ಅಲಬಾಹಾದ್(ಮೇ.31): ಗ್ಯಾನವಾಪಿ ಮಸೀದಿ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ಮಸೀದಿ ಆವರಣದಲ್ಲಿರುವ ಹಿಂದೂ ದೇವರ ಪೂಜೆಗೆ ಅವಕಾಶ ಕೋರಿದ್ದ ಅರ್ಜಿ ತಿರಸ್ಕರಿಸು ಮುಸ್ಲಿಂ ಸಮಿತಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದೆ. ಅಂಜುಮನ್ ಇಂತೆಜಮಿಯಾ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಳ್ಳಿ ಹಾಕಿದೆ.
ಈ ಮೂಲಕ ಹಿಂದೂ ಸಮುದಾಯಕ್ಕೆ ಅತೀ ದೊಡ್ಡ ಗೆಲುವು ಸಿಕ್ಕಿದೆ. ಅಲಹಾಬಾದ್ ಹೈಕೋರ್ಟ್ ಮುಸ್ಲಿಂ ಪರ ಅರ್ಜಿಯನ್ನು ತರಿಸ್ಕರಿಸಿದ ಬೆನ್ನಲ್ಲೇ ಹಿಂದೂಗಳ ಪರ ವಾದ ಮಂಡಿಸುತ್ತಿರುವ ವಕೀಲ ಹರಿ ಶಂಕರ್ ಜೈನ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಕಾಶಿ ವಿಶ್ವನಾಥ ಮಂದಿರ ಒಂದು ಭಾಗವನ್ನು ಮಸೀದಿಯನ್ನಾಗಿ ಮಾಡಲಾಗಿದೆ. ಆದರೆ ಇದೇ ಜಾಗದಲ್ಲಿ ಭವ್ಯ ಶಿವ ದೇವಸ್ಥಾನ ಕಟ್ಟುವ ದಿನ ದೂರವಿಲ್ಲ ಎಂದು ಹರಿ ಶಂಕರ್ ಜೈನ್ ಹೇಳಿದ್ದಾರೆ.ಕಾಶಿ ವಿಶ್ವನಾಥ ಮಂದಿರ ಒಂದು ಭಾಗ ಕೆಡವಿ ಅದೇ ಗೋಡೆಯಲ್ಲಿ ಗ್ಯಾನವಾಪಿ ಮಸೀದಿ ನಿರ್ಮಿಸಲಾಗಿದೆ. ಇದು ಸತ್ಯ. ಇದೀಗ ಈ ಆವರಣದಲ್ಲಿರುವ ಹಿಂದೂ ದೇವರ ಪೂಜೆಗೆ ಅವಕಾಶ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕೋರ್ಟ್ ಎತ್ತಿಹಿಡಿದೆ. ಇಷ್ಟೇ ಅಲ್ಲ ಇದರ ವಿರುದ್ಧ ಮುಸ್ಲಿಂ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಹೀಗಾಗಿ ಗ್ಯಾನವಾಪಿ ಮಸೀದಿ ಜಾಗದಲ್ಲೇ ಭವ್ಯ ಶಿವ ಮಂದಿರ ಕಟ್ಟುವ ದಿನ ದೂರವಿಲ್ಲ ಅನ್ನೋ ವಿಶ್ವಾಸವಿದೆ ಎಂದು ಹರಿ ಶಂಕರ್ ಜೈನ್ ಹೇಳಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಮುಸ್ಲಿಂ ಸಮಿತಿ ವಾರಣಾಸಿ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಈ ಅರ್ಜಿಯಲ್ಲಿ ಐವರು ಹಿಂದೂಗಳು ದೇವರ ಪೂಜೆಗೆ ಅವಕಾಶ ಕೋರಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಬಾರದು. ಯಥಾಸ್ಥಿತಿ ಕಾಪಾಡಲು ಹಿಂದೂಗಳ ಅರ್ಜಿಯನ್ನು ತಿರಸ್ಕರಿಸುವಂತೆ ಕೋರಲಾಗಿತ್ತು. ಆದರೆ 2022ರ ಸೆಪ್ಟೆಂಬರ್ 12 ರಂದು ವಾರಣಾಸಿ ಕೋರ್ಟ್, ಮುಸ್ಲಿಮರ ಈ ಅರ್ಜಿಯನ್ನು ತರಿಸ್ಕರಿಸಿತ್ತು.
ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲೇ ಇರುವ ಗ್ಯಾನವ್ಯಾಪಿ ಮಸೀದಿ ಹಿಂದೆ ದೇಗುಲವೇ ಆಗಿತ್ತು. ಆದರೆ 1969ರಲ್ಲಿ ದೇಗುಲವನ್ನು ಒಡೆದು ಔರಂಗಜೇಬ್ ಮಸೀದಿ ನಿರ್ಮಿಸಿದ್ದ. ಮಸೀದಿ ಆವರಣದ ಗೋಡೆಯಲ್ಲಿ ಶೃಂಗಾರ ಗೌರಿ ಮುಂತಾದ ಹಿಂದು ದೇವರ ವಿಗ್ರಹಗಳು ಈಗಲೂ ಇವೆ. 1947ಕ್ಕೂ ಮುನ್ನ ಹಾಗೂ ನಂತರ ಶೃಂಗಾರಗೌರಿಗೆ ಹಿಂದೂಗಳಿಂದ ನಿತ್ಯ ಪೂಜೆ ನಡೆಯುತ್ತಿತ್ತು. 1993ರ ನಂತರ ವರ್ಷಕ್ಕೆ ಒಮ್ಮೆ ಮಾತ್ರ ಪೂಜೆಗೆ ಅವಕಾಶ ಸಿಗುತ್ತಿದೆ. ನಿತ್ಯ ಪೂಜೆಗೆ ಅವಕಾಶ ಕೊಡಬೇಕು ಎಂದು ಐವರು ಹಿಂದು ಮಹಿಳೆಯರು ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಬಗ್ಗೆ ನ್ಯಾಯಾಲಯ ಸಮೀಕ್ಷೆ ನಡೆಸಲು ಸೂಚಿಸಿತ್ತು. ಮಸೀದಿಯಲ್ಲಿ ನಮಾಜ್ ಸಲ್ಲಿಸುವ ಮುನ್ನ ಮುಸಲ್ಮಾನರು ತಮ್ಮನ್ನು ಶುಚಿಗೊಳಿಸಿಕೊಳ್ಳುವ ನೀರಿನ ತೊಟ್ಟಿ’ವಜೂಖಾನಾ’ ಬಳಿ ಸಮೀಕ್ಷೆ ವೇಳೆ ಶಿವಲಿಂಗ ಪತ್ತೆಯಾಗಿದೆ ಎಂದು ಅರ್ಜಿದಾರರು ಹೇಳಿದ್ದರು. ಆದರೆ ಅದು ಶಿವಲಿಂಗವಲ್ಲ, ನೀರಿನ ಚಿಲುಮೆಯ ಒಂದು ತುಂಡು ಎಂದು ಮುಸ್ಲಿಮರು ವಾದಿಸಿದ್ದರು. ಈ ಮಧ್ಯೆ ಶಿವಲಿಂಗ ಪತ್ತೆಯಾದ ಸ್ಥಳ ರಕ್ಷಣೆಗೆ ಸುಪ್ರೀಂಕೋರ್ಚ್ ಸೂಚಿಸಿತ್ತು.