ಕೋಪ್ಪಳ,ಮೇ 16: ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಏಳ್ಗೆಗೆ ಶ್ರಮಿಸಿದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ವಾಲ್ಮೀಕಿ ನಾಯಕ ಸಮಾಜದ ಮುಖಂಡರಾಗಿರುವ ಸತೀಶ ಜಾರಕಿಹೊಳಿಯವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಕೊಪ್ಪಳ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಟಿ ರತ್ನಾಕರ ಆಗ್ರಹಿಸಿದ್ದಾರೆ.

ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಸತೀಶ ಜಾರಕಿಹೊಳಿ ನಾನು ಸಿಎಂ ಆಕಾಂಕ್ಷಿ ಅಲ್ಲ ಎಂದು ಹೇಳಿರುವುದರಿಂದ ನಾಯಕ ಸಮಾಜಕ್ಕೆ ಡಿಸಿಎಂ ಹುದ್ದೆ ನೀಡಬೇಕೆಂದು ಅವರು ಆಗ್ರಹಿಸಿದರು.

ರಾಜ್ಯದಲ್ಲಿ ಪರಿಶಿಷ್ಠ ವರ್ಗಕ್ಕೆ 15 ಸ್ಥಾನ ಮೀಸಲಿಡಲಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮೀಸಲು ಕ್ಷೇತ್ರದಿಂದ 14 ಹಾಗು ಕೆ ಎನ್ ರಾಜಣ್ಣ ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾಗಿರುವ ನಾಯಕ ಸಮಾಜದ ಮುಖಂಡರಾಗಿದ್ದಾರೆ. ಇದು ಹಿಂದಿನ ಸರಕಾರ ವಾಲ್ಮೀಕಿ ನಾಯಕ ಸಮಾಜಕ್ಕೆ ಕೇವಲ ಕಣ್ಣೊರೆಸುವ ತಂತ್ರ ಮಾಡಿರುವುದಕ್ಕೆ ದಿಕ್ಸೂಚಿಯಾಗಿದೆ ಎಂದರು.

ರಾಜ್ಯದಲ್ಲಿ ಐದು ಜನರಿಗೆ ಒಬ್ಬರಂತೆ ಸಚಿವರನ್ನಾಗಿ ಮಾಡಲು ಅವಕಾಶವಿದೆ.ಕಾಂಗ್ರೆಸ್ ಪಕ್ಷದಿಂದ ನಾಯಕ ಸಮಾಜದವರು 15 ಜನರು ಆಯ್ಕೆಯಾಗಿದ್ದಾರೆ. ಈ ಕಾರಣಕ್ಕಾಗಿ ನಾಯಕ ಸಮಾಜದವರಲ್ಲಿ ಮೂರು ಜನರನ್ನು ಸಚಿವರನ್ನಾಗಿ ಮಾಡಬೇಕೆಂದು ಆಗ್ರಹಿಸಿದರು.

ಸತೀಶ ಜಾರಕಿಹೊಳಿ ನಾಯಕ ಸಮಾಜ ಸೇರಿದಂತೆ ಎಲ್ಲಾ ವರ್ಗದ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಾಮಣ್ಣ ಕಲ್ಲಣ್ಣನವರ, ಕೆ ಎನ್ ಪಾಟೀಲ, ಮಾಲತಿ ನಾಯಕ ಹಾಗು ಮಂಜುನಾಥ ಗೊಂಡಬಾಳ ಇದ್ದರು.

error: Content is protected !!