ಗಂಗಾವತಿ: ‘ಕಾರ್ಮಿಕರ ಭವಿಷ್ಯಕ್ಕೆ ಕುತ್ತಾಗಿರುವ ಕೃಷಿ ಮತ್ತು ಎಪಿಎಂಸಿ ಕಾಯ್ದೆಗಳನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆಯಬೇಕು ಎಂದು ಹಮಾಲಿ ಕಾರ್ಮಿಕ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಒತ್ತಾಯಿಸಿದ್ದಾರೆ.
ನಗರದ ಎಪಿಎಂಸಿ ಗಂಜ್ ಎರಡನೇ ಗೇಟ್ ಬಳಿ ಚನ್ನ ಬಸವಸ್ವಾಮಿ ಗಂಜ್ ಹಮಾಲಿ ಕಾರ್ಮಿಕರ ಸಂಘದಿಂದ ಬುಧವಾರ ನಡೆದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ತಮ್ಮ ಆಡಳಿತದಲ್ಲಿ ಕಾರ್ಮಿಕ ಸಂಘಟನೆಗಳನ್ನ ಹತ್ತಿಕ್ಕಿದ್ದೆ ಹೆಚ್ಚು. ಕೃಷಿ, ಎಪಿಎಂಸಿ ಕಾಯ್ದೆ ಜಾರಿ, ರೈಲ್ವೆ ಖಾಸಗಿಕರಣ, ಕರ್ನಾಟಕದ ಬ್ಯಾಂಕ್‌ಗಳನ್ನು ಇತರೆ ಬ್ಯಾಂಕ್‌ಗಳ ಜತೆ ಸಂಯೋಜನೆ, ಶ್ರೀಮಂತರಿಗೆ ಕೋಟಿಗಳಲ್ಲಿ ಸಾಲ, ಬೆಲೆ ಏರಿಕೆ, ಎನ್‌ಇಪಿ ಶಿಕ್ಷಣ ತಂದು ರಾಜ್ಯದಲ್ಲಿ ಅವಾಂತರಗಳನ್ನ ಸೃಷ್ಟಿಸಿದ್ದಾರೆ ಎಂದು ದೂರಿದರು.
ಇನ್ನೂ ಎಪಿಎಂಸಿ ಕಾಯ್ದೆ ರದ್ದಾಗದಿದ್ದರೆ, ಮುಂದೆ ಗಂಗಾವತಿ ಎಪಿಎಂಸಿಗೆ ಅನುದಾನ ಬರಲ್ಲ. ಶಿರುಗುಪ್ಪ, ಗಂಗಾವತಿ, ಸಿಂಧನೂರು ನಗರದಲ್ಲಿನ ಎಲ್ಲ ಅಕ್ಕಿಗಿರಣಿಗಳು ಬಂದ್ ಆಗುತ್ತವೆ. ಮುಂದೆ ರೈತ ಬೆಳೆದ ಬೆಳೆ ನೇರವಾಗಿ ಖಾಸಗಿ ಒಡೆತನದ ಕಂಪನಿಗಳಿಗೆ ಹೋಗಲಿವೆ. ಇದರಿಂದ ಕಾರ್ಮಿಕರಿಗೆ ಕೆಲಸವಿಲ್ಲದಂತಾಗುತ್ತದೆ. ಹಾಗಾಗಿ ಎಪಿಎಂಸಿ ಕಾಯ್ದೆ ರದ್ದಾಗಬೇಕು ಎಂದರು.
ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್ ಮಾತನಾಡಿ, ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಸ್ಪೃಶ್ಯ ಜಾತಿ ಮಹಿಳೆ ಎಂಬ ಕಾರಣಕ್ಕೆ ದೆಹಲಿಯಲ್ಲಿನ ನಿರ್ಮಾಣವಾದ ನೂತನ ಪಾರ್ಲಿಮೆಂಟ್ ಉದ್ಘಾಟನೆಗೆ ಪ್ರಧಾನಿ ಮೋದಿ ಆಹ್ವಾನಿಸಿಲ್ಲ ಎಂದು ದೂರಿದರು.
ಈ ವೇಳೆ ಹಮಾಲಿ ಕಾರ್ಮಿಕರನ್ನ ಸನ್ಮಾನಿಸಲಾಯಿತು. ಗಂಜ್ ಹಮಾಲಿ ಕಾರ್ಮಿಕರ ಕಾರ್ಯದರ್ಶಿ ಇಬ್ರಾಹಿಂ ಸಾಬ, ಉಪಾಧ್ಯಕ್ಷ ಮಂಜುನಾಥ ನಾಯಕ, ಎ.ರಮೇಶ, ಹನುಮಂತಪ್ಪ. ಟಿ, ನಬಿಸಾಬ, ಕೃಷ್ಣಪ್ಪ, ದೇವಪ್ಪ ,ಮಲ್ಲಪ್ಪ ಕನಕಗಿರಿ, ಮಂಜುನಾಥ ಡಗ್ಗಿ ಇದ್ದರು.