ಬೆಂಗಳೂರು : ಇಂದು (ಮೇ 29) ನಟ, ದಿವಂಗತ ಅಂಬರೀಶ್ ಅವರ ಜನ್ಮದಿನ ಹಿನ್ನೆಲೆ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ.
ಈ ನಡುವೆ ಮಂಡ್ಯ ಸಂಸದೆ ಸುಮಲತಾ ಪತಿ ಅಂಬರೀಶ್ ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ಫೋಟೊಗಳನ್ನು ಪ್ರಕಟಿಸಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
”ನಿಮ್ಮ ಬಾಲ್ಯದ ದಿನಗಳನ್ನು ಆಗಾಗ್ಗೆ ಹೇಳುತ್ತಿದ್ದಿರಿ. ಬಾಲ್ಯದ ಆ ತುಂಟತನ ಅದು ನಿಮ್ಮಲ್ಲಿ ಕೊನೆವರೆಗೂ ಇತ್ತು. ಹಾಗಾಗಿ ನಿಮ್ಮ ಹುಟ್ಟು ಹಬ್ಬ ಅದೊಂದು ಸಡಗರವಾಗಿರುತ್ತಿತ್ತು. ಅದು ನಮಗಷ್ಟೇ ಅಲ್ಲ, ಅಭಿಮಾನಿಗಳ ಪಾಲಿಗೆ ನಿಜವಾದ ಹಬ್ಬ ಭೌತಿಕವಾಗಿ ನಮ್ಮೊಂದಿಗೆ ನೀವು ಇದ್ದಿದ್ದರೆ, ಇಂದು 71ನೇ ವರ್ಷದ ಹುಟ್ಟು ಹಬ್ಬವನ್ನೂ ಅಭಿಮಾನಿಗಳ ಜೊತೆಯಾಗಿ ಮತ್ತಷ್ಟು ಅದ್ಧೂರಿಯಾಗಿ ಆಚರಿಸುತ್ತಿದ್ದೆವು. ಮನೆ ಮುಂದೆ ಜನಸಾಗರ, ನಿಮ್ಮ ಆರ್ಭಟ, ಹಾಸ್ಯ ಪ್ರಜ್ಞೆಯ ಮಾತು, ರಾತ್ರಿ ಇಡೀ ಕಾಯುತ್ತಾ ನಿಂತಿದ್ದ ಅಭಿಮಾನಿಗಳ ಘೋಷಣೆ ಇನ್ನೂ ಹಾಗೆಯೇ ಇದೆ. ಇವತ್ತೂ ಕೂಡ ಅವೆಲ್ಲವೂ ನಿಮಗೆ ಶುಭಾಶಯ ಹೇಳುತ್ತಿವೆ. ಸ್ವೀಕರಿಸಿ. ಹ್ಯಾಪಿ ಬರ್ತಡೇ ಮೈ ಅಂಬಿ. ಜತೆಗಿರದ ಜೀವ ಎಂದೆಂದಿಗೂ ಜೀವಂತ” ಎಂದು ಸುಮಲತಾ ಬರೆದುಕೊಂಡಿದ್ದಾರೆ.
ಇನ್ನು ನಟ ದರ್ಶನ್ ಟ್ವೀಟ್ ಮಾಡಿ, ”ನಮ್ಮೆಲ್ಲರ ಪ್ರೀತಿಯ ಮಂಡ್ಯದ ಗಂಡು ಅಂಬಿ ಅಪ್ಪಾಜಿ ರವರ ಜನ್ಮದಿನಾಚರಣೆಯನ್ನು ಎಂದು ಮರೆಯಲಾಗದು. ದೈಹಿಕವಾಗಿ ಅಗಲಿದರೂ ಮಾನಸಿಕವಾಗಿ ನಮ್ಮ ಮನಸ್ಸಿನಲ್ಲಿ ಸದಾ ಜೀವಂತವಾಗಿರುತ್ತಾರೆ. ಅವರ ನೇರ ನುಡಿ ಹಾಗೂ ಕಾಪಾಡಿಕೊಂಡು ಬಂದ ಪ್ರೀತಿ-ಆದರ್ಶಗಳು ಇಂದಿನ ಪೀಳಿಗೆಗೂ ಮಾದರಿ. We all miss him” ಎಂದು ಬರೆದುಕೊಂಡಿದ್ದಾರೆ.