
ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ( Congress ) ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೇ, ಐದು ಗ್ಯಾರಂಟಿ ಯೋಜನಗಳನ್ನು ಜಾರಿಗೆ ತರುವುದಾಗಿ ಪ್ರಣಾಣಿಕೆಯಲ್ಲಿ ಭರವಸೆ ನೀಡಿತ್ತು. ಇದೀಗ ಇಂದು ಸಿಎಂ ಆಗಿ ಸಿದ್ಧರಾಮಯ್ಯ ( CM Siddaramaiah ), ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ ( DCM DK Shivakumar ) ಹಾಗೂ 8 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಈ ಬೆನ್ನಲ್ಲೇ ಮೊದಲ ಸಚಿವ ಸಂಪುಟ ಸಭೆ ನಡೆಸಿ, 5 ಗ್ಯಾರಂಟಿ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ ಸೂಚಿಸಲಾಗಿತ್ತು. ಈಗ ಆ ಪಂಚ ಗ್ಯಾರಂಟಿ ಯೋಜನೆಗಳಿಗೆ ತಾತ್ವಿಕ ಅನುಮೋದನೆ ನೀಡಿ, ಅಧಿಕೃತವಾಗಿ ರಾಜ್ಯ ಸರ್ಕಾರದ ( Karnataka Government ) ಆದೇಶಿಸಿದೆ.
ಹೌದು ಕಾಂಗ್ರೆಸ್ ಪಕ್ಷ ಘೋಷಿಸಿದಂತೆ ಇಂದು ಮೊದಲ ಸಚಿವ ಸಂಪುಟ ಸಭೆಯಲ್ಲೇ ( Karnataka Cabinet Meeting ) ಮುಖ್ಯಮಂತ್ರಿ ಸಿದ್ಧರಾಮಯ್ಯ ಐದು ಗ್ಯಾರಂಟಿ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ ನೀಡಿದ್ದರು. ಗೃಹ ಲಕ್ಷ್ಮಿಯಡಿ ಪ್ರತಿ ಮನೆಯೊಡತಿಗೆ ತಿಂಗಳಿಗೆ 2,000, ಗೃಹ ಜ್ಯೋತಿಯಡಿ 200 ಯೂನಿಟ್ ಪ್ರತಿ ತಿಂಗಳು ಉಚಿತ ವಿದ್ಯುತ್, ಯುವನಿಧಿ ಯೋಜನೆಯಡಿ ಪ್ರತಿ ತಿಂಗಳು ನಿರುದ್ಯೋಗಿ ಪದವೀಧರರಿಗೆ 3,000 ಹಾಗೂ ಡಿಪ್ಲೋಮಾ ಪದವೀಧರರಿಗೆ ರೂ.1,500 ನೀಡುವ ಭರವಸೆ ನೀಡಿತ್ತು. ಇದಲ್ಲದೇ ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ಪ್ರತಿ ತಿಂಗಳು ತಲಾ 10 ಕೆಜಿ ಅಕ್ಕಿ ವಿತರಿಸುವುದಾಗಿ, ಮಹಿಳೆಯರಿಗೆ ಉಚಿತ ಪ್ರಯಾಣ ನಮ್ಮ ಪ್ರಮಾಣ ಗ್ಯಾರಂಟಿಯಡಿ ಸಾರಿಗೆ ಬಸ್ ನಲ್ಲಿ ಉಚಿತ ಪ್ರಯಾಣ ಘೋಷಿಸಿತ್ತು. ಈ ಐದು ಗ್ಯಾರಂಟಿಗಳಿಗೆ ತಾತ್ವಿಕ ಅನುಮೋದನೆ ನೀಡಿ ಆದೇಶಿಸಲಾಗಿದೆ.
ರಾಜ್ಯದ ಜನತೆಗೆ ಗುಡ್ ನ್ಯೂಸ್ ಗೃಹ ಜ್ಯೋತಿ ಯೋಜನೆ ಜಾರಿ, ಇನ್ಮುಂದೆ ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಉಚಿತ

ಈ ಕುರಿತಂತೆ ಇಂಧನ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ನಡವಾಳಿ ಹೊರಡಿಸಿದ್ದಾರೆ. ಮೂಲಭೂತ ಸೌಕರ್ಯಗಳಲ್ಲಿ ಒಂದಾದ ವಿದ್ಯುತ್ ಚಕ್ತಿಯನ್ನು ಉಚಿತವಾಗಿ ರಾಜ್ಯದ ನಾಗರೀಕರಿಗೆ ಒದಗಿಸುವ ಪ್ರಸ್ತಾವನೆಯು ಸರ್ಕಾರದ ಹಂತದಲ್ಲಿದ್ದು, ಈ ಕುರಿತಂತೆ ಪರಿಶೀಲಿಸಲಾಗಿ, ರಾಜ್ಯದ ನಾಗರೀಕರ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗೃಹ ಬಳಕೆಗಾಗಿ ಉಪಯೋಗಿಸುವ 200 ಯೂನಿಟ್ ಗಳವರೆಗಿನ ವಿದ್ಯುತ್ ಶಕ್ತಿಯನ್ನು ಉಚಿತವಾಗಿ ಒದಗಿಸಲು ಸರ್ಕಾರವು ಉದ್ದೇಶಿಸಿರುತ್ತದೆ ಎಂದಿದ್ದಾರೆ.
ಸರ್ಕಾರವು ಪ್ರತಿ ಮನೆಗೆ ಪ್ರತಿ ತಿಂಗಳು 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಶಕ್ತಿಯನ್ನು ಒದಗಿಸುವ ಗೃಹ ಜ್ಯೋತಿ ಯೋಜನೆಯನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಿರುತ್ತದೆ. ಈ ಹಿನ್ನಲೆಯಲ್ಲಿ ಗೃಹ ಜ್ಯೋತಿ ಯೋಜನೆಯನ್ನು ಅನುಷ್ಠಾನಗೊಳಿಸಲು ತಾತ್ವಿಕ ಅನುಮೋದನೆ ನೀಡಿದೆ ಎಂದಿದ್ದಾರೆ.
ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಅನುಸರಿಸಬೇಕಾದ ಕಾರ್ಯವಿಧಾನ ಮತ್ತು ಪಾಲಿಸಬೇಕಾದ ಷರತ್ತು, ನಿಬಂಧನೆಗಳ ಬಗ್ಗೆ ಸರ್ಕಾರದಿಂದ ಪ್ರತ್ಯೇಕವಾಗಿ ಆದೇಶ ಹೊರಡಿಸಲಾಗುವುದು ಎಂದಿದ್ದಾರೆ.
ರಾಜ್ಯ ಸರ್ಕಾರ’ದಿಂದ ‘ಅನ್ನಭಾಗ್ಯ ಯೋಜನೆ’ಯಡಿ ಅಕ್ಕಿ 5 ಕೆಜಿಯಿಂದ 10 ಕೆಜಿ ಹೆಚ್ಚಿಸಿ ಅಧಿಕೃತ ಆದೇಶ

ಈ ಕುರಿತಂತೆ ಆಹಾರ, ನಾಗರೀಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ದಿನಾಂಕ 20-05-2023ರಂದು ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಸಚಿವ ಸಂಪುಟವು, ಅನ್ನಭಾಗ್ಯ ಯೋಜನೆಯಡಿ ಆದ್ಯತಾ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೆ ರಾಷ್ಟ್ರೀ ಭದ್ರತಾ ಕಾಯ್ದೆಯಡಿ ವಿತರಿಸಲಾಗುತ್ತಿರುವ ಆಹಾರ ಧಾನ್ಯಗಳನ್ನು 5 ಕೆಜಿಗಳಿಂದ 10 ಕೆಜಿಗೆ ಹೆಚ್ಚಿಸಲು ನಿರ್ಧರಿಸಿರುತ್ತದೆ ಎಂದಿದ್ದಾರೆ.
ಈ ಅಂಶಗಳ ಹಿನ್ನಲೆಯಲ್ಲಿ ಪ್ರಸ್ತುತ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗಿರುವ ಆದ್ಯತಾ ಮತ್ತು ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ಒಟ್ಟು 10 ಕೆಜಿ ಆಹಾರ ಧಾನ್ಯವನ್ನು ಉಚಿತವಾಗಿ ವಿತರಿಸಲು ತಾತ್ವಿಕವಾಗಿ ಆದೇಶಿಸಲಾಗಿದೆ. ಆಹಾರ ಧಾನ್ಯಗಳ ಹಂಚಿಕೆಗೆ ಸಂಬಂಧಿಸಿದಂತೆ ವಿವರವಾದ ಮಾರ್ಗಸೂಚಿಗಳನ್ನು ತದನಂತರ ಹೊರಡಿಸಲಾಗುವುದು ಎಂದಿದ್ದಾರೆ.
ರಾಜ್ಯದ ‘ಯಜಮಾನಿ ಮಹಿಳೆ’ಯರಿಗೆ ಭರ್ಜರಿ ಸಿಹಿಸುದ್ದಿ: ‘ಗೃಹಲಕ್ಷ್ಮಿ ಯೋಜನೆ’ ಜಾರಿಗೊಳಿಸಿ ಸರ್ಕಾರ ಅಧಿಕೃತ ಆದೇಶ

ಈ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ನಡವಳಿಗಳನ್ನು ಹೊರಡಿಸಲಾಗಿದೆ. ಅದರಲ್ಲಿ ಕರ್ನಾಟಕ ರಾಜ್ಯದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2,000 ಗಳನ್ನು ನೀಡುವ ಗೃಹ ಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲು ತಾತ್ವಿಕ ಅನುಮೋದನೆ ನೀಡಲಾಗಿದೆ ಎಂದಿದ್ದಾರೆ.
ಗೃಹ ಲಕ್ಷ್ಮಿ ಯೋಜನೆಯ ವಿವರವಾದ ರೂಪರೇಷೆ ಹಾಗೂ ಮಾರ್ಗಸೂಚಿಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು. ಈ ಆದೇಶವನ್ನು ದಿನಾಂಕ 20-05-2023ರಂದು ನಡೆದ ಸಚಿವ ಸಂಪುಟದ ತೀರ್ಮಾನದಂತೆ ಹೊರಡಿಸಲಾಗಿದೆ ಎಂದಿದ್ದಾರೆ.
ನಿರುದ್ಯೋಗಿ ಡಿಪ್ಲೋಮಾ, ಪದವೀಧರ’ರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರ ‘ಯುವನಿಧಿ ಯೋಜನೆ’ ಜಾರಿಗೊಳಿಸಿ ಅಧಿಕೃತ ಆದೇಶ

ಈ ಕುರಿತಂತೆ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ನಡವಳಿಗಳನ್ನು ಹೊರಡಿಸಿದ್ದಾರೆ. ರಾಜ್ಯದಲ್ಲಿ ಪದವೀಧರ ನಿರುದ್ಯೋಗಿಗಳಿಗೆ ಮತ್ತು ಡಿಪ್ಲೋಮಾ ಪಾಸಾದ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆಯನ್ನು ನೀಡುವ ಸಂಬಂಧ ಯುವ ನಿಧಿ ಯೋಜನೆಯನ್ನು ಅನುಷ್ಠಾನಗೊಳಿಸಿ, ದಿನಾಂಕ 20-05-2023ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದಿದ್ದಾರೆ.
ರಾಜ್ಯದಲ್ಲಿ 2022-23ರಲ್ಲಿ ತೇರ್ಗಡೆಯಾದ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ರೂ.3,000 ಹಾಗೂ ಡಿಪ್ಲೋಮಾ ಹೊಂದಿದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ರೂ.1,500 ರಂತೆ ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರವು ತಾತ್ವಿಕ ಅನುಮೋದನೆ ನೀಡಿ ಆದೇಶಿಸಿದೆ ಎಂದು ತಿಳಿಸಿದ್ದಾರೆ.
ನಿರುದ್ಯೋಗ ಭತ್ಯೆಯನ್ನು ಉದ್ಯೋಗ ದೊರಕುವವರೆಗೆ ಅಥವಾ ಗರಿಷ್ಠ ಎರಡು ವರ್ಷಗಳ ಅವಧಿಗೆ ನೀಡಲಾಗುವುದು. ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ವಿವರವಾದ ಷರತ್ತು ಮತ್ತು ನಿಬಂಧನೆಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು ಎಂದಿದ್ದಾರೆ.
ರಾಜ್ಯದ ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ: ಉಚಿತ ಪ್ರಯಾಣ ನಮ್ಮ ಪ್ರಮಾಣ ಯೋಜನೆಯಡಿ ಇನ್ಮುಂದೆ ‘ಸಾರಿಗೆ ಬಸ್’ನಲ್ಲಿ ಉಚಿತ ಪ್ರಯಾಣ, ಸರ್ಕಾರ ಅಧಿಕೃತ ಆದೇಶ

ಈ ಬಗ್ಗೆ ಇಂದು ಸಾರಿಗೆ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ನಡವಳಿಗಳನ್ನು ಹೊರಡಿಸಿದ್ದು, ರಾಜ್ಯದ ಎಲ್ಲಾ ಮಹಿಳೆಯರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ನೀಡುವ ಸಂಬಂಧ ಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಲು ದಿನಾಂಕ 20-05-2023ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದಿದ್ದಾರೆ.
ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ರಾಜ್ಯದ ಎಲ್ಲಾ ಮಹಿಳೆಯರು ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಇವುಗಳ ಸಾಮಾನ್ಯ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಸೌಲಭ್ಯ ಒದಗಿಸಲು ತಾತ್ವಿಕ ಅನುಮೋದನೆ ನೀಡಿ ಆದೇಶಿದೆ ಎಂದಿದ್ದಾರೆ.
ಈ ಯೋಜನೆಯ ಅನುಷ್ಠಾನದ ಬಗ್ಗೆ ವಿವರವಾದ ಷರತ್ತು ಮತ್ತು ನಿಬಂಧನೆಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು ಎಂದು ಹೇಳಿದ್ದಾರೆ.