ತುಮಕೂರು: ‘ದೊಡ್ಡ ದೊಡ್ಡ ಜನರು, ಬಿಲ್ಡರ್ಸ್ ಅತಿಕ್ರಮಣ ಮಾಡಿಕೊಂಡಿರುವ ಅರಣ್ಯ ಪ್ರದೇಶವನ್ನು ತೆರವು ಮಾಡಲಾಗುವುದು’ ಎಂದು ಅರಣ್ಯ, ಜೈವಿಕ ಹಾಗೂ ಪರಿಸರ ಸಚಿವ ಈಶ್ವರ್ ಖಂಡ್ರೆ ಮಂಗಳವಾರ ತಿಳಿಸಿದರು.
ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ದೊಡ್ಡವರು ತಮ್ಮ ಸ್ವಾರ್ಥಕ್ಕಾಗಿ ಅರಣ್ಯ ಒತ್ತುವರಿ ಮಾಡಿಕೊಂಡಿದ್ದಾರೆ.
ಅದನ್ನು ತೆರವುಗೊಳಿಸಲಾಗುತ್ತದೆ’ ಎಂದರು.
ಅರಣ್ಯ ಇಲಾಖೆಯ ಕೆಲವು ಅಧಿಕಾರಿಗಳ ತಪ್ಪಿನಿಂದಾಗಿ ಬಡ ಜನರು ಅರಣ್ಯ ಪ್ರದೇಶಗಳಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಕೆಲವು ಕಡೆಗಳಲ್ಲಿ ಸುಮಾರು 50 ವರ್ಷಗಳಿಂದ ವಾಸವಿದ್ದಾರೆ. ಅಂತಹ ಪ್ರದೇಶಗಳನ್ನು ಸರ್ವೇ ಮಾಡದ ಕಾರಣ ಅರಣ್ಯ ಪ್ರದೇಶ ಎಂದು ದಾಖಲೆಯಲ್ಲಿ ತೋರಿಸುತ್ತಿದೆ. ಇದರಿಂದ ಬಡವರಿಗೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.