ಹೆಚ್ಚಳವಾಗ್ತಿರೋದ್ರಿಂದ ಹಸುಸಾಕಾಣಿಕೆ ಬಗ್ಗೆ ಆಸಕ್ತಿ ಕಳೆದುಕೊಳ್ತಿದ್ದಾರೆ. ಜೊತೆಗೆ ಮೇವಿನ ಕೊರತೆ ಕೂಡ ಕಂಡು ಬರ್ತಿದೆ. ಈ ನಡುವೆ ಇದೀಗ ಬಮೂಲ್​ ಏಕಾಏಕಿಯಾಗಿ ಪ್ರೋತ್ಸಾಹ ಧನ ಕಡಿತ ಮಾಡಿದ್ದು, ಇದು ರೈತರಿಗೆ ಮತ್ತಷ್ಟು ನಿರಾಸೆ ಮೂಡಿಸಿದೆ.

error: Content is protected !!