ಕುಷ್ಟಗಿ: ತಾಲ್ಲೂಕಿನ ಮೆಣೆದಾಳ ಸೀಮಾಂತರದ ಅರಣ್ಯ ಭೂಮಿಯಲ್ಲಿ ಅನೇಕ ದಶಕಗಳಿಂದ ಸಾಗುವಳಿ ಮಾಡುವ ಮೂಲಕ ಕೃಷಿ ಬದುಕು ಕಟ್ಟಿಕೊಂಡಿರುವ ಬಡ ಕುಟುಂಬಗಳನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸುತ್ತಿದೆ ಎಂದು ಕರ್ನಾಟಕ ರೈತ ಸಂಘಟನೆ ಆರೋಪಿಸಿದೆ.
ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಡಿ.ಎಚ್. ಪೂಜಾರ ಮಾತನಾಡಿ, ಇತರರು ಗ್ರಾಮದ ಸರ್ವೇ ಸಂ. 74 ಮತ್ತು 76ರಲ್ಲಿ ಹುಸೇನಪ್ಪ ವಾಲ್ಮೀಕಿ, ಮಹದೇವಪ್ಪ ಕುರುಬರ, ಶಾಂತಮ್ಮ ಕುರುಬರ ಎಂಬ ರೈತ ಕುಟುಂಬಗಳು ಜಮೀನಿನಲ್ಲಿ ಕೃಷಿ ಚಟುವಟಿಕೆಗಳು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಅರಣ್ಯ ಇಲಾಖೆ ಅವರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು ಶಾಸಕ ದೊಡ್ಡನಗೌಡ ಪಾಟೀಲ ಮತ್ತು ತಹಶೀಲ್ದಾರ್ ಈ ವಿಷಯದಲ್ಲಿ ಮುತುವರ್ಜಿ ವಹಿಸಿ ಬಡವರಿಗೆ ನ್ಯಾಯದೊರಕಿಸಿಕೊಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
1954 ರಿಂದ 1980ರ ವರೆಗಿನ ಪಹಣಿಯಲ್ಲಿ ಸರ್ಕಾರಿ ಕಾರೇಜ ಖಾತಾ ಪಡಾ ಎಂದು ಇದ್ದು ಸ.ನಂ.74, 76 ಭೂಮಿಯನ್ನು ತಲಾ ನಾಲ್ಕು ಎಕರೆಯಂತೆ ಸುಮಾರು 6 ದಶಕಗಳಿಂದಲೂ ಸಾಗುವಳಿ ಮಾಡಲಾಗುತ್ತಿದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ. ಈ ಕಾರಣಕ್ಕೆ 2013ರಲ್ಲಿ ಸೆಕ್ಷನ್ 4ರ ಅಧಿಸೂಚನೆ ಮೇರೆಗೆ ಪಹಣಿಯಲ್ಲಿ ಸರ್ಕಾರಿ ಅರಣ್ಯ ಎಂದು ಸೇರ್ಪಡೆ ಮಾಡಲಾಗಿದೆ. ಈ ಕುರಿತು ತಹಶೀಲ್ದಾರ್ ಅವರ ಗಮನ ಸೆಳೆದ ನಂತರ ಸಾಗುವಳಿಗೆ ತೊಂದರೆ ಕೊಡದಂತೆ ಅರಣ್ಯ ಇಲಾಖೆ ಅಧಿಕಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ಜಮೀನಿನಲ್ಲಿ ಸಾಗುವಳಿ ಮಾಡಲು ಅಡ್ಡಿಪಡಿಸುತ್ತಿದ್ದಾರೆ ಎಂದರು. 3 ಎಕರೆಗಿಂತ ಕಡಿಮೆ ಸಾಗುವಳಿ ಮಾಡುವ ಜನರನ್ನು ಒಕ್ಕಲೆಬ್ಬಿಸಬಾರದು ಎಂದು 2014 ರಲ್ಲಿ ಹೈಕೋರ್ಟ್ ಸ್ಪಷ್ಟಪಡಿಸಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಸಣ್ಣ ರೈತರನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
2018ರಿಂದ ಭೂ ಮಂಜೂರಿಗೆ ಅರ್ಜಿ ಹಾಕುತ್ತ ಬಂದರೂ ತಾಲ್ಲೂಕಿನ ಅಧಿಕಾರಿಗಳು ಅರ್ಜಿ ವಿಲೇವಾರಿ ಮಾಡುತ್ತಿಲ್ಲ. ಈ ವಿಷಯ ಕುರಿತು ಸಭೆ ನಡೆಸುವುದಕ್ಕೆ ತಹಶೀಲ್ದಾರ್ ಹಿಂದೇಟು ಹಾಕುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಜಿಲ್ಲಾಧಿಕಾರಿ ಈ ಕುರಿತು ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿ ಸಾಗುವಳಿಗೆ ರೈತರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲದಿದ್ದರೆ, ಜೂನ್ 1ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ದಿಷ್ಟ ಧರಣಿ ನಡೆಸುವುದಾಗಿ ಹೇಳಿದರು.
ಮುಖಂಡ ಆನಂದ ಭಂಡಾರಿ, ರೈತ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲೇಶಗೌಡ, ಬಸವರಾಜ ನೆರೇಗಲ್, ನಾಗಪ್ಪ, ಹುಸೇನಪ್ಪ, ಶಾಂತಮ್ಮ, ಹೊಳಿಯಮ್ಮ. ನಿರುಪಾದೆಪ್ಪ ಬನ್ನಟ್ಟಿ ಇದ್ದರು.